ತೀರ್ಥಹಳ್ಳಿ : ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ತಾಲ್ಲೂಕು ಆಡಳಿತ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕನ್ನಡ ಜ್ಯೋತಿ ರಥಕ್ಕೆ ಸೀಬಿನಕೆರೆಯಲ್ಲಿ ಸ್ವಾಗತ ಹಾಗೂ ತೀರ್ಥಹಳ್ಳಿಯ ಬಂಟರ ಭವನದಲ್ಲಿ ಸಭಾಕಾರ್ಯಕ್ರಮವು ದಿನಾಂಕ 27 ಅಕ್ಟೋಬರ್ 2024ರಂದು ನಡೆಯಿತು.
ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಡಿ. ಎಸ್. ಸೋಮಶೇಖರ್ “ಭಾಷೆ ಅಂತರಂಗದ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ ಸಾಧನ. ಹಾಗಾಗಿ ಕನ್ನಡ ಭಾಷೆಯಲ್ಲ ಅದೊಂದು ಪುರಾತನವಾದ ಸಂಸ್ಕೃತಿ. ಕನ್ನಡದ ಪದಗಳು ಸಿಂಧೂ ನಾಗರೀಕತೆ ಕಾಲದಿಂದ ಬಳಕೆಯಲ್ಲಿದೆ. ಅಗ್ರಹಾರದಲ್ಲಿ ವ್ಯಾಸಂಗ ಮಾಡಿದ ಪಾಂಡಿತ್ಯ ಇಲ್ಲದಿದ್ದರೂ ಜಾನಪದ ಪ್ರಕಾರಗಳ ಮೂಲಕ ಕನ್ನಡ ಸಾಹಿತ್ಯದ ಶಕ್ತಿಯಾಗಿ ಬೆಳೆದು ಬಂದಿದೆ. ನಾಲ್ಕನೇ ಮೈಸೂರು ಯುದ್ಧದ ನಂತರ ಮೈಸೂರು ಪ್ರಾಂತ್ಯ ಒಡೆದು ಹೋಯಿತು. ಒಡೆದ ರಾಜ್ಯವನ್ನು ಒಟ್ಟುಗೂಡಿಸಲು ಕವಿಗಳು, ದಾರ್ಶನಿಕರು, ಸಕ್ರಿಯ ರಾಜಕಾರಣಿಗಳು ಶ್ರಮಿಸಿದರು. ಅದರ ಫಲವಾಗಿ ಕರ್ನಾಟಕ ಏಕೀಕರಣ ನಡೆಯಿತು.” ಎಂದು ವಿವರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ “ಕನ್ನಡದ ಜೊತೆಗೆ 73 ಉಪ ಭಾಷೆಗಳು ಇವೆ. ಉರ್ದು ಶಾಲೆಯಲ್ಲಿ ಕನ್ನಡ ಪರಕೀಯ ಭಾಷೆಯಾಗುತ್ತಿದೆ. ಶೈಕ್ಷಣಿಕವಾಗಿ ಉರ್ದು ಶಾಲೆಯ ಮಕ್ಕಳು ಅತೀ ಹೆಚ್ಚು ಅನುತ್ತೀರ್ಣ ಆಗುತ್ತಿದ್ದಾರೆ. ಕನ್ನಡ ಕಲಿಸುವ ಪ್ರಯತ್ನ ನಡೆಸುತ್ತಿದ್ದೇವೆ.” ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮೂಲಕ ಸೀಬಿನಕೆರೆ ಕೋರ್ಟ್ ಎದುರು ಕನ್ನಡ ರಥ ಮೆರವಣಿಗೆಗೆ ಚಾಲನೆ ನೀಡಿದರು. ಎಂ. ಎ. ಡಿ. ಬಿ. ಇದರ ಅಧ್ಯಕ್ಷರಾದ ಆರ್. ಎಂ. ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷೆಯಾದ ಗೀತಾ ರಮೇಶ್, ಕ. ಸಾ. ಪ. ತಾಲ್ಲೂಕು ಅಧ್ಯಕ್ಷ ಟಿ. ಕೆ. ರಮೇಶ್ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆಯಾದ ರೇಣುಕಾ ಎಂ. ಹೆಗಡೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಯಡೂರು ಸುರೇಂದ್ರ, ತಹಶೀಲ್ದಾರ್ ಕೆ. ಎಸ್. ರಂಜಿತ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಪ್ರಸನ್ನ ತಿರಳೇಬೈಲು ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಕುರುವಳ್ಳಿ ವಿಠಲ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.