ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 28-10-2024ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಮಧುಶ್ರೀ ಕಿದಿಯೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಉಡುಪಿ ಕಿದಿಯೂರಿನ ಶ್ರೀಯುತ ವಾಸುದೇವ ಭಟ್ ಮತ್ತು ಶ್ರೀಮತಿ ಮನೋರಮ ದಂಪತಿಗಳ ಸುಪುತ್ರಿಯಾದ ಕುಮಾರಿ ಮಧುಶ್ರೀ ಕಿದಿಯೂರು, ಸರಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇಲ್ಲಿ ತನ್ನ ಬಿ.ಎಸ್ಸಿ. ಪದವಿಯನ್ನು ಮುಗಿಸಿ ಕಿದಿಯೂರಿನ ಶ್ರೀ ವಿದ್ಯಾ ಸಮುದ್ರ ತೀರ್ಥ ಪ್ರೌಢ ಶಾಲೆಯಲ್ಲಿ ವಿಜ್ಞಾನ ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಎಂಟನೇ ವಯಸ್ಸಿನಲ್ಲಿಯೇ ತನ್ನ ನೃತ್ಯಭ್ಯಾಸವನ್ನು ವಿದ್ವಾನ್ ಶ್ರೀಧರ್ ರಾವ್ ಬನ್ನಂಜೆ ಇವರಲ್ಲಿ ಪ್ರಾರಂಭಿಸಿದ್ದು, ಪ್ರಸ್ತುತ ಕಳೆದ ಮೂರು ವರ್ಷಗಳಿಂದ ವಿದ್ವಾನ್ ಸುಧೀರ್ ರಾವ್ ಕೊಡವೂರು ಹಾಗೂ ಮಾನಸಿ ಸುಧೀರ್ ಇವರ ಬಳಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದು, ವಿದ್ವತ್ ಪೂರ್ವಕ್ಕೆ ತಯಾರಿ ನಡೆಸುತ್ತಿದ್ದಾಳೆ. ವಿದುಷಿ ಮಾಧವಿ ಭಟ್ ಪೆರಣಂಕಿಲ ಇವರಲ್ಲಿ ಸಂಗೀತಭ್ಯಾಸವನ್ನು ಮತ್ತು ಕೆ.ಜೆ. ಗಣೇಶ್ ಆಚಾರ್ಯ, ಕೆ.ಜೆ. ಕೃಷ್ಣ ಆಚಾರ್ಯ ಹಾಗೂ ಕೆ.ಜೆ. ಸುಧೀಂದ್ರ ಆಚಾರ್ಯ ಸಹೋದರರಿಂದ ಯಕ್ಷಗಾನ ಶಿಕ್ಷಣವನ್ನು ಪಡೆದಿರುವ ಈಕೆ ಪ್ರಸ್ತುತ ವೃತ್ತಿಯೊಂದಿಗೆ ನೃತ್ಯ ಮತ್ತು ಸಂಗೀತ ಎರಡೂ ಕ್ಷೇತ್ರದಲ್ಲೂ ಕಾರ್ಯಕ್ರಮಗಳನ್ನು ನೀಡಿರುತ್ತಾಳೆ.