ಮಂಗಳೂರು : ಯುವವಾಹಿನಿ ಸಂಸ್ಥೆ ನೀಡುವ ಪ್ರಸಕ್ತ ಸಾಲಿನ ‘ವಿಶುಕುಮಾರ್ ಪ್ರಶಸ್ತಿ’ಗೆ ಪತ್ರಿಕಾ ಸಂಪಾದಕ, ಸಾಹಿತಿ, ಸಂಶೋಧಕ ಶ್ರೀ ಬಾಬು ಶಿವ ಪೂಜಾರಿ ಆಯ್ಕೆಯಾಗಿದ್ದಾರೆ. ನಾಡು ಕಂಡ ಅಪ್ರತಿಮ ಪ್ರತಿಭಾಶಾಲಿ ಕಾದಂಬರಿಕಾರ, ಕತೆಗಾರ, ನಾಟಕಕಾರ, ರಂಗನಟ, ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಪತ್ರಕರ್ತ, ಅಂಕಣಕಾರ, ಸಂಪಾದಕ, ಸಂಘಟಕ ವಿಶುಕುಮಾರ್ ಇವರ ಸ್ಮರಣಾರ್ಥ ಯುವವಾಹಿನಿ ಸಂಸ್ಥೆಯು ಕಳೆದ 20 ವರ್ಷಗಳಿಂದ ‘ವಿಶುಕುಮಾರ್ ಪ್ರಶಸ್ತಿ’ ನೀಡುತ್ತಾ ಬಂದಿದೆ. ಈ ಸಾಲಿನ ಪ್ರಶಸ್ತಿಗೆ ಬಿ.ಎಂ. ರೋಹಿಣಿ, ಮುದ್ದು ಮೂಡುಬೆಳ್ಳೆ, ಡಾ. ಪ್ರಭಾಕರ ನೀರುಮಾರ್ಗ, ಡಾ. ಯೋಗೀಶ್ ಕೈರೋಡಿ, ಪ್ರೊ. ಶಶಿಲೇಖಾ ಇವರನ್ನೊಳಗೊಂಡ ಆಯ್ಕೆ ಸಮಿತಿ ಈ ಆಯ್ಕೆಯನ್ನು ನಡೆಸಿದೆ.
ದಿನಾಂಕ 10 ನವೆಂಬರ್ 2024ರಂದು ಉರ್ವಸ್ಟೋರ್ ನ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಯುವವಾಹಿನಿ ಸಂಸ್ಥೆಯ ವಿಶುಕುಮಾರ್ ದತ್ತಿ ನಿಧಿ ಸಮಿತಿಯ ಸಂಚಾಲಕ ಸುರೇಶ್ ಪೂಜಾರಿ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ತಿಳಿಸಿದ್ದಾರೆ.
ಹೊಟೇಲ್ ಉದ್ಯಮಿ ಶ್ರೀ ಬಾಬು ಶಿವ ಪೂಜಾರಿ ಇವರು ವೇದ, ಆಧುನಿಕ ಸಾಹಿತ್ಯ, ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದಾರೆ. ನಾರಾಯಣ ಗುರುಗಳ ಆದರ್ಶ, ನಾರಾಯಣ ಗುರು ವಿಜಯ ದರ್ಶನ, ಅನುಸಂಧಾನ, ಹಗ್ಗಿನ ಹನಿ ಮುಂತಾದವು ಇವರ ಕೃತಿಗಳು. ಶ್ರೀಕೃಷ್ಣ ದೇವರಾಯ, ಕೋಟಿ ಚೆನ್ನಯ್ಯ, ತುಳು ಸಂಸ್ಕೃತಿ, ಕಾಂತಬಾರೆ ಬೂದಬಾರೆ, ಸಿರಿ, ನಾಗಾರಾಧನೆ, ಭೂತಾರಾಧನೆ ಮತ್ತು ತುಳುನಾಡಿನ ಗರಡಿಗಳ ಬಗ್ಗೆ ಸಂಶೋಧನಾತ್ಮಕ ಫ್ರೌಡ ಲೇಖನಗಳನ್ನು ಪ್ರಕಟಿಸಿದ್ದು, ‘ನಾರಾಯಣ ಗುರು ವಿಜಯ ದರ್ಶನ’ವು ಆಧ್ಯಾತ್ಮ ಮತ್ತು ಸಾಮಾಜಿಕ ನೆಲೆಯಲ್ಲಿ ನೆಲದ ಸಂಕಟ ಮತ್ತು ಆಶೋತ್ತರಗಳನ್ನು ತೆರೆದಿಟ್ಟ ಕೃತಿಯಾಗಿದೆ.