ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ವೈಭವದ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’. ಈ ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ಅನನ್ಯ ಸಾಂಸ್ಕೃತಿಕ ಪ್ರತಿಭೆಯೊಂದನ್ನು ಗುರುತಿಸಿ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಆಳ್ವಾಸ್ ವಿರಾಸತ್-2024ರ ಪ್ರಶಸ್ತಿಗೆ ಹಿಂದೂಸ್ಥಾನಿ ಸಂಗೀತಲೋಕ ದಿಗ್ಗಜ ಗಾಯಕ ಮತ್ತು ಗುರು ಪದ್ಮಶ್ರೀ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಈ ಉತ್ಸವವು ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಜನಮನ್ನಣೆಗೆ ಪಾತ್ರವಾಗಿದೆ. ಈ ವರ್ಷ ದಿನಾಂಕ 10 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ 6 ದಿನಗಳ ಕಾಲ ಮೂಡುಬಿದಿರೆಯ ಪುತ್ತಿಗೆ ಗ್ರಾಮದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಉತ್ಸವಕ್ಕಾಗಿ ಈಗಾಗಲೇ ಸಿದ್ಧತೆ ಪ್ರಾರಂಭಗೊಂಡಿದ್ದು ನಾಡು-ನುಡಿ-ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಯೋಚಿಸಲಾಗಿದೆ.
ಉತ್ತರ ಕರ್ನಾಟಕದ ಬಳ್ಳಾರಿಯ ಲಕ್ಷ್ಮೀಪುರದಲ್ಲಿ ಜನಿಸಿದ ವೆಂಕಟೇಶ್ ಕುಮಾರ್ ಇವರಿಗೆ ಜಾನಪದ ಗಾಯಕ ಮತ್ತು ತೊಗಲು ಬೊಂಬೆಯಾಟಗಾರರಾಗಿದ್ದ ತಂದೆ ಹುಲೆಗಪ್ಪನವರೇ ಮೊದಲ ಗುರುಗಳು. ಗುರು ಪುಟ್ಟರಾಜ ಗವಾಯಿಗಳಿಂದ ಗ್ವಾಲಿಯರ್ ಮತ್ತು ಕಿರಾಣಾ ಘರಾಣಾ ಶೈಲಿಯ ಎಲ್ಲಾ ಹೊಳಹುಗಳನ್ನು ಕಲಿತ ಇವರು ಕರ್ನಾಟಕ ಸಂಗೀತದಲ್ಲಿಯೂ ನಿಸ್ಸೀಮರು. ಭಕ್ತಿ ಸಂಗೀತದಲ್ಲಿ ಕನ್ನಡ ವಚನ ಮತ್ತು ದಾಸರಪದ ಗಾಯನಕ್ಕಾಗಿ ಇವರು ಪ್ರಸಿದ್ಧರು. ಉನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, ಭೀಮಸೇನ ಜೋಶಿ ಪ್ರಶಸ್ತಿ, ಕಾಳಿದಾಸ ಪ್ರಶಸ್ತಿಗಳೇ ಮೊದಲಾದ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ದೇಶ-ವಿದೇಶಗಳ ಪ್ರಮುಖ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ ಹಿರಿಮೆ ಇವರದು.