ಮಂಗಳೂರು : ರಾಜ್ಯೋತ್ಸವ ಆಚರಣಾ ಸಮಿತಿ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಯೋಜಕತ್ವದಲ್ಲಿ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ದಿನಾಂಕ 01 ನವೆಂಬರ್ 2024ರಂದು ಜರಗಿತು.
ಖ್ಯಾತ ವೈದ್ಯರು ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಶಾಂತಾರಾಮ ಶೆಟ್ಟಿ ರಾಜ್ಯೋತ್ಸವ ಸಂದೇಶ ನೀಡಿದರು. ಮೇಯರ್ ಮನೋಜ್ ಕುಮಾರ್ ಕನ್ನಡ ಧ್ವಜಾರೋಹಣಗೈಯ್ದರು. ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ದೀಪ ಪ್ರಜ್ವಲನೆಗೈದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಾಟ್ಯಾಲಯ ಉರ್ವ ಇದರ ನಿರ್ದೇಶಕಿ ನಾಟ್ಯ ವಿದುಷಿ ಕಮಲಾ ಭಟ್ ಇವರಿಗೆ ‘ರಾಜ್ಯೋತ್ಸವ ಗೌರವ ಪ್ರಶಸ್ತಿ’ಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಇವರು ಪ್ರದಾನ ಮಾಡಿದರು. ನಾದಸ್ವರ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರಿಗೆ ‘ರಾಜ್ಯೋತ್ಸವ ಅಭಿವಂದನ ಪುರಸ್ಕಾರ’ ಹಾಗೂ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಇವರಿಗೆ ‘ಕಲ್ಕೂರ ರಾಜ್ಯೋತ್ಸವ ಪುರಸ್ಕಾರ’ವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಪ್ರದಾನ ಮಾಡಿ ಶಾಲು, ಸ್ಮರಣಿಕೆ ಮತ್ತು ಫಲಕಾಣಿಕೆ ನೀಡಿ ಗೌರವಿಸಿದರು.
ಅತಿಥಿಗಳಾಗಿ ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ವಿ., ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ., ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಉಜಿರೆ,ಆಕಾಶವಾಣಿ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಡಾ. ಸದಾನಂದ ಪೆರ್ಲ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಭಾಗವಹಿಸಿದ್ದರು. ನಿತ್ಯಾನಂದ ಕಾರಂತ ಪೊಳಲಿ, ಜಿ.ಕೆ. ಭಟ್ ಸೇರಾಜೆ, ಪತ್ರಕರ್ತರಾದ ರಮೇಶ ಪೆರ್ಲ, ಪೂರ್ಣಿಮಾ ರಾವ್ ಪೇಜಾವರ, ಜನಾರ್ದನ ಹಂದೆ ಮೊದಲಾದವರು ಉಪಸ್ಥಿತರಿದ್ದರು.
ಹರಿದಾಸ ಜಯಾನಂದ ಹೊಸದುರ್ಗ ಉಗಾಭೋಗ ಹಾಡಿದರು. ಜನಾರ್ದನ ಹಂದೆಯವರು ರಾಜ್ಯೋತ್ಸವ ಕುರಿತಾದ ಸ್ವರಚಿತ ಕವನವನ್ನು ವಾಚಿಸಿದರು. ಕವಿಗೋಷ್ಠಿಯಲ್ಲಿ ಯಶೋಧಾ ಮೋಹನ್, ಅಕ್ಷಯಾ ಆರ್. ಶೆಟ್ಟಿ, ಅಕ್ಷತಾ ರಾಜ್ ಪೆರ್ಲ ಅವರು ನಾಡು ನುಡಿ ಸಂಸ್ಕೃತಿ ಕುರಿತಾದ ಕವನಗಳನ್ನು ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಹೊರನಾಡು ಮತ್ತು ಗಡಿನಾಡ ಸುಮಾರು 75ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಜ್ಯೋತ್ಸವ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಮತ್ತು ಶಾರದಾ ಕಾಲೇಜಿನ ಆಡಳಿತಾಧಿಕಾರಿ ದಯಾನಂದ ಕಟೀಲು ಧನ್ಯವಾದವಿತ್ತರು. ಮಂಜುಳಾ ಶೆಟ್ಟಿ ಹಾಗೂ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.