ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಯಕ್ಷಕಲಾ ಕೇಂದ್ರಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ನಾಡು-ನುಡಿ ಚಿಂತನೆ – ಕನ್ನಡ ಭಾವ ಗಾಯನ’ ಕಾರ್ಯಕ್ರಮವು ದಿನಾಂಕ 01 ನವೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಮೊಳೆಯಾರ “ಕನ್ನಡ ಭಾಷೆ ಜನರನ್ನು ನಾಗರಿಕರು, ಸಂಸ್ಕೃತರು ಮತ್ತು ವಿವೇಕಿಗಳನ್ನಾಗಿಸಿದೆ. ಏಕೀಕರಣದ ಹಿಂದೆ ನಮ್ಮ ಹಿರಿಯರ ಶ್ರಮವಿದೆ. ಅವರ ಶ್ರಮ ವ್ಯರ್ಥವಾಗದಿರಲಿ, ಸದಾ ಕನ್ನಡ ಬೆಳೆಯುತ್ತಿರಲಿ, ಹೊಳೆಯುತ್ತಿರಲಿ. ಬದುಕಿಗೂ, ವಾಸ್ತವಕ್ಕೂ, ಭಾವನೆಗೂ ಕೊಂಡಿಯನ್ನು ಬೆಸೆಯುವ ಭಾಷೆ ನಮ್ಮ ಕನ್ನಡ. ಅದು ನಮ್ಮ ಬದುಕಿನ ದಾರಿದೀಪವಾಗಲಿ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಇವರು ‘ಯಾವುದೇ ಆಚರಣೆಯಾದರೂ ಆಚರಣೆಯ ಹಿಂದಿನ ಉದ್ದೇಶ ಅರಿತು ಬದುಕಿಗೆ ಅಳವಡಿಸಿಕೊಳ್ಳುವುದು ಅಗತ್ಯ. ಭಾಷೆ ಇಲ್ಲದೆ ಅಗತ್ಯ ಜ್ಞಾನ ಹೊಂದುವುದು ಅಥವಾ ಪಸರಿಸುವುದು ಸಾಧ್ಯವಿಲ್ಲ. ಭಾಷೆಯು ಸಂಸ್ಕೃತಿಯ ಅವಿಭಾಜ್ಯ ಅಂಗ. ಅದರಲ್ಲೂ ನಮ್ಮ ನಾಡ ಭಾಷೆ ಕನ್ನಡ ನಮ್ಮ ಬದುಕಿನ ಭಾಗವಾಗಲಿ. ಭಾಷೆಯ ಏಳಿಗೆ, ಅಭಿವೃದ್ಧಿಯೇ ನಮ್ಮ ಅಭಿವೃದ್ಧಿ’ ಎಂದು ಹೇಳಿದರು.
ನಂತರ ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕನ್ನಡ ಭಾವ ಗಾಯನ ಕಾರ್ಯಕ್ರಮ ನಡೆಯಿತು. ಸ್ವಾಯತ್ತ ಕಾಲೇಜಿನ ಆಡಳಿತ ವಿಭಾಗದ ಕುಲಸಚಿವರಾದ ಡಾ. ನೋರ್ಬಟ್ ಮಸ್ಕರೇನ್ಹಸ್, ಕಾಲೇಜಿನ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಕ್ಷಕಲಾ ಕೇಂದ್ರದ ನಿರ್ದೇಶಕ ಶ್ರೀ ಪ್ರಶಾಂತ್ ರೈ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮಾನಸ, ಸುರಭಿ, ತನ್ವಿ ಪ್ರಾರ್ಥಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಪ್ರಶಾಂತಿ ಎನ್. ವಂದಿಸಿ, ಡಾ. ಮೈತ್ರಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.