ಮಡಿಕೇರಿ : ಕೊಡವ ಮಕ್ಕಡ ಕೂಟದ 98ನೇ ಪುಸ್ತಕ, ಲೇಖಕಿ ಡಾ. ದೀಪಾ ನರೇಂದ್ರ ಬಾಬು ಅವರ ‘ಗುಳೆ’ ಕನ್ನಡ ಕಾದಂಬರಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 24 ಅಕ್ಟೋಬರ್ 2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತು ಇದರ ಅಧ್ಯಕ್ಷರಾದ ಬಿ. ಜಿ. ಅನಂತಶಯನ ಮಾತನಾಡಿ “ಕೊಡಗಿಗೆ ಕಾರ್ಮಿಕರಾಗಿ ವಲಸೆ ಬರುವವರ ಜೀವನವನ್ನು ಅಧ್ಯಯನ ನಡೆಸಿ, ಅದನ್ನು ಲೇಖಕರು ಅತ್ಯಂತ ಪರಿಣಾಮಕಾರಿಯಾಗಿ ಕಾದಂಬರಿಯ ರೂಪಕ್ಕೆ ಇಳಿಸಿದ್ದಾರೆ.” ಎಂದರು.
ಪುಸ್ತಕದ ಲೇಖಕಿ ಡಾ .ದೀಪಾ ನರೇಂದ್ರ ಬಾಬು ಮಾತನಾಡಿ “ಗುಳೆ ಎಂದರೆ ‘ವಲಸೆ’ ಎಂದರ್ಥ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ವಲಸೆ ಹೋದವರೇ ಆಗಿದ್ದೇವೆ. ವಿಜ್ಞಾನ, ಆಧುನಿಕ ತಂತ್ರಜ್ಞಾನ ಬೆಳೆದಂತೆ ಶಿಕ್ಷಣವನ್ನು ಓಳಗೊಂಡಂತೆ ಎಲ್ಲಿ ಬದುಕಿಗೆ ಅವಕಾಶಗಳಿವೆ ಅಲ್ಲಿಗೆ ವಲಸೆ ಹೋಗುವಂತಾಗಿದೆ. ಕೊಡಗಿನ ಕಾಫಿ ಮತ್ತು ಟೀ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಲು ವಲಸೆ ಬಂದ ಕೆಲಸಗಾರರು ತಮ್ಮ ಕೆಲಸದ ನಡುವೆಯೂ ಅವರ ಸಂಸ್ಕೃತಿ, ಸಂಪ್ರದಾಯ, ದೈವಾರಾಧನೆಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಇಂತಹ ಅಂಶಗಳನ್ನು ತನ್ನ ‘ಗುಳೆ’ ಕಾದಂಬರಿಯಲ್ಲಿ ಪ್ರತಿಬಿಂಬಿಸಲಾಗಿದೆ.” ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ಬಿ. ರಾಘವ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ. ಟಿ. ಬೇಬಿ ಮ್ಯಾಥ್ಯು, ಕೊಡವ ಮತ್ತು ಕನ್ನಡ ಚಲನಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಉಪಸ್ಥಿತರಿದ್ದರು.