ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ಸರಣಿ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 26 ಅಕ್ಟೋಬರ್ 2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಛಾಂದೋಗ್ಯ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಲು ಆಗಮಿಸಿದ ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರಾಹುಲ್ ರಾಜಶೇಖರ ಭಟ್ ಮಾತನಾಡಿ “ಎಲ್ಲ ಉಪನಿಷತ್ತುಗಳ ಸಾರವನ್ನು ಹೊಂದಿರುವ ಛಾಂದೋಗ್ಯ ಉಪನಿಷತ್ತು ಮೋಕ್ಷದೆಡೆಗೆ ಸಾಗಲು ಪೂರಕವಾಗುವ ವಿವಿಧ ಉಪಾಸನಾ ವಿಧಿಗಳನ್ನು ತಿಳಿಸಿಕೊಡುತ್ತದೆ. ಉಪಾಸನೆ ಮತ್ತು ನಿಷ್ಕಾಮ ಕರ್ಮದಿಂದ ಮನಸ್ಸಿನ ಏಕಾಗ್ರತೆ ಮತ್ತು ಚಿತ್ತಶುದ್ಧಿಯನ್ನು ಹೊಂದಿ ಮೋಕ್ಷವನ್ನು ಹೊಂದುವ ಬಗೆಯನ್ನು ಛಾಂದೋಗ್ಯ ಉಪನಿಷತ್ತು ವಿವರಿಸುತ್ತದೆ. ಮೋಕ್ಷಾಪೇಕ್ಷಿಗಳಿಗೆ ಇದು ಉತ್ತಮ ಮಾರ್ಗದರ್ಶಿಯಾಗಿದೆ.” ಎಂದರು.
ಅ. ಭಾ. ಸಾ. ಪ. ಇದರ ಗೌರವಾಧ್ಯಕ್ಷರಾದ ನಿತ್ಯಾನಂದ ಪೈಯವರು ಅಧ್ಯಕ್ಷತೆ ವಹಿಸಿದ್ದರು. ಕು. ಶಾರ್ವರಿ ಪ್ರಾರ್ಥಿಸಿ, ಸುಲೋಚನಾ ಬಿ.ವಿ. ಸ್ವಾಗತಿಸಿ, ಜಯಶ್ರೀ ಆದಿರಾಜ ಅಜ್ರ ಅತಿಥಿಗಳನ್ನು ಪರಿಚಯಿಸಿ, ಡಾ. ಸುಮತಿ ಪಿ. ಕಾರ್ಯಕ್ರಮ ನಿರ್ವಹಿಸಿ, ಮಿತ್ರಪ್ರಭಾ ಹೆಗ್ಡೆ ವಂದಿಸಿದರು.