ಮೂಡಬಿದಿರೆ : ಮೂಡಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ ಖ್ಯಾತ ಪತ್ರಕರ್ತರಾಗಿದ್ದ ವಕೀಲ ವೇಣುಗೋಪಾಲ್ ಮತ್ತು ಡಾ. ಶೇಖರ ಅಜೆಕಾರು ಇವರುಗಳ ಸಂಸ್ಮರಣ ಕಾರ್ಯಕ್ರಮ ಹಾಗೂ ಬಹುಭಾಷಾ ಕವಿಗೋಷ್ಠಿಯು ದಿನಾಂಕ 25 ಅಕ್ಟೋಬರ್ 2024ರಂದು ಮೂಡಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.
ಪತ್ರಕರ್ತೆ ಪ್ರೇಮಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಾಜಿ ಶಾಸಕ ಹಾಗೂ ಮಂತ್ರಿಯಾದ ಶ್ರೀ ಅಭಯಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಬಹುಮುಖ ಪ್ರತಿಭೆಯ ಡಾ. ಶೇಖರ ಅಜೆಕಾರು ವಿಶೇಷವಾಗಿ ಮೂಡುಬಿದಿರೆಯಲ್ಲಿ ಹಲವುಕಾಲ ನೆಲಸಿ ‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’ದಂತಹ ಹಲವಾರು ವಿಭಿನ್ನ ಮಾದರಿಯ ಕಾರ್ಯಕ್ರಮದ ರೂವಾರಿಗಳಾಗಿದ್ದು, ಹಲವಾರು ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿದ್ದರು. ಹಾಗೂ ವಕೀಲರಾಗಿದ್ದ ವೇಣುಗೋಪಾಲರ ಶ್ರಮದ ಫಲವಾಗಿ ಸ್ವತಂತ್ರ ಪತ್ರಕರ್ತರಿಗೆ ಕೊಠಡಿ ಲಭ್ಯವಾಯಿತು.” ಎಂದರು
ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಇವರು ‘ಮಾಧ್ಯಮ ಮತ್ತು ವಿಶ್ವಾಸಾರ್ಹತೆ’ ಎಂಬ ವಿಷಯದ ಕುರಿತು ಮಾತನಾಡಿ “ಜಾಲತಾಣಗಳ ಮತ್ತು ಯಂತ್ರ ಮಾದ್ಯಮಗಳ ಪೈಪೋಟಿಯ ಮಧ್ಯೆ ಇಂದಿಗೂ ಪ್ರತಿಶತ ತೊಂಭತ್ತರಷ್ಟು ನಂಬುಗೆಗೆ ಪಾತ್ರವಾಗಿ ಪತ್ರಿಕಾ ಮಾಧ್ಯಮವೇ ಇದೆ.” ಎಂದರು.
ವೇಣುಗೋಪಾಲರ ಸಂಸ್ಮರಣೆ ಮಾಡುತ್ತಾ ಮಾತನಾಡಿದ ಖ್ಯಾತ ನ್ಯಾಯವಾದಿ ಬಾಹುಬಲಿ ಪ್ರಸಾದ್ “ವಕೀಲರಾದ ಇವರ ಪತ್ರಿಕಾ ಪ್ರೇಮ ಹಾಗೂ ನ್ಯಾಯಾಲಯದಲ್ಲಿ ಹಲವಾರು ತೀರ್ಪುಗಳ ಬಗೆಗೆ ಅವರು ತೋರಿಸುತ್ತಿದ್ದ ಒಲವು ಮುಂದಿನ ತಲೆಮಾರಿಗೆ ಮಾರ್ಗಸೂಚಿ.” ಎಂದರು.
ಮೂಡಬಿದಿರೆ .ಕ. ಸಾ. ಪ ಇದರ ಕಾರ್ಯದರ್ಶಿ ಸದಾನಂದ ನಾರಾವಿಯವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಢಿಯ ಚಾಲನೆಯನ್ನು ಹವ್ಯಕ ಭಾಷೆಯ ಶೃಂಗಾರ ಗಜಲ್ ರೂಪಕದ ಮೂಲಕ ಮಂಗಳೂರಿನ ವೈದ್ಯ ಕಣಚೂರು ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಹಾಗೂ ಬರಹಗಾರ ಸುರೇಶ ನೆಗಳಗುಳಿಯವರು ನೆರವೇರಿಸಿದರು.
ಹೆರಾಲ್ಡ್ ತೆರಾವೋ, ರೇಮಂಡ್ ಡಿಕುನ್ಹಾ ಪರವಾಗಿ ರಿಯಾನಾ ಹಾಗೂ ಮುಕುಂದ ಮಿಜಾರು ಕೊಂಕಣಿಯಲ್ಲಿ, ಹಸನಬ್ಬ ಬ್ಯಾರಿ ಭಾಷೆಯಲ್ಲಿ, ವನಜಾ ಜೋಶಿ ಚಿತ್ಪಾವನ ಭಾಷೆಯಲ್ಲಿ, ಲಿಂಗಪ್ಪ ಗೌಡ ನೀರ್ಕೆರೆ ಕುಡುಬಿ ಭಾಷೆಯಲ್ಲಿ, ಪದ್ಮನಾಭ ಮಿಜಾರು ತುಳುವಿನಲ್ಲಿ, ಸೌಮ್ಯಾ ಕುಗ್ವೆ ಹವ್ಯಕ ಭಾಷೆ ಮತ್ತು ಕನ್ನಡದಲ್ಲಿ ಅನಿತಾ ಶೆಟ್ಡಿ, ಶರಣ್ಯ ಬೆಳುವಾಯಿ, ನಾಗಶ್ರೀ ಭಂಡಾರಿ, ರಾಮಕೃಷ್ಣ ಶಿರೂರು ಹಾಗೂ ಕಾರ್ಯಕ್ರಮದ ರೂವಾರಿ ಧನಂಜಯ ಮೂಡುಬಿದಿರೆ ಕವನ ವಾಚಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸದಾನಂದ ನಾರಾವಿ ಇಬ್ಬರೂ ಪತ್ರಕರ್ತರ ವಿಶೇಷ ಗುಣಗಳ ಬಗ್ಗೆ ಹೇಳುತ್ತಾ ಕವನ ವಾಚಿಸಿದ ಸರ್ವರನ್ನೂ ಅಭಿನಂದಿಸಿದರು . ಪತ್ರಕರ್ತ ಬಿ. ಕೆ. ಅಶ್ರಫ್ ವಾಲ್ಪಾಡಿಯವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪ್ರಸನ್ನ ಹೆಗಡೆ, ಜೈಸನ್ ತಾಕೊಡೆ, ನವೀನ್ ಸಾಲ್ಯಾನ್, ಪುಂಡಿಕಾಯಿ ಗಣಪಯ್ಯ, ಕೆ. ಕೇಶವ ಭಟ್, ಹರೀಶ್ ಕೆ. ಆದೂರು ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅದ್ಯಕ್ಷ ಬಿ. ಸೀತಾರಾಮ ಆಚಾರ್ಯ ಅತಿಥಿ ಹಾಗೂ ಎಲ್ಲಾ ಕವಿಗಳಿಗೆ ಧನ್ಯವಾದ ಅರ್ಪಿಸಿದರು.