ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ 60ರ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ 03 ನವೆಂಬರ್ 2024ರಂದು ಉಡುಪಿ ಕುಂಜಿಬೆಟ್ಟಿನಲ್ಲಿರುವ ಶಾರದಾ ರೆಸಿಡೆನ್ಸಿಯಲ್ ಶಾಲೆಯ ‘ಗೀತಾಂಜಲಿ ಸಭಾಂಗಣ’ದಲ್ಲಿ ಆಯೋಜಿಸಲಾಗಿದೆ. ಉಡುಪಿ ನಗರದ ಪ್ರೌಢಶಾಲೆಗಳಲ್ಲಿ ರಂಗತರಬೇತಿ ಹಾಗೂ ನಾಟಕ ತಯಾರಿ ಪ್ರಕ್ರಿಯೆಯ ‘ರಂಗಭೂಮಿ ರಂಗ ಶಿಕ್ಷಣ’ ಅಭಿಯಾನ ಮತ್ತು ಉಡುಪಿಯ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ನಾಟಕ ರಂಗದ ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ‘ರಂಗಭಾಷೆ’ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.
ಈ ಕಾರ್ಯಕ್ರಮವನ್ನು ರಂಗಭೂಮಿಯ ಗೌರವಾಧ್ಯಕ್ಷರು ಹಾಗೂ ಮಾಹೆ ಮಣಿಪಾಲ ಸಹಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಉದ್ಘಾಟನೆ ಮಾಡಲಿದ್ದು, ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿರುವರು. ರಂಗಭೂಮಿ ರಂಗ ಶಿಕ್ಷಣ ಅಭಿಯಾನದಲ್ಲಿ ಪಾಲ್ಗೊಳ್ಳುವ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ರಂಗ ನಿರ್ದೇಶಕರುಗಳಿಗೆ ಮತ್ತು ರಂಗಭಾಷೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವ ಕಾಲೇಜುಗಳ ಪ್ರಾಂಶುಪಾಲರಿಗೆ ಗೌರವಾರ್ಪಣೆ ಮಾಡಲಾಗುವುದು. ಸಭಾ ಕಾರ್ಯಕ್ರಮಕ್ಕಿಂತ ಮೊದಲು ಕಲಾಮಯಂ ಉಡುಪಿ ಇವರಿಂದ ರಂಗಗೀತೆ ಹಾಗೂ ಜಾನಪದ ಗೀತೆ ಪ್ರಸ್ತುತಗೊಳ್ಳಲಿದೆ.