ಬೆಂಗಳೂರು : ಬೆಂಗಳೂರಿನ ‘ಕಲಾಕದಂಬ ಆರ್ಟ್ ಸೆಂಟರ್’ ಸಂಸ್ಥೆಯ 2024ನೇ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರಂದು ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಕಲಾಸಂಘದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಚಂಡೆ ವಾದಕ ಶ್ರೀ ಶಿವಾನಂದ ಕೋಟ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಸಂಗೀತ ವಿದ್ವಾಂಸರಾದ ಡಾ. ಆರ್.ಕೆ. ಪದ್ಮನಾಭ ಮಾತನಾಡಿ “ಪ್ರಶಸ್ತಿಗೆ ಕಲಾವಿದ ಅರ್ಜಿ ಹಾಕುವುದಲ್ಲ. ಪ್ರಭಾವದಿಂದ ಕೊಂಡುಕೊಳ್ಳುವುದಲ್ಲ. ಪ್ರತಿಭೆಯನ್ನು ನೋಡಿ ಗುರುತಿಸಿ ಕೊಡುವುದೇ ನಿಜವಾದ ಪ್ರಶಸ್ತಿ. ನಮ್ಮ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯನ್ನು ಜೀವಂತವಿರಿಸಿ ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಕಲಾಕದಂಬ ಸಂಸ್ಥೆ ಹಿರಿಯ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ಮಹತ್ತರ ಕೆಲಸ ಮಾಡುತ್ತಿದೆ. ನಮ್ಮ ಈ ಜಾನಪದ ಸಾಂಪ್ರದಾಯಿಕ ಕಲೆಗಳು ತಮ್ಮ ಮೂಲ ಸ್ವರೂಪದಲ್ಲೇ ಇರಬೇಕು. ಪಾಶ್ಚಾತ್ಯ ಸಂಗೀತ ಬೆರೆಸದೆ ಶುದ್ದ ರೂಪದಲ್ಲಿರಿಸಿ ಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಶಿವಾನಂದ ಕೋಟ “ತಮ್ಮನ್ನು ಮೇಳದಲ್ಲಿ ಈ ಮಟ್ಟಕ್ಕೆ ಬೆಳೆಯುವುದಕ್ಕೆ ಕಾರಣರಾದವಾರು ನಾವಡರು. ಇಂದು ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ತಮ್ಮ ಭಾಗ್ಯ. ತಮ್ಮ ಇಂದಿನ ಸಾಧನೆಗೆ ತಂದೆ ತಾಯಿಯರ ಪ್ರೋತ್ಸಾಹ ಮತ್ತು ಯಕ್ಷಗಾನ ಗುರುಗಳಾದ ಎಂ. ಎನ್. ಮದ್ಯಸ್ಥರು ಕೊಟ್ಟ ಯಕ್ಷಶಿಕ್ಷಣ ಕಾರಣ.” ಎಂದು ಸ್ಮರಿಸಿಕೊಂಡರು. ಈ ಪ್ರಶಸ್ತಿಯು ಬೆಳ್ಳಿ ತಟ್ಟೆ, 15,000 ಸಾವಿರ ನಗದು ಸೇರಿದಂತೆ ಪ್ರಶಸ್ತಿ ಪತ್ರ ಒಳಗೊಂದಿತ್ತು.
ನಾವಡರ ನೆನಪು ಉಳಿಸುವ ಒಂದು ಪುತ್ಥಳಿ ಸ್ಥಾಪನೆಯಾಗಬೇಕೆಂಬ ಮುರಳೀಧರ ನಾವಡರ ಆಶಯಕ್ಕೆ ಸ್ಪಂಧಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ ಕುಮಾರ್ ಕೊಡ್ಗಿ “ಸೂಕ್ತ ಯೋಜನೆಯನ್ನ ಸಿದ್ಧಪಡಿಸಿಕೊಂಡು ಮುನ್ನಡೆಯೋಣ.” ಎಂಬ ಭರವಸೆಯ ಮಾತನಾಡಿದರು. ಚಲನಚಿತ್ರ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಮಾತನಾಡಿ “ಚಲನಚಿತ್ರದಲ್ಲಿ ಶಂಕರ್ ನಾಗರಂತೆ ನಾವಡರು ಕಿರಿಯ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಿದ ಮೇರುಕಂಠದ ಭಾಗವತರು.” ಎಂದರು.
ಕಲಾ ಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಪ್ರಾಸ್ತಾವಿಕ ಮಾತನಾಡಿದರು. ಯುವ ವಿಪ್ರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಅಡಿಗ, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಸಹೋದರಿ ಸುಶೀಲ ಉರಾಳ, ಕಲಾ ಕದಂಬ ಆರ್ಟ್ ಸೆಂಟರ್ ಇದರ ಗೌರವ ಅಧ್ಯಕ್ಷರಾದ ಶ್ರೀ ದೇವರಾಜ ಕರಬ ವಿಶ್ವನಾಥ ಉರಾಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮುರಳೀಧರ ನಾವಡರ ಶಿಷ್ಯರ ಹಾಡುಗಳು, ಕುಮಾರಿ ಮಧುಮಿತ ರವೀಂದ್ರ ಹಾಗೂ ಭೂಮಿ ಶೆಟ್ಟಿ ಇವರ ಭರತನಾಟ್ಯ, ಹೊಸ್ತೋಟ ಮಂಜುನಾಥ ಭಾಗವತರ ತೀರಾ ಅಪರೂಪದ ರಾಮಾಯಣ ಯಕ್ಷಗಾನ ಪ್ರಸಂಗ “ಕಾಲನೇಮಿ ಕಾಳಗ” ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.