ಮಂಗಳೂರು : ಶಂಭೂರು ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನವು ದಿನಾಂಕ 19 ನವಂಬರ್ 2024ರಂದು ನಡೆಯಲಿದೆ. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ನೀಡಲಾಗುವ ‘ಬಾಲಬಂಧು ಪುರಸ್ಕಾರ’ಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹಾಯಕ ಅಧ್ಯಾಪಕಿ ಸುಧಾ ನಾಗೇಶ್ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ತಿಳಿಸಿದ್ದಾರೆ.
ಕವಯಿತ್ರಿಯಾಗಿರುವ ಶ್ರೀಮತಿ ಸುಧಾ ನಾಗೇಶ್ ಇವರು ‘ಮೂಡಲಮನೆ’ ಮತ್ತು ‘ಹೃದಯರಾಗ’ ಎಂಬ ಹನಿ ಕವನ ಸಂಕಲನ ಪ್ರಕಟಿಸಿದ್ದಾರೆ. ‘ಹೀಗೆ ಸುಮ್ಮನೆ’ ಎಂಬ ಹಾಸ್ಯ ಲಹರಿ, ‘ಮಿನಿ ಎನ್ ಸೈಕ್ಲೋಪೀಡಿಯ ಫಾರ್ ಸ್ಟೂಡೆಂಟ್ಸ್’ ಎಂಬ ಮಿನಿ ಅರ್ಥ ಕೋಶ, ‘ಜೀನಿಯಸ್’ ಎಂಬ ವಿದ್ಯಾರ್ಥಿ ಕೈಪಿಡಿ ಹಾಗೂ ‘ರಂಗ ಕಲಾ ಭೂಷಕೆರ್ ಶ್ರೀ ಸೀತಾರಾಮ ಕುಲಾಲೆರ್’ ಎಂಬ ತುಳು ಕೃತಿ ಇವರ ಇತರೆ ಪ್ರಕಟಣೆಗಳು.
ಕಳೆದ 15 ವರ್ಷಗಳಿಂದ ‘ಶಾರದಾ ವಾಣಿ’ ಎಂಬ ಮಕ್ಕಳ ಸ್ವ ರಚನೆಗಳ ಹಸ್ತ ಪತ್ರಿಕೆ ಬಿಡುಗಡೆಯಲ್ಲಿ ಇವರ ಶ್ರಮವಿದೆ. 2022ರಲ್ಲಿ ‘ಮಕ್ಕಳ ಕಲಾ ಲೋಕ’ದಿಂದ ‘ಸಾಹಿತ್ಯ ತಾರೆ’ ಪ್ರಶಸ್ತಿ ಇವರ ಶಾಲೆಗೆ ಸಂದಿದೆ. ಇವರು ಮಕ್ಕಳಿಗೆ ಶಿಬಿರಗಳ ಸಂಘಟನೆ ಮತ್ತು ವಿದ್ಯಾರ್ಥಿ ಸಾಹಿತ್ಯ ಗೋಷ್ಠಿ ಆಯೋಜನೆ ಮಾಡುತ್ತಾ ಬಂದಿರುವುದೂ ಪುರಸ್ಕಾರಕ್ಕೆ ಅವಕಾಶ ನೀಡಿದೆ.
ರಾಜ್ಯ ಪುರಸ್ಕಾರ ಮತ್ತು ರಾಷ್ಟ್ರಪತಿ ಪುರಸ್ಕಾರಕ್ಕಾಗಿ ಗೈಡ್ಸ್ ಗಳಿಗೆ ತರಬೇತಿ ನೀಡಿ ಸತ್ಪ್ರಜೆಗಳಾಗಿ ಬೆಳೆಸಿದ್ದಾರೆ. ಈವರೆಗೆ 576 ವಿದ್ಯಾರ್ಥಿಗಳಿಗೆ ಗೈಡ್ಸ್ ತರಬೇತಿ ನೀಡಿದ್ದು, 5 ಮಂದಿ ಗೈಡ್ಸ್ ಗಳು ‘ರಾಷ್ಟ್ರಪತಿ ಪುರಸ್ಕಾರ’ವನ್ನು , 55 ಮಂದಿ ಗೈಡ್ಸ್ ಗಳು ‘ರಾಜ್ಯ ಪುರಸ್ಕಾರ ಪ್ರಶಸ್ತಿ’ಯನ್ನು ಪಡೆದಿರುತ್ತಾರೆ. ಅಲ್ಲದೆ 12 ಮಂದಿ ಸ್ಕೌಟ್ಸ್ ಮತ್ತು 15 ಮಂದಿ ಗೈಡ್ಸ್ ಗಳು ‘ವಿಶ್ವ ಸಾಂಸ್ಕೃತಿಕ ಜಾಂಬೂರಿ’ಯಲ್ಲಿ ಹಾಗೂ 4 ಮಂದಿ ಸ್ಕೌಟ್ ಮತ್ತು ಇಬ್ಬರು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆಯು ಹಮ್ಮಿಕೊಂಡಿದ್ದ ಜಿಲ್ಲಾ ಕ್ಯಾಂಪೊರಿಯಲ್ಲಿ ಭಾಗವಹಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳನ್ನು ಲಭಿಸಿವೆ.