10 ಮಾರ್ಚ್ 2023, ಮಂಗಳೂರು: ಇಂದು ಸಮಾಜದಲ್ಲಿ ಅನ್ಯೋನ್ಯವಾಗಿ ಬದುಕುವುದು ಕಡಿಮೆಯಾಗುತ್ತಿದೆ. ಒಂದಾಗಿ ಬಾಳಿದಲ್ಲಿ ಸರ್ವತ್ತೋಮುಖ ಅಭಿವೃದ್ದಿ ಸಾದ್ಯ ಎಂದು ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಪುನರೂರಿನ ವಿಶ್ವನಾಥ ದೇವಾಲಯದಲ್ಲಿ ಶ್ರೀ ವಿದ್ಯಾಲಯ ಮತ್ತು ಅಖಿಲ ಕರ್ನಾಟಕ ಬೆಳಂದಿಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ, ಪುನರೂರು ಪ್ರತಿಷ್ಠಾನ, ಕನ್ನಡ ಸಂಸ್ಕೃತಿ ಇಲಾಖೆ, ಪುನರೂರು ಆರ್ಟ್ಸ್ ಸಹಯೋಗದಲ್ಲಿ ದಿನಾಂಕ 05-03-2023 ಭಾನುವಾರದಂದು ನಡೆದ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಜೀವಮಾನದ ಸಾಧನೆಗಾಗಿ ವಿಶ್ವ ತುಳುವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾದ್ಯಕ್ಷ ಡಾ. ಹರಿಕೃಷ್ಣ ಪುನರೂರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಬೆಳವಣಿಗೆ ಕಾಣಬೇಕಾದರೆ ಕನ್ನಡಿಗರು ಒಗ್ಗಟ್ಟಾಗಿ ನಾಡು, ನುಡಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಸಂಘಟಕರಾದ ಡಾ. ಶೇಖರ ಅಜೆಕಾರು ಅವರು ಕನ್ನಡ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಅವರು ಇನ್ನಷ್ಟು ಕಾರ್ಯಕ್ರಮಗಳ ಮೂಲಕ ನಾಡಿನ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುವಂತಾಗಲಿ ಎಂದರು.
ಮಕ್ಕಳ ರಾಜ್ಯ ಮಟ್ಟದ ಪ್ರತಿಭೋತ್ಸವವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರತಿಭೆ ಪ್ರಹ್ಲಾದ ಮೂರ್ತಿ ಕಡಂದಲೆ ಉದ್ಘಾಟಿಸಿದರು. ಯುವ ಸಾಹಿತಿ ಅಂಶು ಸಂಹಿತ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪೇರೂರು ಜಾರು, ಪಿ.ಎನ್. ಆಚಾರ್ಯ, ವಿಶ್ವನಾಥ ಶೆಣೈ ಉಡುಪಿ, ಕೆ.ಸಚ್ಚಿದಾನಂದ ಉಡುಪ, ಸಾವಿತ್ರಿ ಮನೋಹರ ಕಾರ್ಕಳ, ಸಾಣೂರು ಅರುಣ ಶೆಟ್ಟಿಗಾರ್, ಪದ್ಮಶ್ರೀ ಭಟ್ ನಿಡ್ಡೋಡಿ, ಎ.ನರಸಿಂಹ ಪಾಲ್ಗೊಂಡಿದ್ದರು.
ಸಮೇಳನಾದ್ಯಕ್ಷತೆಯನ್ನು ರಾಜ್ಯೋತ್ಸವ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ವಹಿಸಿದ್ದರು. ವಿಶ್ವನಾಥ ದೇವಾಲಯದ ಪಟೇಲ್ ವಾಸುದೇವ ರಾವ್, ಭುವನಾಭಿರಾಮ ಉಡುಪ, ದೇವಿಪ್ರಸಾದ ಪುನರೂರು ಪಾಲ್ಗೊಂಡಿದ್ದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿ ರಾಜ್ಯಾಧ್ಯಕ್ಷ ಡಾ.ಶೇಖರ ಅಜಕಾರು ಅಧ್ಯಕ್ಷತೆ ವಹಿಸಿದ್ದರು.
ಅನುಭಾವ ಮಂಟಪ ಯುವ ಗೌರವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಡಾ. ತಲ್ಲೂರ ಶಿವರಾಮ ಶೆಟ್ಟಿ, ವಿಶ್ವನಾಥ ರಾವ್ ಪುನರೂರು, ಮಿಥುನ್ ಉಡುಪ ಪಾಲ್ಗೊಂಡಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮುಂಬಯಿಯ ಪಂಚಭಾಷಾ ಕವಯತ್ರಿ ಅರುಷ್ ಎನ್. ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಡಾ.ಸುರೇಶ ನೆಗಳಗುಳಿ, ರೇಮಂಡ್ ಡಿಕುನ್ಹಾ, ನಿಶಾಂತ್ ಕಿಲೆಂಜೂರು, ಪ್ರಸಾದ ನಿಡುಸಾಲೆ, ವೀರಣ್ಣ ಕುರುವತ್ತಿ ಗೌಡರ, ಸ್ವಾಗತ ಸಮಿತಿ ಅಧ್ಯಕ್ಷ ಪಟೇಲ್ ವಾಸುದೇವರಾವ್ ಪಾಲ್ಗೊಂಡಿದ್ದರು.
ವಿಶ್ವ ದಂಪತಿ ರತ್ನ ಪ್ರಶಸ್ತಿಗೆ ಯು.ಸತೀಶ ಪೈ, ಸಂದ್ಯಾ ಪೈ ಮಣಿಪಾಲ ಭಾಜನರಾಗಿದ್ದಾರೆ. ಜೀವಮಾನದ ಸಾಧನೆಗಾಗಿ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ ಮತ್ತು ರಂಗಭೂಮಿ ಕಲಾವಿದ, ತಾರೆ ವಿಜಯಕುಮಾರ ಕೊಡಿಯಾಲ್ ಬೈಲ್ ಇವರಿಗೆ “ವಿಶ್ವ ತುಳುವ ರತ್ನ” ಪ್ರಶಸ್ತಿಯನ್ನು ನೀಡಲಾಯಿತು. 2023ರ “ಕರ್ನಾಟಕ ಪ್ರತಿಭಾ ರತ್ನ”, “ಕರ್ನಾಟಕ ಯುವ ರತ್ನ”, “ಕರ್ನಾಟಕ ಸಾಧನಾ ರತ್ನ”, “ಕರ್ನಾಟಕ ಸಂಘ ರತ್ನ” ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಯುವ ಕವಯತ್ರಿ ಪ್ರಿಯಾ ಸುಳ್ಯ ಅವರ ಕವನ ಸಂಕಲನ “ನಾನು, ನಾನು…ನಾವು” ಮತ್ತು ಸಾವಿತ್ರಿ ಮನೋಹರ್ ಅವರ “ಕೈ ಬೀಸಿ ಕರೆಯುತಿದೆ ಕಳಸ” ಮತ್ತು ಸೌಮ್ಯ ಸರ್ವೇಶ್ ಜೈನ್ ಅವರ ತುಳು ಸಂಗೀತ ಬಿಡುಗಡೆಯಾಯಿತು.
ಸುನಿಧಿ ಅಜೆಕಾರು ಸ್ವಾಗತಿಸಿದರು. ಸಂಸ್ಥೆ ಕಾರ್ಯದರ್ಶಿ ದೀಪಕ್ ಎನ್. ದುರ್ಗಾ ಮತ್ತು ರೇಖಾ ಗದಗ ಕಾರ್ಯಕ್ರಮ ನಿರೂಪಿಸಿದರು. ಸುನಿಧಿ ಅಜೆಕಾರು ಸ್ವಾಗತಿಸಿ ವಂದಿಸಿದರು.