ಡಾ. ಸುರೇಶ ನೆಗಳಗುಳಿಯವರು ಬಂಟ್ವಾಳ ತಾಲೂಕಿನ ಆಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಜನಿಸಿದವರು. ಇವರ ತಂದೆ ಶ್ರೀ ತಿಮ್ಮಣ್ಣ ಭಟ್ಟ ಮತ್ತು ತಾಯಿ ಶ್ರೀಮತಿ ಸಾವಿತ್ರಿಯವರ ಕೊನೆಯ ಪುತ್ರ. 1980ರಿಂದ 1988 ತನಕ ವೈದ್ಯಕೀಯ ಸೇವೆ 1988-1997 ಕೊಪ್ಪ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ, ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ದುಡಿದವರು. ಬಳಿಕ 1997-2012-ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಂತರ 2012-2017 ತನಕ ಕೇರಳ ಶೋರನೂರು ಪಿ.ಎನ್.ಎನ್.ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ, ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 2017ರಿಂದ ಇಂದಿನ ತನಕ ಮಣಿಪಾಲದ ಎಂ.ಐ.ಎ.ಎಮ್.ಎಸ್. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಡುವೆ 2012ರಿಂದ ಈ ತನಕ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಶಸ್ತ್ರಚಿಕಿತ್ಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
ಕರುನಾಡಿನ ಸಾಹಿತ್ಯ ಲೋಕಕ್ಕೆ ಇವರು :-
‘ತುಷಾರ ಬಿಂದು’ ಎಂಬ ತುಷಾರ ಮಾಸಪತ್ರಿಕೆಯ ಚಿತ್ರಕವನ ವಿಭಾಗದಲ್ಲಿ ವಿಜೇತವಾದ ತಮ್ಮ ಕವನಗಳ ಸಂಕಲನ ‘ಪಡುಗಡಲ ತೆರೆಮಿಂಚು’ ಎಂಬ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ವಿಜೇತ ಗಜಲ್ ಸಂಕಲನ, ‘ಗೋ ಗೀತೆ’ ಎಂಬ ಗೋವಿನ ಮಹತ್ವ ಸಾರುವ ನೂರು ಚುಟುಕಗಳು ಮತ್ತು ‘ನೆಗಳಗುಳಿ ಗಜಲ್’ ಎಂಬ ಆರು ಭಾಷೆಯ ಗಜಲ್ ಸಂಕಲನ. ‘ಧೀರತಮ್ಮನ ಕಬ್ಬ’ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಕಯ್ಯಾರ ಕಿಂಞಣ್ಣ ರೈಯವರ ಆಶಯ ನುಡಿ ಸಹಿತದ ಕಗ್ಗ ಮಾದರಿಯ ಹನಿಗಳು, ಇದೀಗ ‘ಧೀರತಮ್ಮನ ಕಬ್ಬ’ ಸಂಪುಟ 3 ಮುಕ್ತಕ ಸಂಕಲನ ಲೋಕಾರ್ಪಣೆ ಮಾಡಿದ್ದಾರೆ. ‘ಕಾವ್ಯ ಭೋಜನ’ – ಪ್ರಥಮ ಬಹುಮಾನ ಪಡೆದ 370 ಆಶು ಚುಟುಕು ಸಂಕಲನ. ‘ಕಡಲ ಹೂವು’ ಗಜಲ್ ಸಂಕಲನ ಮತ್ತು ‘ಕಡಲ ಹನಿ ಒಡಲ ಧ್ವನಿ’ ಎಂಬೆರಡು ಸಂಕಲನಗಳೂ ಅಚ್ಚಿನಲ್ಲಿವೆ ಎಂದು ಹೇಳುತ್ತಾರೆ.
ಪುತ್ತೂರಿನ ನಾರಾಯಣ ಸೂದನರವರ ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಲೇಖಕರು ಮತ್ತು ಡಾ. ಸುರೇಶ್ ನೆಗಳಗುಳಿ ಇವರು ಒಂದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಚಿತ್ರ. 2021 ಬಂಟ್ವಾಳ ತಾಲೂಕು ಕ.ಸಾ.ಪ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಇವರ ಭಾಷಣವನ್ನು ಪ್ರಕಟಿಸಲಾಗಿದೆ.
ವೃತ್ತಿ ಜೀವನದ ವೈದ್ಯಕೀಯ ರಂಗದಲ್ಲಿ ಮೂಡಬಿದರೆ ವೈದ್ಯ ಸಂಘದ ಅಧ್ಯಕ್ಷರಾಗಿ ಗೌರವ ಪಡೆದಿದ್ದಾರೆ. ಹುಟ್ಟೂರಿನಲ್ಲಿ ಗಡಿನಾಡ ವೈದ್ಯ ಪ್ರಶಸ್ತಿ, ರಾಜ್ಯಮಟ್ಟದ ಯುವ ಬರಹಗಾರ ಪ್ರಶಸ್ತಿ, ಕಾವ್ಯ ವಿಭೂಷಣ ಪ್ರಶಸ್ತಿ, ರಾಜ್ಯಮಟ್ಟದ ಕೆ.ಎಸ್.ನ ಕಾವ್ಯ ಸನ್ಮಾನ, ಸ್ಫೂರ್ತಿ ರತ್ನ ಪ್ರಶಸ್ತಿ, ಕಥಾ ಸಂಗಮದ ಚೈತನ್ಯಶ್ರೀ ಪ್ರಶಸ್ತಿ, ಭಕ್ತಿಗೀತೆ ರಚನೆಗೆ ಧರ್ಮಜ್ಯೋತಿ ಪ್ರಶಸ್ತಿ, ಹೊಯ್ಸಳ ರಾಜ್ಯ ಪ್ರಶಸ್ತಿ, ಮೈಸೂರಿನಲ್ಲಿ ಪ್ರಜಾರತ್ನ ಸೇವಾರತ್ನ ಪ್ರಶಸ್ತಿ, ಪ್ರಕೃತಿ ರತ್ನ ಪ್ರಶಸ್ತಿ, ಕೊರೋನಾ ವಾರಿಯರ್ ಪ್ರಶಸ್ತಿ ಮತ್ತು ಸನ್ಮಾನ, ಸಾಹಿತ್ಯ ರತ್ನ ಪ್ರಶಸ್ತಿ ಚಿತ್ರದುರ್ಗ, ಯುಗಪುರುಷ ಪ್ರಶಸ್ತಿ, ಕಿನ್ನಿಗೋಳಿ ಎ.ಎಫ್.ಐ. ಮತ್ತು ಕೆ.ಎಂ.ಸಿ. ಜಂಟಿಯಾಗಿ ಕೊಡ ಮಾಡಿದ ವೈದ್ಯ – ಸಾಹಿತಿ ಪುರಸ್ಕಾರ (may 22) ಕರುನಾಡ ಮಹನೀಯ – 2022 ಮೈಸೂರು ಕೆಂಪೇಗೌಡ ಪ್ರಶಸ್ತಿ – 2022 ಬೆಂಗಳೂರು ಇತ್ಯಾದಿಗಳಿಗೆ ಭಾಜನರಾಗಿದ್ದಾರೆ.
ದೂರದರ್ಶನ, ಆಕಾಶವಾಣಿಗಳಲ್ಲಿ ಸಂವಾದ ಕವಿಯಾಗಿ ಸಮಯ, ಉದಯವಾಣಿ, ತುಷಾರ, ಪರ್ಯಂತ ಹಾಗೂ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ತರಹೇವಾರಿ ಬರಹಗಳು ಪ್ರಕಟವಾಗಿವೆ. ಇದಲ್ಲದೆ ಪ್ರಸ್ತುತ ಬಹಳ ಮುಂಚೂಣಿಯಲ್ಲಿರುವ ಜಾಲತಾಣ ಸಾಹಿತ್ಯದ ಅನೇಕ ಬಳಗಗಳಲ್ಲಿ ಸುಮಾರು ನೂರರಷ್ಟು ಪ್ರಶಸ್ತಿ ಹಾಗೂ ಸ್ಥಾನಮಾನ, ತುಷಾರ ಚಿತ್ರಕವನಗಳಲ್ಲಿ ಎಂಭತ್ತಕ್ಕೂ ಹೆಚ್ಚು ಚಿತ್ರಕವನಗಳಲ್ಲಿ ವಿಜೇತರಾಗಿದ್ದು, ಅಷ್ಟೇ ಮೆಚ್ಚುಗೆಯ ಸ್ಥಾನವೂ ಪ್ರಾಪ್ತಿಯಾಗಿರುತ್ತದೆ. 21-02-2021ರಂದು ನಡೆದ ಬಂಟ್ವಾಳ ತಾಲೂಕಿನ ಕನ್ನಡ ಭವನದ ಲೋಕಾರ್ಪಣೆಯನ್ನು ಇವರ ಹಸ್ತದಿಂದ ಮಾಡಿಸಲಾಗಿದೆ. 21ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರಿಗೆ ಲಭಿಸಿದ್ದು, ತನ್ನ ತಾಯ್ತಾಡಿನ ಗುರುತಿಸುವಿಕೆಗೆ ಸಾಕ್ಷವಾಗಿದೆ.
1981ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಕ್ರಿಯವಾಗಿದ್ದು ಹೋರಾಟಗಾರ ಸನ್ಮಾನ ಪಡೆದಿದ್ದಾರೆ. ಬದಲಾಗದವರು ಎಂಬ ಚಲನ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ನಟಿಸಿ ಚಿತ್ರನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕಾಶವಾಣಿ ಮಂಗಳೂರು ಭದ್ರಾವತಿ ಹಾಗೂ ಸ್ಥಳೀಯ ದೂರದರ್ಶನಗಳಲ್ಲಿ ಹಲವಾರು ರಶ್ಮಿ ಚಿಂತನ ಸಂದರ್ಶನ ಕವನ ವಾಚನ ವೈದ್ಯಕೀಯ ಸಲಹೆ ಇತ್ಯಾದಿಗಳು ಪ್ರಸಾರವಾಗಿವೆ. ಜೇಸಿ ಹೆಚ್.ಜಿ.ಎಫ್. ಮಾಜಿ ಅಧ್ಯಕ್ಷ ರೋಟರಿ ಸಕ್ರಿಯ ಸದಸ್ಯರಾಗಿದ್ದಾರೆ. ಪ್ರಸ್ತುತ ಕದ್ರಿ ಹಿಲ್ಸ್ ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಪ್ರಸ್ತುತ ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಚರ್ಮರೋಗಗಳ ವಿಶೇಷಕಾರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಕರಾಗಿರುವ ಇವರ ಪತ್ನಿ ವೈದ್ಯೆ ಡಾ. ಸಾವಿತ್ರಿ, ಪುತ್ರ ಕರ್ಣಾಟಕ ಬ್ಯಾಂಕಿನ ಉದ್ಯೋಗಿ ಸುಹಾಸ ನೆಗಳಗುಳಿ ಮತ್ತು ಸೊಸೆ ಶುಭಲಕ್ಷ್ಮಿಯರೊಂದಿಗೆ ಮಂಗಳೂರಿನ ಎಕ್ಕೂರು ಸಮೀಪ ತಮ್ಮ ನಿವಾಸ ‘ಸುಹಾಸ’ದಲ್ಲಿ ವೈದ್ಯ ವೃತ್ತಿಯೊಂದಿಗೆ ವಾಸವಾಗಿದ್ದಾರೆ. ಹಾಲಿ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆಗಿದ್ದಾರೆ. ಇವರ ಮುಂದಿನ ಬದುಕು ಬರೆಹಗಳು ಇನ್ನಷ್ಟು ಉನ್ನತವಾದ ಮಟ್ಟದಲ್ಲಿ ಬೆಳಕು ಕಾಣಲಿ ಎಂದು ಹಾರೈಸೋಣ.
ಲೇಖಕ ವೈಲೇಶ ಪಿ.ಎಸ್. ಕೊಡಗು
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.