ಸುಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯರು ಇಂದು ಮುಂಜಾನೆ ದೈವಾಧೀನರಾದ ಖೇದಕರ ಸಂಗತಿ ಯಕ್ಷಗಾನ ರಸಿಕರಲ್ಲಿ ಧಿಗ್ಭ್ರಮೆ ತಂದಿದೆ. ಚಂದ್ರಶೇಖರ ಧರ್ಮಸ್ಥಳದವರ ಮಳೆಗಾಲದ ತಿರುಗಾಟದ ತಂಡದಲ್ಲಿ (ಹಿಂದಿನ ಶ್ರೀಧರ ಭಂಡಾರಿಯವರ ತಂಡ) ಯಕ್ಷಗಾನ ಪ್ರದರ್ಶನಕ್ಕಾಗಿ ಬೆಂಗಳೂರಿಗೆ ತೆರಳಿದ್ದ ತಂಡವು ಬೆಂಗಳೂರಿನ ಯಕ್ಷಗಾನ ಪೋಷಕರಾದ ಶ್ರೀ ಆರ್.ಕೆ. ಭಟ್ ರ ಮನೆಯ ಮಾಳಿಗೆಯಲ್ಲಿ ವಸತಿ ಹೂಡಿತ್ತು. ಆಚಾರ್ಯರಿಗೆ ಇಂದು ಮುಂಜಾನೆ 2-00 ಗಂಟೆ ಹೊತ್ತಿಗೆ ತೀವ್ರ ಕೆಮ್ಮಿನ ಬಾಧೆ ಕಂಡಿತು. ಆಗ ಅವರೊಂದಿಗೆ ರೂಮಿನಲ್ಲಿದ್ದ ವೇಣೂರು ಸದಾಶಿವ ಆಚಾರ್ಯ ಹಾಗೂ ಅರಳ ಗಣೇಶರು ಕೂಡಲೇ ಆರೈಕೆ ಮಾಡಿದರು . ಚಂದ್ರಶೇಖರರಿಗೂ ವಿಷಯ ತಿಳಿದು , ಪ್ರಥಮ ಚಿಕಿತ್ಸೆಗೆ ಸ್ಪಂದಿಸದ ಆಚಾರ್ಯರನ್ನು ಆರ್.ಕೆ. ಭಟ್ಟರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲೇ, ಸುಮಾರು ಮುಂಜಾವಿನ 4-00 ಗಂಟೆಗೆ ಆಚಾರ್ಯರು ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ ದಾರುಣ ವಾರ್ತೆಯನ್ನು ವೈದ್ಯರು ಧೃಢೀಕರಿಸಿದರು. ಈ ವಾರ್ತೆಯು ಇಂದು ಮುಂಜಾವಿನಲ್ಲೇ ಆಚಾರ್ಯರ ಕುಟುಂಬಸ್ತರಿಗೆ ಹಾಗೂ ಅಭಿಮಾನಿಗಳಿಗೆ ಬರಸಿಡಿಲೆರಗಿದ ಅನುಭವವಾಯಿತು. ಆಚಾರ್ಯರಿಗೆ 67 ವರ್ಷವಾಗಿತ್ತು. 5 ದಶಕಗಳ ಕಾಲ ತಮ್ಮ ನವಿರಾದ ಪರಂಪರೆಯ ಶುದ್ಧ ಹಾಸ್ಯಸಿಂಚನದ ಮೂಲಕ ರಸಿಕರನ್ನು ತಣಿಸಿದ ಆಚಾರ್ಯರು ತಮ್ಮ ದೇಹವನ್ನೇ ತಣ್ಣಗಾಗಿಸಿ ಬಾರದ ಲೋಕಕ್ಕೆ ತೆರಳಿದ್ದು ಯಕ್ಷರಂಗಕ್ಕೊಂದು ದೊಡ್ಡ ನಷ್ಟ ಎನ್ನಬಹುದು.
ಪ್ರಸ್ತುತ ಯಕ್ಷಗಾನ ಹಾಸ್ಯಗಾರರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಬಂಟ್ವಾಳ ಜಯರಾಮ ಆಚಾರ್ಯರ ಕೊನೆಯ ತಿರುಗಾಟದ ಮೇಳ ಕಳೆದ ವರ್ಷದಲ್ಲಿ ಹನುಮಗಿರಿ ಮೇಳ. ಸರಳ, ಸಜ್ಜನ, ವಿನಯಶೀಲ ಹಾಸ್ಯಗಾರರಾಗಿದ್ದ ಇವರು ಅಜಾತಶತ್ರುಗಳೂ ಆಗಿದ್ದು ಹನುಮಗಿರಿ ಮೇಳದ ಪ್ರಧಾನ ಹಾಸ್ಯಗಾರರಾಗಿದ್ದರು. ಯಾವುದೇ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಬಲ್ಲ ಬಂಟ್ವಾಳರು, ತುಳು ಪ್ರಸಂಗಗಳಲ್ಲೂ ಪಾರಮ್ಯ ಮೆರೆದಿದ್ದರು. ಹಿಂದೊಮ್ಮೆ ಮಂಗಳೂರಿನ ಪುರಭವನದಲ್ಲಿ ಜರುಗಿದ ‘ಕಾಡಮಲ್ಲಿಗೆ’ ತುಳು ಪ್ರಸಂಗದ ಪಾತ್ರ ಮಾಡಬೇಕಾಗಿದ್ದ ‘ಹಾಸ್ಯ ಚಕ್ರವರ್ತಿ’ ಮಿಜಾರು ಅಣ್ಣಪ್ಪರು ಅಸೌಖ್ಯದಿಂದಾಗಿ ಬರಲಾಗದಿದ್ದಾಗ, ಅಣ್ಣಪ್ಪರು ಸೂಚಿಸಿದ ಹಾಸ್ಯಗಾರರ ಹೆಸರು ಬಂಟ್ವಾಳ ಜಯರಾಮ ಆಚಾರ್ಯ ಎಂಬುದು, ಇವರಿಗೆ ಸಂದ ಗೌರವವೇ ಆಗಿತ್ತು. ಯಾವುದೇ ಪಾತ್ರಗಳನ್ನು ನಿರ್ವಹಿಸುವಾಗ, ಆ ಪಾತ್ರಗಳ ಘನತೆಗೆ ಚ್ಯುತಿ ಬಾರದಂತೆ, ಪರಂಪರೆ ಮೀರದಂತೆ, ಅಶ್ಲೀಲ ಶಬ್ದಗಳು ಬಾರದಂತೆ ನಿರ್ವಹಿಸುವುದರಲ್ಲಿ ಬಂಟ್ವಾಳರು ಸಿದ್ಧಹಸ್ತರಾಗಿದ್ದರೆಂಬುದು ವಿಮರ್ಶಕರ ಅಭಿಪ್ರಾಯ ಸತ್ಯವೇ ಆಗಿತ್ತು. ಹಾಸ್ಯ ಪಾತ್ರಗಳಿಗೆ ಬೇಕಾದ ಆಂಗಿಕ ಚಲನೆ, ಹಾವ ಭಾವಗಳ ಸಮನ್ವಯತೆ, ಬಳಸುವ ಸಾಹಿತ್ಯ, ಎದುರು ಪಾತ್ರಗಳನ್ನು ಸಂಭಾಷಣೆಗೆ ಎಳೆಯುವ ಶೈಲಿ ಇವೆಲ್ಲವೂ ಬಂಟ್ವಾಳರಲ್ಲಿ ಮೇಳೈಸಿದ ಕಾರಣಕ್ಕಾಗಿಯೇ ಇವರು ಶ್ರೇಷ್ಠ ಹಾಸ್ಯ ಕಲಾವಿದರೆಂದು ಪರಿಗಣಿಸಲ್ಪಟ್ಟದ್ದು.
12-10-1957ರಂದು ಬಂಟ್ವಾಳ ಗಣಪತಿ ಆಚಾರ್ಯ – ಶ್ರೀಮತಿ ಭವಾನಿ ಅಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರಿಗೆ ಎಳವೆಯಲ್ಲೇ ಯಕ್ಷಗಾನದ ನಂಟು ಅಂಟಿತ್ತು. ತಂದೆ ಗಣಪತಿ ಆಚಾರ್ಯರು ತಮ್ಮ ಕುಲ ಕಸುಬಾದ ಚಿನ್ನದ ಆಭರಣ ತಯಾರಿಕೆಯಲ್ಲಿ ಪ್ರಸಿದ್ಧರಾಗಿದ್ದರಲ್ಲದೇ ಆ ಕಾಲದ ಉತ್ತಮ ಯಕ್ಷಗಾನ ಕಲಾವಿದರೂ ಆಗಿದ್ದರು. ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೊರ್ನಾಡು ಮುಂತಾದ ಮೇಳಗಳಲ್ಲಿ ತಿರುಗಾಟವನ್ನೂ ನಡೆಸಿದ್ದರು. ಈ ಹಿನ್ನೆಲೆಯೇ ಜಯರಾಮರಿಗೆ ಯಕ್ಷಗಾನದ ಆಸಕ್ತಿ ಬೆಳೆಯಲು ಕಾರಣವಾಯಿತು. ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಬಂಟ್ವಾಳ ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆ ಪ್ರದರ್ಶನಗಳ ಖಾಯಂ ಪ್ರೇಕ್ಷಕರಾಗಿದ್ದರು. ತಂದೆಯವರೊಂದಿಗೆ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿ ವೇಷವನ್ನೂ ಮಾಡಿದ್ದರು. ಯಕ್ಷಗಾನ ಪ್ರದರ್ಶನ ನೋಡಿಯೇ ಹೆಜ್ಜೆಗಾರಿಕೆ ಕಲಿತು ಜಯರಾಮರು ಅಮ್ಟಾಡಿ, ಸೊರ್ನಾಡು, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ 4 ವರ್ಷಗಳ ತಿರುಗಾಟ ನಡೆಸಿದ್ದರು. ನಂತರದಲ್ಲಿ ಗುರು ಮುಖೇನವಾಗಿ ಮತ್ತು ಶಾಸ್ತ್ರೀಯವಾಗಿಯೇ ಯಕ್ಷಗಾನದ ಹೆಜ್ಜೆಗಾರಿಕೆ, ಬಣ್ಣಗಾರಿಕೆ ಕಲಿಯಬೇಕೆಂಬ ಹಂಬಲದೊಂದಿಗೆ 1974-75ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲ್ಪಡುತ್ತಿರುವ ಲಲಿತ ಕಲಾ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅಲ್ಲಿ ಗುರುಗಳು ಹಾಗೂ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಪಡ್ರೆ ಚಂದುರವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು. ಇಂದು ಸುಪ್ರಸಿದ್ಧ ಕಲಾವಿದರಾಗಿರುವ ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ.ಎಂ. ಕೃಷ್ಣ (ಬಣ್ಣದ ಮಹಾಲಿಂಗರವರ ಮಗ) ಮೊದಲಾದವರು ಅಂದು ಬಂಟ್ವಾಳ ಜಯರಾಮ ಆಚಾರ್ಯರೊಂದಿಗೆ ಪಡ್ರೆ ಚಂದುರವರದ್ದೇ ವಿದ್ಯಾರ್ಥಿಗಳಾಗಿದ್ದವರು. ಮುಂದಿನ ವರ್ಷದ ತಿರುಗಾಟಕ್ಕೆ ಕಟೀಲು ಮೇಳ ಸೇರಿಕೊಂಡರು. ಅಲ್ಲಿ ಬಲಿಪ ನಾರಾಯಣ ಭಾಗವತರ ಮೇಳದಲ್ಲಿ 4 ವರ್ಷಗಳ ಕಾಲ ತಿರುಗಾಟ ನಡೆಸಿ, ಬಲಿಪರ ಮಾರ್ಗದರ್ಶನದಲ್ಲಿ ಪಳಗಿದರು. ಪೂರ್ವರಂಗದ ವೇಷ ನಿರ್ವಹಿಸುತ್ತಾ, ದೇವತೆ ಬಲ, ರಾಕ್ಷಸ ಬಲ ಮುಂತಾದ ಸಣ್ಣ ವೇಷಗಳನ್ನು ಮಾಡುತ್ತಾ ಬೆಳೆದು ಉತ್ತಮ ಹಾಸ್ಯಗಾರರಾಗಿ ಹೆಸರು ಗಳಿಸಿಕೊಂಡಿದ್ದುದರ ಹಿಂದೆ ಜಯರಾಮರ ಶ್ರಮವಿದೆ. ನಂತರ ಪುತ್ತೂರು ಶ್ರೀಧರ ಭಂಡಾರಿಯವರ ಪುತ್ತೂರು ಮೇಳ ಸೇರಿದರು. ಆಮೇಲೆ ಸುಂಕದಕಟ್ಟೆ ಮೇಳ ಸೇರಿಕೊಂಡಾಗ, ಸುಜನ ಸುಳ್ಯ ಎಂಬ ಪ್ರಖ್ಯಾತ ಹಾಸ್ಯಗಾರರ ಒಡನಾಟವಾಯಿತು. ಅಲ್ಲಿ ಒಂದು ವರುಷ ತಿರುಗಾಟ ನಡೆಸಿ ಪುನಃ ಕಟೀಲು ಮೇಳ ಸೇರಿದರು. ಆಗ ಅಂದಿನ ಶ್ರೇಷ್ಠ ಹಾಸ್ಯಗಾರರಾದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಒಡನಾಟದಲ್ಲಿ ಸಾಂಪ್ರದಾಯಿಕ ಹಾಸ್ಯವನ್ನು ಕರಗತ ಮಾಡಿಕೊಂಡರು. ನಂತರ ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳ, ದಾಸಪ್ಪ ರೈಯವರ ಕುಂಬ್ಳೆ ಮೇಳ, ವರದರಾಯ ಪೈಯವರ ಸುರತ್ಕಲ್ ಮೇಳಗಳಲ್ಲಿ ತಿರುಗಾಟ ನಡೆಸಿ ಪುನಃ ಡಿ. ಮನೋರ್ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 11 ವರುಷಗಳ ತಿರುಗಾಟ ನಡೆಸಿ ನಂತರದಲ್ಲಿ ಎಡನೀರು ಮೇಳದಲ್ಲಿ 2 ವರ್ಷ, ಹೊಸನಗರ ಮೇಳದಲ್ಲಿ 9 ವರ್ಷ ತಿರುಗಾಟ ನಡೆಸಿ ಕೊನೆಯಲ್ಲಿ ಹನುಮಗಿರಿ ಮೇಳದಲ್ಲಿ 7 ವರ್ಷಗಳ ತಿರುಗಾಟ ಮಾಡಿ ನಿರಂತರ ಐದು ದಶಕಗಳ ಕಾಲ ಯಕ್ಷಗಾನದ ಸೇವೆ ಸಲ್ಲಿಸಿದ್ದರು.
ಪೌರಾಣಿಕ ಪಾತ್ರಗಳಾದ ಬಾಹುಕ, ವಿಜಯ, ಮಕರಂದ, ಮಾಲಿನಿ ದೂತ, ಚಂಡಾಮರ್ಕ, ನಾರದ, ರಾವಣನ ದೂತ, ಮೂಕಾಸುರ, ವೃದ್ಧ ಬ್ರಾಹ್ಮಣ, ಬಲರಾಮನ ದೂತ, ಮಂಥರೆ, ದೇವದೂತ ಮುಂತಾದುವು, ಅಗಸ, ಮಂತ್ರವಾದಿ, ಕುಡುಕ, ಕೈಲಾಸ ಶಾಸ್ತ್ರಿ, ಚಾಡಿಕೋರ ಮುದುಕಿ, ಜ್ಯೋತಿಷಿ ಮುಂತಾದ ವಿಶಿಷ್ಟ ಪಾತ್ರಗಳು ಜಯರಾಮರಿಗೆ ಪ್ರಸಿದ್ಧಿ ತಂದವುಗಳು. ಕೋಟಿಚೆನ್ನಯ ತುಳು ಪ್ರಸಂಗದ ಪಯ್ಯ ಬೈದ್ಯ, ಜ್ಯೋತಿಷಿ, ಗೆಜ್ಜೆದ ಪೂಜೆ, ಗರುಡ ಕೇಂಜವೆ, ಕದಿರೆದ ಬೊಳ್ಳಿ, ದಳವಾಯಿ ಮುದ್ದಣ, ಕದಿರೆದ ಕಾಂಚನ, ಮಣ್ಣ್ ದ ಮಾಣಿಕ್ಯ ಮುಂತಾದ ತುಳು ಪ್ರಸಂಗಗಳ ಪಾತ್ರಗಳಲ್ಲೂ ಜಯರಾಮರದ್ದು ಉತ್ತಮ ನಿರ್ವಹಣೆ. ಡಾ. ಶೇಣಿ, ತೆಕ್ಕಟ್ಟೆ, ರಾಮದಾಸ ಸಾಮಗ, ವಾಸುದೇವ ಸಾಮಗ, ಕೊಳ್ಯೂರು, ಪೆರುವಾಯಿ, ವೇಣೂರು ಸುಂದರ ಆಚಾರ್ಯ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಮೂಡುಬಿದಿರೆ ಮಾಧವ ಶೆಟ್ಟಿ ರಮೇಶ ಆಚಾರ್ಯ, ಶಿವರಾಮ ಜೋಗಿ, ಡಿ. ಮನೋಹರ ಕುಮಾರ್, ಸರಪಾಡಿ, ಸೀತರಾಮ ಕುಮಾರ್, ಪೆರ್ಮುದೆ, ರಂಗಾಭಟ್, ಸಂಪಾಜೆ, ಅಂಬಾಪ್ರಸಾದ್, ದಾಸಪ್ಪ ರೈ, ಸಂಜಯ ಕುಮಾರ್, ಶ್ರೀಧರ ಭಂಡಾರಿ, ಉಬರಡ್ಕ, ಬಲಿಪ, ಅಗರಿ, ಪದ್ಯಾಣ ಗಣಪತಿ ಭಟ್, ಅಮ್ಮಣ್ಣಾಯ, ಪೊಲ್ಯ, ಪಟ್ಲ ಸತೀಶ್ ಶೆಟ್ಟಿ, ಕನ್ನಡಿಕಟ್ಟೆ, ಬೊಟ್ಟಿಕೆರೆ, ಕಡಬ ರಾಮಚಂದ್ರ ರೈ, ಕಡಬ ನಾರಾಯಣ ಆಚಾರ್ಯ, ಕಕ್ಕೆಪದವು, ಚೈತನ್ಯ, ವಿನಯ ಆಚಾರ್ಯ, ತೋಡಿಕಾನ, ಪದ್ಯಾಣ ಶಂಕರಣ್ಣ, ವೇಣೂರು ಸದಾಶಿವ ಕುಲಾಲ್, ಪೆರ್ಲ ಜಗನ್ನಾಥ ಶೆಟ್ಟಿ ಮುಂತಾದ ಘಟಾನುಘಟಿ ಕಲಾವಿದರೊಂದಿಗೆ ತಿರುಗಾಟ ನಡೆಸಿದ ಹೆಗ್ಗಳಿಕೆ ಜಯರಾಮರದ್ದು. ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿದ್ದರೂ, ನಾಲ್ಕು ದಿನಗಳ ಮೊದಲು ಕಾಟಿಪಳ್ಳದಲ್ಲಿ ಜರುಗಿದ ‘ಬೇಡರ ಕಣ್ಣಪ್ಪ’ ಪ್ರಸಂಗದ ಕೈಲಾಸ ಶಾಸ್ತ್ರಿಯಾಗಿ, ಗಿರೀಶ್ ರೈಯವರು ಹಾಡಿದ ‘ಮೆಲ್ಲ ಮೆಲ್ಲನೆ ಬಂದನೇ’ ಪದ್ಯಕ್ಕೆ ಹಾಗೂ ನಂತರದ ಕೈಲಾಸ ಶಾಸ್ತ್ರಿಯ ಮೂರು ಪದ್ಯಗಳಿಗೆ ಲವಲವಿಕೆಯೊಂದಿಗೆ ಅತ್ಯುತ್ತಮ ನಿರ್ವಹಣೆ ನೀಡಿದ್ದರು ಎಂಬುದನ್ನು ಕಕ್ಕೆಪದವು ಇವರು ನೆನಪಿಸುತ್ತಾ ಇದ್ದಾರೆ.
ಬಂಟ್ವಾಳರು ಮಿಮಿಕ್ರಿ ಮಾಡುವುದರಲ್ಲೂ ಪರಿಣತರು ಎಂದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಕೆಲವರ ಮಾತುಗಾರಿಕೆಯ ಶೈಲಿ, ನಡೆಯುವ ಭಂಗಿ, ಅವರ ಹಾವಭಾವ ಮುಂತಾದುವನ್ನು ಚೆನ್ನಾಗಿ ಮಾಡುತ್ತಿದ್ದರು. ಆದರೆ, ಇದು ರಂಗಸ್ಥಳದಲ್ಲಿ ಅಲ್ಲ, ಖಾಸಗಿಯಾಗಿ ಮಾತ್ರ . ನಾನು ಬಂಟ್ವಾಳರೊಂದಿಗೆ ಆರು ವರ್ಷಗಳ ಹಿಂದೆ, ಬಹ್ರೇನ್‌ನ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ, ಬಂಟ್ವಾಳರು ವಿಮಾನದಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆ ಹೇಳಿದಾಗ ನಮ್ಮೊಂದಿಗಿದ್ದ, ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ, ಶಿವಶಂಕರ ಬಲಿಪ, ಆಡೂರು ಗಣೇಶ್ ರಾವ್ ಎಲ್ಲಾ ಸೇರಿ ಮನಸಾರೆ ನಕ್ಕಿದ್ದೆವು. ಬಹ್ರೇನ್‌ನಲ್ಲಿ ನಮ್ಮೊಂದಿಗೆ ತುಂಬಾ ಹಾಸ್ಯಮಯವಾಗಿಯೇ ವರ್ತಿಸಿದ್ದರು. ಅವರಿಗೆ ಬಹ್ರೇನ್‌ನಲ್ಲಿ ಸಂಮಾನ ನೀಡಿದಾಗ, ಅಭಿನಂದನ ಭಾಷಣ ಮಾಡುವ ಯೋಗ ನನಗೆ ಲಭಿಸಿದ್ದುದು ಈಗ ನೆನಪು ಮಾತ್ರ. ಕೆಲವೊಂದು ಹಾಸ್ಯದ ದಂತಕತೆಗಳು ಬಂಟ್ವಾಳರು ಕುರಿತಾಗಿಯೇ ಇತ್ತು. ಒಮ್ಮೆ ಬಸ್ ನಿಂದ ಇಳಿಯುವಾಗ, ಪ್ರಯಾಣಿಕರು ಇಳಿಯುವವರಿಗೆ ಅವಕಾಶ ನೀಡದೇ ಹತ್ತಲಾರಂಭಿಸಿದಾಗ “ನಿಮಗೆ ಹತ್ತಲು ಹಿಂದೆ ಇನ್ನೂ ಅನೇಕ ಬಸ್ ಗಳು ಬರಬಹುದು. ಆದರೆ, ಇಳಿಯಲು ನನಗೆ ಈ ಬಸ್ ಮಾತ್ರ ಇರುವುದು” ಎಂದದ್ದು, ಸದಾಶಿವ ಶೆಟ್ಟಿಗಾರರು, ರಾಕ್ಷಸ ಪಾತ್ರದಲ್ಲಿರುವಾಗ, ದೇವದೂತನಲ್ಲಿ “ದೇವೇಂದ್ರ ನೂರು ಅಶ್ವಮೇಧ ಯಾಗ ಮಾಡಿ ಸ್ವರ್ಗಲೋಕ ಪಡೆದದ್ದು. ನೀನು ಸ್ವರ್ಗಲೋಕ ಹೇಗೆ ಪಡೆದಿ” ಎಂದು ಪ್ರಶ್ನಿಸಿದಾಗ, “ದೇವೇಂದ್ರ ನೂರು ಯಾಗ ಮಾಡುವಾಗ ನಾನು ಪಾನಕ ಹಂಚುತ್ತಿದ್ದೆ. ಆ ಪುಣ್ಯದ ಫಲವಾಗಿ ನಾನು ಸ್ವರ್ಗಲೋಕ ಪಡೆದೆ” ಎಂದದ್ದು ಬಂಟ್ವಾಳರೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. (ಸತ್ಯಾಸತ್ಯದ ಬಗ್ಗೆ ತಿಳಿದಿಲ್ಲವಾದರೂ, ಜಯರಾಮರು ಪ್ರತ್ಯುತ್ಪನ್ನಮತಿಗಳು ಎಂಬುದು ಸತ್ಯ). ದಿತಿದೇವಿಯ ದೂತನಾಗಿ ಬಂದಾಗ, ವಿದ್ಯುನ್ಮಾಲಿಯು ಊಟ ಮಾಡಿ ಹೋಗು ಎಂದಾಗ “ನಿಮ್ಮಲ್ಲಿ ಅಡುಗೆ ಮಾಡುವವರು ಸಾರಿಗೆ ಕೊತ್ತಂಬರಿ ಸೊಪ್ಪು ಹಾಕುತ್ತಾರಾ ?” ಎಂದು ಕೇಳಿದಾಗ, ವಿದ್ಯುನ್ಮಾಲಿ ಪಾತ್ರಧಾರಿ ಹೌದು ಎಂದಾಗ, ಕೋಪಾವಿಷ್ಟನಾಗಿ “ಕೊತ್ತಂಬರಿ ಸೊಪ್ಪು ಹಾಕಿದ ಸಾರಿನ ಊಟ ನಾನು ಮಾಡುವುದಿಲ್ಲ” ಎಂದು ಹೇಳುತ್ತಿದ್ದುದು ಈಗಲೂ ನೆನಪಾಗುತ್ತಿದೆ.
ಬೀಡಿ ಸೇದುವ ಹವ್ಯಾಸದ ಆಚಾರ್ಯರು, ಅದನ್ನು ರಂಗಸ್ಥಳದಲ್ಲಿ ಸಂದರ್ಭೋಚಿತವಾಗಿ ಬಿಂಬಿಸುತ್ತಿದ್ದರು. ಆಚಾರ್ಯರಿಗೆ ಒಂದು ಕಿವಿಯ ಶ್ರವಣ ಶಕ್ತಿಯ ಸಮಸ್ಯೆ ಇತ್ತು. ಅದನ್ನೂ ರಂಗದಲ್ಲಿ ಹಾಸ್ಯಮಯವಾಗಿ ಹೇಳುತ್ತಿದ್ದರು. ತನ್ನನ್ನು ತಾನೇ ವಿಡಂಬನೆ ಮಾಡುವುದೂ ಹಾಸ್ಯದ ಒಂದು ವಿಧಾನ ಎಂಬುದು ಆಚಾರ್ಯರಿಗೆ ಚೆನ್ನಾಗಿ ತಿಳಿದಿತ್ತು. ತಾಳಮದ್ದಳೆಯಲ್ಲೂ ಭಾಗವಹಿಸುತ್ತಿದ್ದ ಬಂಟ್ವಾಳರು, ಕೂಟಗಳು ರಂಗೇರಲು ಕಾರಣರಾಗುತ್ತಿದ್ದರು. ಪ್ರಹ್ಲಾದನ ಗುರುವಾಗಿ ರಾಜ ಹಾಸ್ಯದ ಮೂಲಕ, ಶಿಷ್ಯರಾಗಿ ನಿರ್ವಹಿಸುತ್ತಿದ್ದ ಇತರ ಹಾಸ್ಯಗಾರರನ್ನು ತಿದ್ದಿ ಉತ್ತಮ ಹಾಸ್ಯಲೋಕ ಸೃಷ್ಟಿಸುತ್ತಿದ್ದರು. ಬೊಟ್ಟಿಕೆರೆಯವರ “ಗರುಡ ಕೇಂಜವೆ” ತುಳು ಪ್ರಸಂಗದಲ್ಲಿ ಬಂಟ್ವಾಳ – ಸೀತಾರಾಮ ಕುಮಾರರು ತಂದೆ ಮಗನಾಗಿ ಅಭಿನಯಿಸುವ ಸಂದರ್ಭದಲ್ಲಿ, “ದಾಯೆ ರಗಳೆ ಎನ್ನ ನಲಿಪುಂಡು ತಿಗಲೆ | ಪ್ರಾಯದ ಪರಬಡ ನಿನ್ನ ಕುಸಾಲೇ” ಎಂಬ ಛಂದೋಬದ್ಧವಾದ ಪೀಲು ರಾಗದ ಸುಶ್ರಾವ್ಯ ಹಾಡಿಗೆ ಬಂಟ್ವಾಳ – ಸೀತಾರಾಮರ ಜೋಡಿ ಸಿಂಚನ ಮೂಡಿಸುತಿತ್ತು. ಬಂಟ್ವಾಳರು ಮದ್ದಲೆ ವಾದನ, ಭಾಗವತಿಕೆಯಲ್ಲೂ ಪರಿಣತರು. ಬಂಟ್ವಾಳರು, ಪುತ್ತೂರು ಮೇಳದಲ್ಲಿರುವಾಗ, ಪ್ರಾರಂಭದಲ್ಲಿ ಮದ್ದಲೆ ನುಡಿಸಿ, ನಂತರ ಹಾಸ್ಯ ಪಾತ್ರ ನಿರ್ವಹಿಸುತ್ತಿದ್ದರು.
ಪ್ರತಿಭೆಯನ್ನು ಲಕ್ಷಿಸಿ ದೇಶ–ವಿದೇಶಗಳಲ್ಲಿ ನೂರಾರು ಸಂಮಾನ – ಪ್ರಶಸ್ತಿ ಸ್ವೀಕರಿಸಿರುವ ಜಯರಾಮರಿಗೆ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿಯೂ ದಕ್ಕಿವೆ. ನಾವು ಮೂಡುಬಿದಿರೆಯಲ್ಲಿ ವಿಶ್ವ ಹಿಂದು ಪರಿಷತ್ತಿನ ಯಕ್ಷಗಾನ ಕಾರ್ಯಕ್ರಮದಲ್ಲಿ ಆಚಾರ್ಯರನ್ನು ಸಂಮಾನಿಸಿದ್ದೆವು. ಇವರ ಪತ್ನಿ ಶ್ಯಾಮಲಾ ಗೃಹಿಣಿಯಾಗಿದ್ದರೆ, ಹಿರಿಯ ಮಗಳು ಕುಮಾರಿ ವರ್ಷಾ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಕಿರಿಯ ಪುತ್ರ ವರುಣ್ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ (KPT) ಇಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾರೆ. ಕಳೆದ ವರ್ಷ ತಾನೇ ನನ್ನಲ್ಲಿ ಮಾತಾಡುತ್ತಾ “ಕುಡ್ವರೇ, ನಾನು ಬರುವ ವರ್ಷ ಒಂದು ತಿರುಗಾಟ ಮುಗಿಸಿ ಯಕ್ಷಗಾನದಿಂದ ನಿವೃತ್ತಿಯಾಗುತ್ತೇನೆ” ಎಂದಾಗ ನಾನು, “ಯಾಕೆ ಹಾಸ್ಯಗಾರರೇ, ನೀವು ಇನ್ನೂ ಹತ್ತು ವರ್ಷ ಯಕ್ಷಗಾನ ರಂಗದಲ್ಲಿ ಇರಬೇಕು” ಎಂದಿದ್ದೆ. ಆದರೆ, ವಿಧಿನಿಯಮದ ಎದುರು ನಮ್ಮ ಇಬ್ಬರ ಅನಿಸಿಕೆಯೂ ಸುಳ್ಳಾಯಿತು.
ಕಾಲಾಯ ತಸ್ಮೈ ನಮಃ ಎಂದು ಹೇಳಬೇಕೇ ಹೊರತು ಅನ್ಯ ಮಾರ್ಗವಿಲ್ಲ ತಾನೇ ? ಇಂದು ಆಚಾರ್ಯರ ಅಂತಿಮ ದರ್ಶನಕ್ಕೆ ಹೋಗಿದ್ದೆ. ಸಂಸದರಾದ ಶ್ರೀ ಬೃಜೇಶ್ ಚೌಟ, ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪಂಚಮೇಳದ ಯಜಮಾನರಾದ ಕಿಶನ್ ಹೆಗ್ಡೆ, ಹನುಮಗಿರಿ ಮೇಳದ ಯಜಮಾನರಾದ ಟಿ. ಶಾಮ್ ಭಟ್ಟರ ಮೆನೇಜರ್, ಡೈಜಿ ವರ್ಲ್ಡ್ ಛಾನೆಲ್ ನ ವಾಲ್ಟರ್ ನಂದಳಿಕೆ, ತುಳು ನಾಟಕ ರಂಗಭೂಮಿಯ ಅರವಿಂದ ಬೋಳಾರ್ ಸಹಿತ ಸಾವಿರಾರು ಯಕ್ಷಗಾನ ಕಲಾವಿದರು, ಅಭಿಮಾನಿಗಳು ನೆರೆದಿದ್ದುದು ಕಂಡಾಗ ನನಗೆ ನೆನಪಾದುದು ದಾಸವಾಣಿಯ ಉಕ್ತಿಯೊಂದು ‘ಶರಣರ ಗುಣವನ್ನು ಅವರ ಮರಣದಲ್ಲಿ ಕಾಣು’.
ಬಂಟ್ವಾಳ ಜಯರಾಮ ಆಚಾರ್ಯರ ದಿವ್ಯಾತ್ಮಕ್ಕೆ ಸದ್ಗತಿ ದೊರಕಲಿ ಅವರ ಕುಟುಂಬಸ್ತರಿಗೆ ಹಾಗೂ ಅವರ ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಶ್ರೀ ಭಗವಂತನಲ್ಲಿ ಹಾಗೂ ಯಕ್ಷಗಾನ ಮಾತೆಯಲ್ಲಿ ಯಕ್ಷಸಂಗಮ-ಮೂಡುಬಿದಿರೆ ಪರವಾಗಿ ಪ್ರಾರ್ಥಿಸುತ್ತೇನೆ.
ಎಂ. ಶಾಂತರಾಮ ಕುಡ್ವ, ಮೂಡುಬಿದಿರೆ
ಪತ್ರಿಕಾ ಬರಹಗಾರ, ಸಾಹಿತಿ, ಯಕ್ಷಗಾನ ಸಂಘಟಕ ಹಾಗೂ ಕಲಾವಿದ, ಭಜನೆ, ನಾಟಕಗಳ ಸಂಭಾಷಣೆಗಾರ, ‘ಯಕ್ಷ ಸಾರಸ್ವತ’ ಕೊಂಕಣಿ ಸಾಂಸ್ಕೃತಿಕ ಸಂಘದ ಸ್ಥಾಪಕ ಹಾಗೂ ಅಧ್ಯಕ್ಷರು.