08 ಮಾರ್ಚ್ 2023, ಮಂಗಳೂರು: ಕಾಡು ಹಕ್ಕಿಯ ಪಾಡು …… ಈ ಹುಡುಗಿಗೆ ಏನೆಲ್ಲಾ ಗೊತ್ತು ? ಬಹುಶಃ 12 ವರ್ಷಗಳ ಮೊದಲು ನಾನು ಕೊಪ್ಪದಲ್ಲಿ ಮಕ್ಕಳ ಶಿಬಿರದ ಆಯೋಜನೆಯ ಯೋಚನೆಯಲ್ಲಿದ್ದೆ. ಆಗ ನೆನಪಾದವಳು ಅಕ್ಷತಾ. ಆ ಕಾಲಕ್ಕೆ ನೆನಪಿನ ಶಕ್ತಿಯ ಕಾರಣಕ್ಕೆ “ವಂಡರ್ ಕಿಡ್” ಎಂದೇ ಸುದ್ಧಿಯಲ್ಲಿದ್ದ ಅಕ್ಷತಾಳನ್ನು “ನಮ್ಮೂರಲ್ಲಿ ಮಕ್ಕಳಿಗೊಂದು ಕ್ಯಾಂಪ್ ಮಾಡ್ಲಿಕ್ಕಿದೆ, ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕು” ಎಂದು ಕೇಳಿದ್ದೆ. ಕ್ಯಾಂಪ್ ಚಂದ ಮಾಡುವ ಸರ್ ಎಂದು ಬಂದವಳು ಇಡೀ ಕ್ಯಾಂಪ್ ನ ಜವಾಬ್ದಾರಿ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಳು. ಹಾಡು, ನೃತ್ಯ, ನಾಟಕ, ಮೆಮೊರಿ, ಯಕ್ಷಗಾನ ಅಬ್ಬಾ ಎಂಥ ಪ್ರತಿಭೆ ! ಎಂದು ಕಣ್ಣರಳಿಸಿ ನೋಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಆಕೆಯನ್ನು ಗಮನಿದ್ದೇನೆ.
ಸದಾ ಏನಾದರೊಂದು ಹುಡುಕಾಟಗಳಲ್ಲಿ ವ್ಯಸ್ತಳಾಗಿರುವ ಅಕ್ಷತಾ ಉತ್ಸಾಹದ ಚಿಲುಮೆ. ತನ್ನ ಸುತ್ತಲಿನವರೊಡನೆ ಮಾತಾಡ್ತಾ, ಆ ಪರಿಸರದಲ್ಲೊಂದು ಜೀವಕಳೆಯನ್ನು ಸೃಷ್ಟಿಸುವ ಕಲೆ ಆಕೆಗೆ ಅನಾಯಸವಾಗಿ ಸಿದ್ದಿಸಿದೆ. ಕೈಯಲ್ಲೊಂದು ಟಮ್ಕಿ ಹಿಡಿದು ಹಾಡಿಗೆ ನಿಂತರೆ ಕಂಚಿನ ಕಂಠಕ್ಕೆ ಮನ ಸೋಲದವರಿಲ್ಲ. ಇಂತಿಪ್ಪ ಅಕ್ಷತಾಳನ್ನು “ಹೇಗೋ ಇಬ್ರೂ ಕ್ಯಾಂಪು ಆರ್ಟ್ ಅಂತ ಸುತ್ತುತಾ ಇರ್ತೀರಿ, ಮದ್ವೆಯಾಗಿ ಬಿಡಿ” ಎಂದು ನನ್ನ ಮನೆಯವರು ಪ್ರಸ್ತಾಪ ಇಟ್ಟಾಗ ನಾನು ನಿಜಕ್ಕೂ ದಿಗಿಲಿಗೆ ಬಿದ್ದಿದ್ದೆ. ನಮಗೇ ತಿಳಿದಂತೆ ನಮ್ಮಿಬ್ಬರ ಅಭಿರುಚಿಗಳು ಒಂದೇ ಇದ್ದರೂ ಅಭಿಪ್ರಾಯಗಳು ಒಂದೇ ಆಗಿರಲಿಲ್ಲ. ಅದಲ್ಲದೆ ತನ್ನ ಧ್ವನಿಯ ಮೂಲಕ, ವ್ಯಕ್ತಿತ್ವದ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳನ್ನು, ಪ್ರೇಕ್ಷಕರನ್ನು ತಲುಪಿದ್ದ ಆಕೆಯ ಶ್ರೀವಂತಿಕೆಯನ್ನು ಮದುವೆಯ ನಂತರವೂ ಹಾಗೆ ಉಳಿಸಬಲ್ಲೆನೆ ? ಎಂಬ ಗೊಂದಲಕ್ಕೆ ಬಿದ್ದಿದ್ದೆ.
ಸಾವಿರಾರು ಕಾರ್ಯಕ್ರಮಗಳು, ನುಡಿಸಿರಿ ವಿರಾಸತ್ ನ ವೇದಿಕೆಗಳು, ವಿದೇಶಗಳಲ್ಲಿ ಆಕೆ ನೀಡಿದ ಪ್ರದರ್ಶನಗಳು ಒಮ್ಮೆ ಕಣ್ಮುಂದೆ ಹಾದು ಹೋದವು. ಗೋಪಾಡ್ಕರ್ ಸರ್ ಬಳಿ ಇದನ್ನೇ ಕೇಳಿದಾಗ, “ಇಬ್ಬರೂ ಹುಚ್ಚರು ಇನ್ಯಾರನ್ನೋ ಮದುವೆಯಾಗಿ ಇನ್ನಿಬ್ಬರ ಬಾಳನ್ನು ಹಾಳು ಮಾಡೋದಕ್ಕಿಂತ ನೀವೇ ಮದುವೆ ಮಾಡ್ಕೊಂಡ್ರೆ ಉತ್ತಮ ಎಂದು ನಕ್ಕಿದ್ದರು.”
ಇದಾಗಿ ಈಗ 5 ವರ್ಷ ಕಳೆದಿದೆ. ಆಕೆಯ ಬೆಳವಣಿಗೆಯನ್ನು ತುಂಬಾ ಹತ್ತಿರದಲ್ಲಿ ಕಾಣ್ತಾ ಇದ್ದೇನೆ. ಶಾಲೆ, ಮನೆ ಎಲ್ಲವನ್ನೂ ಸುಧಾರಿಸಿಕೊಂಡು, ತನ್ನ ಆಸಕ್ತಿಗಳನ್ನು ಜೀವಂತವಾಗಿರಿಸಿಕೊಂಡು, ಜನಪದ ಹಾಡುಗಳ ಹಿಂದೆ ಬಿದ್ದಿರುವ ಅಕ್ಷತಾಳನ್ನು ನಾನು “ಕಾಡು ಹಕ್ಕಿ” ಎಂದೇ ಕರೆಯುವುದಿದೆ. ಯಾರೂ ಹೇಳಿದ ಪಾಡ್ದನ, ಜೋಗಿ ಪದಗಳ ಬೆನ್ನತ್ತಿರುವ ಆಕೆಯ ಜೀವನ ಪ್ರೀತಿಯ ಕುರಿತಾಗಿ ಇಂದಿಗೂ ಮೊದಲ ಕುತೂಹಲದಲ್ಲೇ ನೋಡುತ್ತಿದ್ದೇನೆ. “ಚೇತನ್ ಸರ್ ನಾಟ್ಕ ಕಲಿಯುವ, ಹಾಡು ಕಲಿಯುವ” ಅಂತಲೇ ಹೇಳುತ್ತಾ ನನ್ನನ್ನೂ ತನ್ನೊಡನೆ ನಡೆಸಿಕೊಂಡು ಹೋಗುತ್ತಿರುವ ಆಕೆಯ ಜೀವನ ಸಂಭ್ರಮಕ್ಕೆ ಮತ್ತೆ ಮಹಿಳಾ ದಿನಾಚರಣೆಯ ಶುಭಾಶಯಗಳು. “ನಿಮ್ಮಿಬ್ಬರದ್ದೂ ಕಲ್ತು ಮುಗಿಲಿಕ್ಕಿಲ್ಲ” ಎನ್ನುವ ದೂರು ನಮ್ಮ ಬದುಕಿನುದ್ದಕ್ಕೂ ನಮ್ಮನ್ನು ಕಾಯಲಿ.
- ಚೇತನ್ ಕೊಪ್ಪ