ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಮತ್ತು ಮಲಯಾಳಂ ಸಾಹಿತ್ಯವು ಮಹತ್ವದ ಬೆಳವಣಿಗೆಯನ್ನು ಕಂಡಿತು. ಕನ್ನಡಕ್ಕೆ ವಿವಿಧ ರೀತಿಯ ಗದ್ಯ ಕಥನಗಳು ಆಗಮಿಸಿದವು. ಸಂಸ್ಕೃತ, ಇಂಗ್ಲೀಷ್, ಬಂಗಾಳಿ, ಮರಾಠಿ ಭಾಷೆಗಳಿಂದ ಅನುವಾದ, ರೂಪಾಂತರ, ಅನುಕರಣೆ, ಪುನರ್ ನಿರೂಪಣೆಗಳ ಮೂಲಕ ಅನೇಕ ಬಗೆಯ ಗದ್ಯ ರಚನೆಗಳನ್ನು ಪಡೆಯಿತು. ಪುರಾಣ, ಇತಿಹಾಸ, ಜಾನಪದಗಳಿಂದ ವಸ್ತುಗಳನ್ನು ತೆಗೆದುಕೊಂಡು ಹೊಸ ಬಗೆಯ ಗದ್ಯ ಕಥನಗಳನ್ನು ರಚಿಸುವ ಪ್ರಯತ್ನಗಳಾದವು. ಒಂದು ನಿಟ್ಟಿನಲ್ಲಿ ಸಾಂಪ್ರದಾಯಿಕ ಭಾರತೀಯ ಕಥನ ಮಾದರಿಗಳಲ್ಲಿ ಸಮಕಾಲೀನ ಪಾತ್ರ, ವಿವರಗಳನ್ನು ಒಳಗೊಳ್ಳುವ ಪ್ರಯೋಗಗಳು ನಡೆದರೆ ಇನ್ನೊಂದು ನಿಟ್ಟಿನಲ್ಲಿ ಸ್ಥಳೀಯವೂ ದೇಶೀಯವೂ ಆದ ವಸ್ತು ವಿವರಗಳನ್ನು ಪಾಶ್ಚಾತ್ಯ ಮಾದರಿಯ ಗದ್ಯ ಬಂಧದಲ್ಲಿ ಕೂಡಿಸುವ ಪ್ರಯೋಗಗಳು ನಡೆದವು. ಈ ಮೂಲಕ ಕಾದಂಬರಿ ಪ್ರಕಾರವು ಭಾರತೀಯ ಸಾಹಿತ್ಯವನ್ನು ಪ್ರವೇಶಿಸಿತು. ಕನ್ನಡದಲ್ಲಿ ಗುಲ್ವಾಡಿ ವೆಂಕಟರಾಯರು, ಬೋಳಾರ ಬಾಬುರಾಯರು, ಎಂ.ಎಸ್. ಪುಟ್ಟಣ್ಣ, ಗಳಗನಾಥ, ಬಿ. ವೆಂಕಟಾಚಾರ್ಯ ಮುಂತಾದವರು ಕಾದಂಬರಿಗಳನ್ನು ಬರೆದ ಆದ್ಯರೆನಿಸಿಕೊಂಡರೆ ಮಲಯಾಳದಲ್ಲಿ ಅಪ್ಪು ನೆಡುಂಗಾಡಿ, ಕಲ್ಲೂರು ಉಮ್ಮನ್ ಪಿಲಿಪ್ಪೋಸ್, ಆರ್ಟ್ಡಿಕನ್ ಕೋಶಿ ಮೊದಲಾದವರು ಆರಂಭಿಕ ಸಾಹಿತಿಗಳೆನಿಸಿಕೊಂಡರು.
ಅಪ್ಪು ನೆಡುಂಗಾಡಿ ಅವರ ‘ಕುಂದಲತ’ (1887)ವು ಕಾದಂಬರಿಯ ಲಕ್ಷಣಗಳನ್ನು ಒಳಗೊಂಡ ಮೊದಲ ಸ್ವತಂತ್ರ ಕೃತಿಯಾಗಿದ್ದು, ಮಲಯಾಳಂ ಭಾಷೆಯ ಮೊದಲ ಕಾದಂಬರಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ.
ಪಾಶ್ಚಾತ್ಯ ಕಾದಂಬರಿಗಳ ಅಧ್ಯಯನ ಮತ್ತು ಮಲಯಾಳಕ್ಕೆ ರೂಪಾಂತರಗೊಂಡ ಶೇಕ್ಸ್ ಪಿಯರ್‌ನ ನಾಟಕಗಳ ಪ್ರಭಾವವು ಮಲಯಾಳಂನಲ್ಲಿ ಕಾದಂಬರಿ ಪ್ರಕಾರವು ರೂಪುಗೊಳ್ಳಲು ಕಾರಣವಾಗಿದೆ. ಕುಂದಲತ ಮತ್ತು ಸ್ವರ್ಣಮಯಿ ಎಂಬ ಪಾತ್ರಗಳ ಹಿನ್ನೆಲೆಯಲ್ಲಿ ಈ ವಿಚಾರಗಳನ್ನು ಗಮನಿಸಬಹುದು. ಇಲ್ಲಿ ಹೆಣ್ಣು ಪುರುಷನನ್ನು ಹೆಜ್ಜೆಹೆಜ್ಜೆಗೂ ಅನುಸರಿಸುತ್ತಾ ಸಾಗುವುದಿಲ್ಲ. ಸಾಮಾಜಿಕ ಅಂತಸ್ತನ್ನು ಕೂಡ ಪರಿಗಣಿಸದೆ ಮಂತ್ರಿಯ ಮಗಳು ಸ್ವರ್ಣಮಯಿಯು ರಾಜಕುಮಾರ ಪ್ರತಾಪಚಂದ್ರನನ್ನು ಮತ್ತು ನಾಯಿಕೆ ಕುಂದಲತೆಯು ಮಂತ್ರಿಕುಮಾರ ರಾಮಕಿಶೋರನನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಕಾಲಧರ್ಮವನ್ನು ಎದುರು ಹಾಕಿಕೊಳ್ಳುವ ಕ್ರಿಯೆಯು ಮುಖ್ಯವಾಗುತ್ತದೆ. ಈ ದಿಟ್ಟತನವನ್ನು ಪಾಶ್ಚಾತ್ಯ ವೈಚಾರಿಕತೆಯ ಮೂಲಕ ಮೈಗೂಡಿಸಿಕೊಂಡರೂ ಅನೈತಿಕತೆಯ ಸೋಂಕಿಲ್ಲದ ಈ ಪರಿಶುದ್ಧ ಪ್ರೇಮವನ್ನು ಭಾರತೀಯ ಜಾಯಮಾನಕ್ಕೆ ಹೊಂದಿಸಿಕೊಳ್ಳುವ ಜಾಣ್ಮೆಯಿದೆ. ಇದು ಮಲಯಾಳಂ ಕಾದಂಬರಿಯಾದರೂ ದಂಡಕಾರಣ್ಯ, ವಿಲ್ವಾದ್ರಿಮಲ, ಧರ್ಮಪುರಿ, ಚಂದನೋದ್ಯಾನ, ಕಳಿಂಗ, ಕುಂತಳ ಮುಂತಾದ ಸ್ಥಳನಾಮಗಳು, ಚಿತ್ರರಥ, ಕಪಿಲನಾಥ, ಅಘೋರನಾಥ, ಪ್ರತಾಪಚಂದ್ರ, ಸ್ವರ್ಣಮಯಿ, ಕುಂದಲತ ಮೊದಲಾದ ಪಾತ್ರಗಳ ಹೆಸರುಗಳು ಕೇರಳಕ್ಕಿಂತ ಹೊರಗಿನವುಗಳಾಗಿವೆ. ತಮ್ಮ ಕಾದಂಬರಿಯನ್ನು ಕೇರಳವೆಂಬ ಸೀಮಿತ ವ್ಯಾಪ್ತಿಯ ಬದಲು ಇಡೀ ಭಾರತೀಯ ಚೌಕಟ್ಟಿನಲ್ಲಿಟ್ಟು ನೋಡುವ ಉದ್ದೇಶ ಲೇಖಕರಿಗೆ ಇರಬಹುದು.
ಕಳಿಂಗ ಮತ್ತು ಕುಂತಳ ರಾಜ್ಯಗಳ ನಡುವಿನ ಸಂಘರ್ಷವು ಈ ಕಾದಂಬರಿಯ ವಸ್ತುವಾಗಿದೆ. ಕಳಿಂಗದ ಅಭಿವೃದ್ಧಿಗೆ ಅಘೋರನಾಥ ಮತ್ತು ಕಪಿಲನಾಥರ ಯೋಜನಾಬದ್ಧ ನಡೆಯು ಕಾರಣವಾಗಿದೆ. ಮಂತ್ರಿಗಳು, ಸೇವಕರು ಮತ್ತು ಬುಡಕಟ್ಟು ಜನಾಂಗದ ಪ್ರೋತ್ಸಾಹವು ರಾಜ್ಯದ ಅಸ್ತಿತ್ವವು ಭದ್ರವಾಗಿರಲು ಕಾರಣವಾಗಿದೆ. ಮಗಧ, ಚೇದಿ, ಅವಂತಿ ರಾಜ್ಯಗಳ ನಡುವಿನ ಸೌಹಾರ್ದ ಸಂಬಂಧವು ಕಳಿಂಗದ ಗೆಲುವಿಗೆ ನಿರ್ಣಾಯಕ ಶಕ್ತಿಗಳಾಗಿ ಕೆಲಸವನ್ನು ಮಾಡುತ್ತವೆ. ಯುದ್ಧದಲ್ಲಿ ಸೋತು ಶರಣಾದ ಕುಂತಳರಾಜನ ಪ್ರಜೆಗಳನ್ನು ಕಳಿಂಗದವರು ಕಾಪಾಡುವ ಸನ್ನಿವೇಶವು ‘ಕುಂದಲತ’ದಲ್ಲಿದೆ. ಪ್ರಭುತ್ವವು ಯುದ್ಧಗಳನ್ನು ಸಲಹುತ್ತಾ ಬಂದಿದ್ದರೂ ಅದರ ಘೋರ ಪರಿಣಾಮವನ್ನು ಅರಿತು ಶತ್ರುಮಿತ್ರರೆಂಬ ಭೇದವಿಲ್ಲದೆ ಮನುಷ್ಯರ ಪ್ರಾಣವನ್ನು, ಸಂಪತ್ತನ್ನು ಸಂರಕ್ಷಿಸುವ ಆಶಯವನ್ನು ವ್ಯಕ್ತಪಡಿಸುತ್ತದೆ. ಪ್ರಜೆಗಳ ಕ್ಷೇಮ, ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಕಾಪಾಡುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಅಪ್ಪು ನೆಡುಂಗಾಡಿಯವರು ಈ ಕಾದಂಬರಿಯನ್ನು ಬರೆಯುವ ಸಂದರ್ಭದಲ್ಲಿ ಭಾರತದಲ್ಲಿ ವಸಾಹತು ಶಾಹಿತ್ವವು ತಳವೂರಿತ್ತು. ಒಂದು ಕಡೆ ಆಂಗ್ಲೀಕರಣ, ಮತ್ತೊಂದೆಡೆ ಸುಧಾರಣಾವಾದಿ ಚಟುವಟಿಕೆಗಳು. ಇವಕ್ಕೆ ಪ್ರತಿರೋಧವೆಂಬಂತೆ ಸ್ವದೇಶಿ ಚಿಂತನೆ ಮತ್ತು ಹೋರಾಟಗಳು, ಪುನರುತ್ಥಾನವಾದಿಗಳ ಪ್ರತಿಭಟನೆಗಳು, ಬ್ರಹ್ಮಸಮಾಜದ ಜನಪ್ರಿಯತೆ, ಅದಕ್ಕೆ ಪ್ರತಿರೋಧವೆಂಬಂತೆ ಹಿಂದೂವಾದಿಗಳ ಸಂಘಟನೆ ಮತ್ತು ಹೋರಾಟ. ಒಂದು ಕಡೆ ಬ್ರಿಟಿಷರಿಂದ ಸಾಮ್ರಾಜ್ಯ ವಿಸ್ತರಣೆ, ಇನ್ನೊಂದು ಕಡೆ ಸ್ವರಾಜ್ಯದ ಶೋಧನೆ. ಒಟ್ಟಿನಲ್ಲಿ ದೇಶದ ಮತ್ತು ಮನುಷ್ಯರ ಒಳಹೊರಗುಗಳು ತೀವ್ರ ಸಂಘರ್ಷದಲ್ಲಿದ್ದ ಸಂಕೀರ್ಣ ಕಾಲ. ಇಂಥ ಸಂದರ್ಭದಲ್ಲಿ ನೆರೆ ರಾಜ್ಯದವರು ವೈರತ್ವವನ್ನು ಮರೆತು ಒಂದಾಗಬೇಕಿದೆ. ಯುದ್ಧನೀತಿಯನ್ನು ನಿರಾಕರಿಸಬೇಕಿದೆ. ಭಾರತೀಯರೆಂಬ ನೆಲೆಯಲ್ಲಿ ಒಗ್ಗೂಡಬೇಕಾದ ಅನಿವಾರ್ಯತೆಯನ್ನು ಮನಗಾಣಿಸುವ ಕಾದಂಬರಿಯಲ್ಲಿ ರಾಷ್ಟ್ರೀಯವಾದದ ಉಗಮದ ಸೂಚನೆಯಿದೆ.
ಶೇಕ್ಸ್ ಪಿಯರನ ‘ಕಾಮೆಡಿ ಆಫ್ ಎರರ್ಸ್’ ಎಂಬ ನಾಟಕವನ್ನು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಮಾಡಿದ ಕಾದಂಬರಿ ರೂಪಾಂತರವನ್ನು ಬಿ. ವೆಂಕಟಾಚಾರ್ಯರು ‘ಭ್ರಾಂತಿವಿಲಾಸ’ ಎಂಬ ಹೆಸರಿನಲ್ಲಿ ಅನುವಾದಿಸಿದರು. ಕನ್ನಡದ ಮೊದಲ ಅನುವಾದಿತ ಕಾದಂಬರಿಯನ್ನು ಅವರು ಕನ್ನಡದ ಮೊದಲ ಕಾದಂಬರಿಯೆಂದೇ ಕರೆದಿದ್ದಾರೆ. ಯಾವುದೇ ಗದ್ಯ ಬರವಣಿಗೆ ಇಲ್ಲದ ಸಂದರ್ಭದಲ್ಲಿ ಮೊತ್ತಮೊದಲ ಬರವಣಿಗೆಯಾಗಿ, ಕಥನದ ಹೊಸ ಪ್ರಯೋಗದ ಪ್ರಯತ್ನ ಎಂಬ ದೃಷ್ಟಿಯಿಂದ ನೋಡುವಾಗ ಅದಕ್ಕಿರುವ ಪ್ರಾಮುಖ್ಯತೆಯೇ ಬೇರೆ. ಶ್ರೀಯವರ ‘ಇಂಗ್ಲೀಷ್ ಗೀತಗಳು’ ಪ್ರಕಟವಾಗುವ ಮೊದಲೇ ಮಂಗಳೂರು ಕೇಂದ್ರವಾಗಿಟ್ಟುಕೊಂಡು ಎಸ್.ಜಿ.ನ. ಹಟ್ಟಿಯಂಗಡಿಯವರಿಂದ ಕನ್ನಡದ ಉಳುಮೆಯ ಕೆಲಸವಾದಂತೆ ಮಲಯಾಳದಲ್ಲಿ ‘ಇಂದುಲೇಖ’ (1889) ಪೂರ್ವದಲ್ಲಿ ಆದಂಥ ಉಳುಮೆಯ ಕೆಲಸ ಎಂಬ ದೃಷ್ಟಿಯಲ್ಲಿ ಈ ಕಾದಂಬರಿಯನ್ನು ಪರಿಗಣಿಸಬಹುದು.
ಕುಂದಲತ ನಮ್ಮ ಪರಂಪರೆಯ ಭಾಗವಾಗಿದ್ದು ಭಾರತೀಯ ಮಹಾಕಾವ್ಯಗಳಲ್ಲಿ ಬರುವ ಉಪಕತೆಗಳ ಮಾದರಿಯಲ್ಲಿ ಕತೆಗಳನ್ನು ಹೆಣೆದು ನಿರೂಪಿಸುವ ಕ್ರಮವನ್ನು ಅನುಸರಿಸಲಾಗಿದೆ. ಪರಂಪರಾಗತ ನಿರೂಪಣೆಯನ್ನು ಆಧುನಿಕ ಬರವಣಿಗೆಯ ವಿಧಾನಕ್ಕೆ ಒಗ್ಗಿಸುವ ಶ್ರಮವು ಇಲ್ಲಿದೆ. ಒಳಗಿನ ಆಶಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವ್ಯಾಖ್ಯಾನಗಳಿವೆ. ಯುದ್ಧದ ಸಂದರ್ಭದಲ್ಲಿ ಮಾರುವೇಷದಿಂದ ಪರಸ್ಪರ ನೆರವಾಗಿ ಹಗೆಗಳನ್ನು ಸೋಲಿಸುವ ಸನ್ನಿವೇಶವನ್ನು ಗಮನಿಸಿದರೆ ಭಾರತೀಯ ರಾಜರುಗಳು ವಿದೇಶಿಯರನ್ನು ಹಿಮ್ಮೆಟ್ಟಿಸಲು ಸಂಘಟಿತರಾಗುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಇದು ವಸಾಹತೀಕರಣದ ವಿರುದ್ಧದ ಪ್ರತಿಕ್ರಿಯೆಯಾಗಿ ಬಂದಿದೆ. ನೇರವಾಗಿ ಹೇಳುವುದು ಕಷ್ಟವಿರುವುದರಿಂದ ಇದನ್ನು ರೂಪಕವಾಗಿ ತಂದಿದ್ದಾರೆ. ಸಂಸ್ಕೃತಮಯವಾದ ಮಣಿಪ್ರವಾಳ ಶೈಲಿಯಲ್ಲಿ ಸಾಗುವ ಕಾದಂಬರಿಯನ್ನು ಓದಿ ಅರ್ಥಮಾಡಿಕೊಳ್ಳುವುದು, ಜನಸಾಮಾನ್ಯರಿಗೂ ಅರ್ಥವಾಗುವಂತೆ ಶಿಷ್ಟಗನ್ನಡದಲ್ಲಿ ಅನುವಾದಿಸುವುದು ಸುಲಭವಲ್ಲ. ಆದರೆ ಮೋಹನ ಕುಂಟಾರ್ ಅವರು ಆ ಕಾರ್ಯದಲ್ಲಿ ಸಫಲರಾಗಿದ್ದಾರೆ. ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳಬಹುದಾದಂಥ ಮಲಯಾಳ ಪದಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಏನೇ ಇದ್ದರೂ ಮಲಯಾಳಂ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವ ಕಾದಂಬರಿಯು ಕನ್ನಡಿಗರಿಗೂ ಲಭ್ಯವಾಗಿರುವುದು ಅಭಿನಂದನೀಯವಾಗಿದೆ.
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಅನುವಾದಕರಾದ ಡಾ. ಎ. ಮೋಹನ್ ಕುಂಟಾರ್ ಇವರು ಬಿ.ಎ, ಎಂ.ಎ, ಎಂ.ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫೀಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದು, ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ, ‘ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ.