ಮೈಸೂರು : ವಿಶ್ವವಿದ್ಯಾನಿಲಯ ಲಲಿತ ಕಲಾ ಕಾಲೇಜು ಮಾನಸಗಂಗೋತ್ರಿ ಮೈಸೂರು ಇಲ್ಲಿ ಶ್ರೀ ಗುಬ್ಬಿ ವೀರಣ್ಣ ಪೀಠದ ವತಿಯಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ರಂಗಾಸಕ್ತರಿಗಾಗಿ ಒಂದು ದಿನದ ಪ್ರಸಾಧನ ಹಾಗೂ ಮುಖವಾಡ ತಯಾರಿಕಾ ಕಾರ್ಯಗಾರ ದಿನಾಂಕ 26 ಅಕ್ಟೋಬರ್ 2024 ರಂದು ನಡೆಯಿತು.
ಶ್ರೀ ಗುಬ್ಬಿ ವೀರಣ್ಣ ಪೀಠದ ರಂಗತಜ್ಞರಾದ ಅರಸೀಕೆರೆ ಯೋಗಾನಂದ ಇವರು ಪ್ರಾಸ್ತಾವಿಕವಾಗಿ ಮಾತನಾಡುಡಿ “ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಇಂತಹ ಕಾರ್ಯಾಗಾರಗಳ ಅಗತ್ಯವಿದ್ದು, ಮುಂದಿನ ಪ್ರತಿ ಶನಿವಾರದಂದು ಅಭಿನಯ, ವಾಚಿಕ, ರಂಗಸಂಗೀತ, ವಸ್ತ್ರಾಲಂಕಾರ ಮುಂತಾದ ವಿಷಯಗಳ ಕುರಿತು ಕಾರ್ಯಾಗಾರಗಳು ನೆಡೆಯಲಿವೆ.” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಅನಿಟ ಬ್ರಾಗ್ಸ್ ಮಾತನಾಡಿ ಲಲಿತ ಕಲಾ ಕಾಲೇಜು 60ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಂದು ಓಪನ್ ಎಲೆಕ್ಟೀವ್ ಇದರ ಸ್ನಾತಕೋತ್ತರ ಹಾಗೂ ಸ್ನಾತಕಪೂರ್ವ ಅಧ್ಯಯನ ನೆಡೆಸುತ್ತಿರುವ ಸುಮಾರು 80 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.” ಎಂದರು.
ರಂಗಾಯಣದ ಹಿರಿಯ ಕಲಾವಿದರಾದ ಶ್ರೀ ಸಂತೋಷ್ ಕುಮಾರ್ ಕೂಸನೂರು ಇವರು ವಿವಿಧ ರೀತಿಯ ಮುಖವರ್ಣಿಕೆ ಮಾಡಿ ತೋರಿಸಿದರು. ಕಾಗದ ಹಾಗೂ ಪಿ. ಓ. ಪಿ. ಯಿಂದ ಮುಖವಾಡಗಳನ್ನು ಮಾಡುವ ವಿಧಾನ ಕಲಿಸಿಕೊಟ್ಟರು. ವಿದ್ಯಾರ್ಥಿಗಳು ಸ್ವತಃ ಒಬ್ಬರಿಗೊಬ್ಬರು ಪ್ರಸಾಧನ ಮಾಡಿ ಸಂಭ್ರಮಿಸಿದರು. ಮುಖವಾಡಗಳನ್ನು ತಯಾರಿಸಿ ಪ್ರದರ್ಶಿಸಿದರು. ಕಾಲೇಜಿನ ಅಧ್ಯಾಪಕರಾದ ಸುಬ್ಬುಲಕ್ಷ್ಮಿ, ಗೀತಾ, ಸೂರ್ಯಪ್ರಭ, ಮೇಘ ಸಮೀರ, ನಾಗೇಂದ್ರ, ರಂಗ ಕರ್ಮಿಗಳಾದ ಶ್ರೀನಿವಾಸ ಪಾಲಹಳ್ಳಿ, ಕೆಂಪರಾಜು, ನಿಂಗರಾಜ ಹಾಗೂ ಚಿತ್ತಣ್ಣ ಮುಂತಾದವರು ಭಾಗವಹಿಸಿದ್ದರು.