ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಇದರ ವತಿಯಿಂದ ಕಿನ್ನಿಗೋಳಿ ಮೇರಿವೆಲ್ ಶಾಲೆ ಬಳಿಯಿರುವ ಶ್ರೀಗಂಧ ನಿವಾಸದಲ್ಲಿ ಆಯೋಜಿಸಿದ ಸಾಹಿತಿ ಅ.ಗೌ. ಕಿನ್ನಿಗೋಳಿ ಇವರ ಶತಮಾನೋತ್ಸವ ಆಚರಣೆ ಹಾಗೂ ಖ್ಯಾತ ಸಾಹಿತಿ ಬಿ. ಜನಾರ್ದನ ಭಟ್ಟರ 99, 100, 101 ಕೃತಿಗಳ ಬಿಡುಗಡೆ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಬಿಡುಗಡೆ ಮಾಡಿದ ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟ ಅ.ಗೌ. ಕಿನ್ನಿಗೋಳಿ ಇವರ ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬಂದು ಎಲ್ಲರೂ ಓದುವಂತಾಗಬೇಕು. ನೂರು ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಬಿ. ಜನಾರ್ದನ ಭಟ್ಟರಿಗೆ ಸರಕಾರ ಹಾಗೂ ಸಾರ್ವಜನಿಕ ವಲಯದಿಂದ ಹೆಚ್ಚಿನ ಗೌರವಗಳು ಸಿಗುವಂತಾಗಲಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಬಿ. ಜನಾರ್ದನ ಭಟ್ ಇವರ 99ನೆಯ ಕೃತಿ ‘ಕಪ್ಪೆ ಹಿಡಿಯುವವನು’ ಕಥಾ ಸಂಕಲನವನ್ನು ಸಾಹಿತಿ ಮೂಡುಬಿದ್ರೆ ಬಿ. ರಾಮಚಂದ್ರ ಆಚಾರ್ಯ, 100ನೆಯ ಕೃತಿ ‘ಕನ್ನಡ ಕಾದಂಬರಿ ಮಾಲೆ’ಯನ್ನು ಡಾ. ಹರಿಕೃಷ್ಣ ಪುನರೂರು, 101ನೆಯ ಕೃತಿ ‘ಹೊಸನೋಟಗಳ ಸಮಾಜ ವಿಮರ್ಶಕ ಅ.ಗೌ. ಕಿನ್ನಿಗೋಳಿ’ ಕೃತಿಯನ್ನು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಇವರುಗಳು ಬಿಡುಗಡೆಗೊಳಿಸಿದರು.
ಅ.ಗೌ. ಕಿನ್ನಿಗೋಳಿ ಇವರ ಸಂಸ್ಮರಣೆ ಮಾತುಗಳನ್ನಾಡಿದ ಜನಾರ್ದನ ಭಟ್ “ತನ್ನ ಊರಿನ ಹೆಸರನ್ನು ಇಟ್ಟುಕೊಂಡು ಪ್ರಸಿದ್ಧರಾದ ಅಚ್ಯುತ ಗೌಡರ ಕಾವ್ಯಗಳು, ಕಾದಂಬರಿಗಳು ಸಾಹಿತ್ಯ ವಲಯದಲ್ಲಿ ದೊಡ್ಡ ಹೆಸರನ್ನು ತಂದುಕೊಟ್ಟಿವೆ. ತನ್ನ ಕಾದಂಬರಿ ಮಾಲೆ ಕೃತಿಯಲ್ಲಿ ಕನ್ನಡ ಸಾಹಿತ್ಯದ ನೂರು ಕಾದಂಬರಿಗಳ ಕುರಿತು ಬರೆಯಲಾಗಿದೆ” ಎಂದರು.
ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ, ಮನೆ ಮನೆಗೆಳಲ್ಲಿ ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಎಲೆಮರೆ ಕಾಯಿಗಳಂತೆ ಸಾಧನೆ ಮಾಡಿದರೂ ಗುರುತಿಸಲ್ಪಡದ ಸಾಹಿತಿಗಳ ಗುರುತಿಸುವ ಕಾರ್ಯ ಮಾಡಲಿದೆ” ಎಂದರು.
ಅ.ಗೌ. ಕಿನ್ನಿಗೋಳಿ ಅವರ ಪುತ್ರಿ ಜಯಂತಿ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ ಕ.ಸಾ.ಪ. ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ವೇದಿಕೆಯಲ್ಲಿದ್ದರು. ಅ.ಗೌ. ಕಿನ್ನಿಗೋಳಿಯವರನ್ನು ತಾವು ಕಂಡ ಬಗೆಯನ್ನು ಬಾಲಕೃಷ್ಣ ಉಡುಪ ಮತ್ತು ಪಾಂಡುರಂಗ ಭಟ್ ಕಟೀಲು ಹೇಳಿದರು. ಆಶ್ವೇಜಾ ಉಡುಪ ಇವರು ಅಚ್ಯುತ ಗೌಡರ ಕಾವ್ಯಗಾಯನ ಮಾಡಿದರು. ಜೊಸ್ಸಿ ಪಿಂಟೋ ಸ್ವಾಗತಿಸಿ, ಪ್ರಕಾಶ್ ಆಚಾರ್ ನಿರೂಪಿಸಿದರು.