ಮಂಗಳೂರು: ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಹಾಗೂ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಸಭೆಯು ದಿನಾಂಕ 27 ಅಕ್ಟೋಬರ್ 2024ರ ಭಾನುವಾರದಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಯಕ್ಷಗಾನ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರ ಹಾಸ್ಯ ಬುದ್ದಿಗೆ ಚುರುಕು ಮುಟ್ಟಿಸುವಂತಹದ್ದು. ಪಾತ್ರೋಚಿತವಾಗಿ ಹಾಸ್ಯ ರಸವನ್ನು ಹುಟ್ಟಿಸುವ ಮೇಧಾಶಕ್ತಿ ಅವರಿಗಿತ್ತು. ಅವರ ಆದರ್ಶದ ಬೆಳಕಿನಲ್ಲಿ ಹೊಸ ಕಲಾವಿದರು ರೂಪುಗೊಳ್ಳಬೇಕು. ಈಗಿನ ಅನೇಕ ಕಲಾವಿದರಿಗೆ ಪರಂಪರೆಯ ಹಾಸ್ಯ ಗೊತ್ತಿಲ್ಲ. ಹಗುರ ರಂಜನೆ ಒದಗಿಸಲು ಹೋಗುವ ಅವರು ತಮ್ಮ ಚೇಷ್ಟೆ, ಅಶ್ಲೀಲತೆ ಮಾತುಗಳಿಂದ ಅಪಹಾಸ್ಯಕ್ಕೀಡಾಗುವುದೇ ಜಾಸ್ತಿ. ಆದರೆ, ಬಂಟ್ವಾಳ ಜಯರಾಮ ಆಚಾರ್ಯರ ಮಾತುಗಳಲ್ಲಿ ಅಪಸವ್ಯಕ್ಕೆ ಅವಕಾಶವೇ ಇರಲಿಲ್ಲ. ಭಾಷಾ ಶುದ್ಧಿಗೆ ಮಹತ್ವ ನೀಡುತ್ತಿದ್ದ ಅವರಿಗೆ ಪುರಾಣದ ಅದ್ಭುತ ಜ್ಞಾನವಿತ್ತು. ವಿದ್ವಾಂಸರೂ ಅವರ ಮಾತುಗಳಿಗೆ ಮಾರು ಹೋಗುತ್ತಿದ್ದರು.” ಎಂದರು.
ಯಕ್ಷಗಾನ ಕಲಾವಿದ ಎಂ. ಕೆ. ರಮೇಶ ಆಚಾರ್ಯ ಮಾತನಾಡಿ “ಯಕ್ಷಗಾನದ ಪ್ರೇಕ್ಷಕರು ಮೆಚ್ಚಿದ್ದು ಕೆಲವರನ್ನು ಮಾತ್ರ. ಅಂತಹವರಲ್ಲಿ ಜಯರಾಮ ಒಬ್ಬ. ಮೇರು ಕಲಾವಿದರ ಒಳ್ಳೆಯ ಅಂಶಗಳನ್ನು ಗ್ರಹಿಸಿ ಅದನ್ನು ತನ್ನದೇ ಶೈಲಿಯಲ್ಲಿ ಪ್ರಸ್ತುತ ಪಡಿಸುತ್ತಿದ್ದ. ಎಲ್ಲ ಕಲಾವಿದನನ್ನು ಸದಾ ಗೌರವಿಸುತ್ತಿದ್ದ ನಿಸ್ವಾರ್ಥ ಮನೋಭಾವದ ಕಲಾವಿದ.” ಎಂದರು.
ಮುಂಬೈನ ಜಿ. ಟಿ. ಆಚಾರ್ ಮಾತನಾಡಿ “ಯಾವುದೇ ಪಾತ್ರವನ್ನು ನಿರ್ವಹಿಸುವಾಗಲೂ ಜಯರಾಮ ಆಚಾರ್ಯರು ಪಾತ್ರ ಪ್ರಜ್ಞೆಯ ಚೌಕಟ್ಟು ಮೀರುತ್ತಿರಲಿಲ್ಲ. ಅವರು ಹಣದ ಹಿಂದೆ ಹೋದ ಕಲಾವಿದರಲ್ಲ. ತಮ್ಮ ಪ್ರತಿಭೆ ಮೂಲಕವೇ ಅಭಿಮಾನಿಗಳನ್ನು ಗಳಿಸಿದ ಶ್ರೀಮಂತ.” ಎಂದರು.
ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ಕಾಳಿಕಾಂಬಾ ವಿನಾಯಕ ಯಕ್ಷಗಾನ ಕೇಂದ್ರದ ಪಿ. ಆರ್. ಗೋಪಾಲಕೃಷ್ಣ ಆಚಾರ್ಯ, ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಎಸ್. ಪಿ. ಗುರುದಾಸ್, ಪಶುಪತಿ ಉಳ್ಳಾಲ, ಮುಂಬೈ ವಿಶ್ವಕರ್ಮ ಸಂಘದ ಗಣೇಶ ಆಚಾರ್ಯ, ಮಾತನಾಡಿದರು. ವಿಶ್ವಕರ್ಮ ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ ಹಾಗೂ ಖಜಾಂಚಿ ಎ. ಜಿ. ಸದಾಶಿವ ಭಾಗವಹಿಸಿದ್ದರು.