ಹಿರೇಮಠ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆಯುವ ‘ನೇಕಾರ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಜನಪದ ಹಾಡುಗಾರರು, ಗೀತರಚನಕಾರರು, ನಾಟಕಕಾರರು ಮತ್ತು ನಟರು ಆದ ಶ್ರೀ ಗುರುರಾಜ್ ಹೊಸಕೋಟೆಯವರನ್ನು ಆಯ್ಕೆ ಮಾಡಲಾಗಿದೆ.
ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ದಿನಾಂಕ 26 ಮೇ 1948ರಂದು ಜನಿಸಿದರು. ಅವರ ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ಸಿ.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಅವರು ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು. ಕರ್ನಾಟಕದ ಹೆಸರಾಂತ ಧ್ವನಿಸುರುಳಿ ಕಂಪನಿಗಳಿಗೆ ಇವರು ಬರೆದ ಗೀತೆಗಳು ಸಾವಿರಾರು.
1969ರಲ್ಲಿ ರಬಕವಿಯ ಗಣೇಶೋತ್ಸವದಲ್ಲಿ ಗುರುರಾಜ ಹೊಸಕೋಟೆಯವರ ಪ್ರಥಮ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಮುಂದೆ ನಡೆದ ಕಾರ್ಯಕ್ರಮಗಳು ಸಹಸ್ರಾರು. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮಗಳು ನಡೆಸಿಕೊಟ್ಟರಲ್ಲದೆ, ಹೊರರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರದಲ್ಲೂ ಕಾರ್ಯಕ್ರಮಗಳನ್ನು ನಡೆಸಿದರು. ಸ್ನೇಹಜೀವಿ, ಕೈಬೀಸಿ ಕರೆವಾ, ಉತ್ತರ ಕರ್ನಾಟಕದ ಜನಪ್ರಿಯ ಹಾಡುಗಳು ಮುಂತಾದವು ಗುರುರಾಜ ಹೊಸಕೋಟೆಯವರ ಪ್ರಸಿದ್ಧ ಕವನ ಸಂಕಲನಗಳು. ಸೊಕ್ಕುತಂದ ಸೋಲು, ಸುಮ್ ಸುಮ್ನೆ, ಅದೇನ್ ಹೇಳ್ರೀ, ಹೇಳಕಾಗಲ್ಲ ಎಂಬ ನಾಟಕಗಳನ್ನು ಬರೆದು ನೂರಾರು ಬಾರಿ ರಂಗ ಪ್ರಯೋಗ ಕಾಣುವಂತೆ ಮಾಡಿದರು.
ಸಿನಿಮಾ ಲೋಕದಲ್ಲಿ ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆಯವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ ಶಾಮ, ಅಂಬಿ, ಶಂಭು ಮುಂತಾದ ಸುಮಾರು ಐವತ್ತು ಚಲನಚಿತ್ರಗಳಲ್ಲಿ ಇವರಿಗೆ ಹಾಡುವ ಹಾಗೂ ಓ ಗುಲಾಬಿ, ಒಡ ಹುಟ್ಟಿದವರು, ಅಗ್ರಹಾರ ಮುಂತಾದ ಹತ್ತಾರು ಚಿತ್ರಗಳಲ್ಲಿ ಗೀತ ರಚನೆಯ ಅವಕಾಶ ದೊರಕಿದ್ದು, ಕೆಲವು ಚಿತ್ರಗಳಲ್ಲಿ ನಟರಾಗಿಯೂ ಪಡೆದ ಪ್ರಸಿದ್ಧಿ ಪಡೆದರು.
ಜಾನಪದ ಗಾನಸಿರಿ, ಜಾನಪದ ಕಲಾನಿಧಿ, ಜಾನಪದ ಕಲಾಕೌಸ್ತುಭ, ಜಾನಪದ ಕೋಗಿಲೆ, ಜಾನಪದ ಸಾರ್ವಭೌಮ, ಜಾನಪದ ನಿಧಿ ಕರ್ನಾಟಕ ಸರ್ಕಾರ ನೀಡುವ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಹಲವಾರು ಬಿರುದು ಗೌರವಗಳು ಗುರುರಾಜ ಹೊಸಕೋಟೆಯವರಿಗೆ ಸಂದಿವೆ. ಇವರ ಅಪಾರ ಸೇವೆಯನ್ನು ಪರಿಗಣಿಸಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಕಮತಗಿ ಹಿರೇಮಠದಲ್ಲಿ ದಿನಾಂಕ 23 ನವೆಂಬರ್ 2024ರ ಶನಿವಾರ ನಡೆಯಲಿರುವ ‘ನೇಕಾರ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.