ಡಾ. ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ಹೆಗಡೆಯವರ ಕುರಿತಂತೆ ಅಕ್ಷರೀಕರಿಸುವ ಹೊತ್ತಿನಲ್ಲಿ ಭಾವಾಭಿವ್ಯಕ್ತಿಗೆ ಭಾಷೆಯು ಸಾಧನವೆಂಬುದೇ ಸುಳ್ಳೆನಿಸುತ್ತಿದೆ. ಹಾಗಿರುವವರು ಅವರು. ಶಬ್ದಗಳಿಗೆ ನಿಲುಕದವರು, ವಾಕ್ಯಗಳಿಂದ ಕಟ್ಟಿಕೊಡಲಾಗದವರು, ಭಾಷೆಯನ್ನು ಮೀರಿ ಬಲಿತವರು, ಸಾಹಿತ್ಯದ ಮೇರೆಯನ್ನು ದಾಟಿದವರು, ನೂರಕ್ಕೆ ನೂರರಷ್ಟು ಗುರುತ್ವದ ಎತ್ತರದಲ್ಲಿದ್ದವರು. ಲಕ್ಷೋಪಲಕ್ಷ ವಿದ್ಯಾರ್ಥಿಗಳ ಅಂತರಂಗದ ನಿತ್ಯನಂದಾದೀಪವಾಗಿ ಆರಾಧ್ಯರಾಗಿದ್ದವರು. ಯಾರೊಂದಿಗೂ ಹೋಲಿಸಲಾಗದ – ಹೋಲಿಸಲೇ ಬಾರದ, ತನಗೆ ತಾನೇ ಸಾಟಿಯಾದ ಅವರು ಕಲಿಸುವುದಕ್ಕೆಂದೇ ಹುಟ್ಟಿದವರು. ಇಂಥವರ ವಿದ್ಯಾರ್ಥಿಯಾಗಿರುವುದು ಬದುಕಿನ ಬಹುದೊಡ್ಡದಾದ ಭಾಗ್ಯವೆಂದುಕೊಂಡವನು ನಾನು. ಇದಕ್ಕಾಗಿ ಬಿಗುಮಾನದಿಂದ ಬೀಗದೇ, ಧನ್ಯತೆಯಿಂದ ಬಾಗುತ್ತೇನೆ.
ನಾನವರ ಸಮ್ಮೋಹಕವಾದ ವರ್ಣಮಯವಾಗಿರುವ ಅನುಪಮ ವ್ಯಕ್ತಿತ್ವವನ್ನು ಕಳೆದ ಮೂರು ದಶಕಗಳಿಂದ ಬೆರಗುಗಣ್ಣಿನಿಂದ ನೋಡುತ್ತಲೇ – ಕಾಣುತ್ತಲೂ ಬಂದವನು. ಉತ್ತರ ಕನ್ನಡದ ವಿದ್ಯಾಕಾಶಿಯೆನಿಸಿದ ಕುಂಭಪುರದ ಪ್ರತಿಷ್ಠಿತ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನೆಲನುಡಿಯ ಬೋಧಕರಾಗಿ ಅವರು ಮೂಡಿಸಿದ ಛಾಪು ಅನನ್ಯವಾದದು. ಅವರದು ಕೇವಲ ತರಗತಿಯಾಗಿರಲಿಲ್ಲ. ಪ್ರತಿ ಪಾಠವೂ ಕನ್ನಡಾಂಬೆಯ ನಿತ್ಯೋತ್ಸವವೇ ಆಗಿರುತ್ತಿತ್ತು. ರನ್ನ, ಬೇಂದ್ರೆ, ಕೇಶಿರಾಜ ಹಾಗೂ ಕಾವ್ಯಮೀಮಾಂಸೆಗಳ ಕುರಿತಂತೆ ಅವರು ಹಿಡಿಸಿದ ಹುಚ್ಚನ್ನಂತೂ ಯಾರಿಂದಲೂ ಬಿಡಿಸಲಾಗದು.
ಕೇವಲ ಪಾಠ ಬೋಧನೆಗಷ್ಟೇ ತಮ್ಮನ್ನು ಮಿತಿಗೊಳಿಸಿಕೊಂಡಿರದ ಅವರು – ವಿದ್ಯಾರ್ಥಿಗಳನ್ನು ಚರ್ಚೆ, ಭಾಷಣ, ಕವನ ರಚನೆ- ಇತ್ಯಾದಿ ರಚನಾತ್ಮಕವಾದ ಚಟುವಟಿಕೆಗಳಲ್ಲದೇ, ತನ್ನೊಳಗಿನ ಯಕ್ಷಗಾನದ ಅಭಿರುಚಿಯನ್ನು ಬಿತ್ತಿ, ಬಹುಮುಖ ಪ್ರತಿಭೆಯಾಗಿ ಅನಾವರಣಗೊಳ್ಳಲು ತೆರೆದುಕೊಂಡವರು. ತನ್ನೆಲ್ಲ ವಿದ್ಯಾರ್ಥಿಗಳಲ್ಲಿಯೂ ಮನೆಯ ಮಗ ಸುದರ್ಶನನನ್ನೇ ದರ್ಶಿಸುತ್ತಿದ್ದವರು. ಅವರ ಒಲುಮೆಯ ಒರತೆಯಲ್ಲಿ ಮಿಂದೇಳದವರಿಲ್ಲ.
ನನ್ನನ್ನವರು ತುಂಬಾ ಪ್ರೀತಿಸುತ್ತಲೇ ಬಂದವರು. ನನಗೆ ಓದಲು, ಬರೆಯಲು, ಬೆಳೆಯಲು ಮಾರ್ಗದರ್ಶನವನ್ನು ನೀಡುತ್ತಲೇ ಇದ್ದವರು. ನನ್ನ ಕುರಿತು ಬಲವಾದ ನಿರೀಕ್ಷೆ ಮತ್ತು ಪ್ರತೀಕ್ಷೆಯನ್ನು ಇಟ್ಟುಕೊಂಡವರು. ನನ್ನ ಉತ್ಕರ್ಷಕ್ಕೆ ಎದೆದುಂಬಿ ಹಾರೈಸಿದವರು. ನನ್ನ ಪ್ರವರ್ಧಮಾನವನ್ನು ಕಂಡು ಅಂತರಂಗದಿಂದ ಆನಂದಿಸಿ ಅಭಿನಂದಿಸುತ್ತಿದ್ದವರು.
ನಾನು ಅವರೊಂದಿಗೆ ಕಾಲೇಜಿನಲ್ಲಿ ಕರ್ಣಾರ್ಜುನದ ಅರ್ಜುನನಾಗಿ, ಭೀಷ್ಮ ವಿಜಯದ ಸಾಲ್ವನಾಗಿ, ಬಾಡದಲ್ಲಿ ಸುಧನ್ಮಾರ್ಜುನದ ಕೃಷ್ಣನಾಗಿ, ಪಡುವಣಿಯಲ್ಲಿ ಹನುಮಾರ್ಜುನದ ರಾಮರೂಪಿಯಾಗಿ ಹಾಗೂ ತೆಕ್ಕಟೆಯಲ್ಲಿ ವಾಸುದೇವ ಸಾಮಗರ ಸಂಘಟನೆಯ ಭಾರತ ಅಷ್ಟಾಹದ ಸರಣಿ ತಾಳಮದ್ದಲೆಯಲ್ಲಿ ಗದಾಯುದ್ಧದ ಭೀಮನಾಗಿ ಪಾತ್ರವನ್ನು ನಿರ್ವಹಿಸಲು ಅವಕಾಶವಿತ್ತು, ಬೆನ್ನು ತಟ್ಟಿ, ಶಿಷ್ಯ ವಾತ್ಸಲ್ಯವನ್ನು ಮೆರೆದವರು. ನಮ್ಮ ಮನೆಯಂಗಳದ ಶ್ರೀ ಲಕ್ಷ್ಮೀ ವೆಂಕಟೇಶ ಸಹಿತ ತುಳಸಿ ಪ್ರತಿಷ್ಠಾಪನ ಮಹೋತ್ಸವದಲ್ಲಿ ಆಯೋಜಿಸಿದ ವಾಲಿ ಮೋಕ್ಷ ತಾಳಮದ್ದಲೆಯಲ್ಲಿ ಆಪ್ತವಾಗಿ ಭಾಗವಹಿಸಿ, ರಾಮನ ಪಾತ್ರವನ್ನು ನಿರ್ವಹಿಸಿದ್ದಲ್ಲದೆ, ನನ್ನ ಬರ್ಗಿ ಪ್ರೌಢ ಶಾಲೆಯಲ್ಲಿ ನಾನು ಪ್ರತಿ ವರ್ಷವೂ ಸಂಯೋಜಿಸುತ್ತಿರುವ ರಾಮಾಯಣ ಮತ್ತು ಮಹಾಭಾರತ ಸಪ್ತಾಹದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರವಚನವನ್ನು ನೀಡುತ್ತಾ ನಿರಂತರವಾದ ಸಂಪರ್ಕದಲ್ಲಿದ್ದವರು. ಹತ್ತು ವರ್ಷಗಳ ಹಿಂದೆ ನನ್ನ ಚೊಚ್ಚಿಲ ಕವನ ಸಂಕಲನವಾದ ‘ಒಮ್ಮೆ ಗರತಿಯಾಗಬೇಕು’ ಎಂಬುದನ್ನು ಅಂಕೋಲಾದಲ್ಲಿ ಲೋಕಾರ್ಪಣೆಗೊಳಿಸುವ ಹೊತ್ತಿನಲ್ಲಿ ಅವರು ನನ್ನ ಗುರುವಾಗಿರುವುದಕ್ಕೆ ಧನ್ಯನೆಂದು ಹೆಮ್ಮೆಯಿಂದಾಡಿದ್ದರು. ಇದಕ್ಕಿಂತ ಮಿಗಿಲಾದ ಪ್ರಶಸ್ತಿಯು ಇನ್ನೊಂದಿಲ್ಲವೆಂತಲೇ ನನ್ನ ಭಾವನೆ !
‘ನಾನು ನಾನಲ್ಲ, ನನ್ನದೇನಿಲ್ಲ, ಅವನದೇ ಎಲ್ಲ’ – ಎಂದೆನ್ನುತ್ತಾ, ಜೀವ- ಭಾವಗಳೆರಡನ್ನೂ ಸಂಪೂರ್ಣವಾಗಿ ಭಗವಂತನಿಗೆ ಸಮರ್ಪಿಸಿಕೊಂಡ ಅವರು, ಹಿಂದೆಯೇ ಕಾಲೇಜು ದಿನಗಳಲ್ಲಿ ಪಾಠ ಮಾಡಿದ ವರಕವಿಯ – ನನ್ನ ಹರಣ, ನಿನಗೆ ಶರಣ, ಸಕಲ ಕಾರ್ಯ ಕಾರಣ | ನಿನ್ನ ಮನನ, ದಿಂದ ತನನ, ಎನುತಿದೆ ತನು ಪಾವನ || – ಎಂಬ ಪ್ರೀತಿಯ ಸಾಲುಗಳು ಮತ್ತೆ-ಮತ್ತೆ ಅನುರಣಿಸುತ್ತಾ, ಅವರೊಳಗಿನ ಅಪ್ಪಟ ಆಸ್ತಿಕನನ್ನು ಹೃದ್ಯವಾಗಿಸುತ್ತವೆ. ಹಾಗೆ ಅವರು ಮೌಢ್ಯವನ್ನು ಬಲವಾಗಿ ಖಂಡಿಸುತ್ತಿದ್ದವರು. ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು ದಕ್ಷಿಣದ ದೇಶಕದು ಕುದುರೆಯಹುದೇ ? – ಎಂಬ ಕುವೆಂಪು ಸೊಲ್ಲನ್ನು ಎದೆಗಂಟಿಸಿಕೊಂಡಿದ್ದವರು. ಅದೇ ಕವಿಯ ‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
‘ನಿನ್ನೆದೆಯ ದನಿಯೆ ಋಷಿ ಮನು ನಿನಗೆ ನೀನು’ ಎಂದು ತನ್ನದೆಯ ದನಿಯನ್ನೇ ಆಲಿಸುತ್ತಿದ್ದವರು. ಬದುಕಿನ ಆಚೆ – ಈಚೆಯೆಲ್ಲೂ ಬಣ್ಣವನ್ನು ಹಚ್ಚಿಕೊಳ್ಳದೇ, ಇದ್ದಂತೆ ತೆರೆದುಕೊಂಡು, ಶುದ್ಧ ಪ್ರಕೃತಿಯಾಗಿದ್ದವರು. ಹಣ್ಣಾದ ಕೂದಲುಗಳನ್ನೂ ಸ್ವಾಭಾವಿಕವೆಂದು ಹಾರ್ದಿಕವಾಗಿ ಸ್ವಾಗತಿಸಿ, ಹಿರಿತನದ ಕಳೆಯಲ್ಲಿ ಸಂತೃಪ್ತರಾಗಿದ್ದವರು. ‘ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು’ – ಎಂಬ ಬೇಂದ್ರೆ ಮಾಸ್ತರರ ಸೊಲ್ಲಿನನ್ವಯ ಹೃದಯ ಸೌಂದರ್ಯದಿಂದ ಸಮಕ್ಷಕ್ಕೆ ಬಂದವರಿಗೆಲ್ಲ ಅಂತರಂಗಕ್ಕೆ ಸಾಕ್ಷಾತ್ಕಾರವಾದ ಚೆಲುವ ಚನ್ನಿಗ. ಬಿಳಿದಾದ ಮೊಗದಲ್ಲಿನ ಹೊಳೆವ ಕಂಗಳ ಕಾಂತಿಯೊಂದಿಗೆ ಬಾಯ್ತೆರೆದರೆ ಸಾಕು, ಧುಮ್ಮಿಕ್ಕಿ ಪ್ರವಹಿಸುವ ನಗುವಿನ ಹೊಳೆಯ ಮಾಟಕ್ಕೆ ಮನಸೂರೆಗೊಳ್ಳದವರಿಲ್ಲ. ಅವರ ನಗುವಿನಲ್ಲಿ ಕೊಂಕಿಲ್ಲ, ಕೊಳಕಿಲ್ಲ, ಕೃತಕತೆಯಂತೂ ಇಲ್ಲವೇ ಇಲ್ಲ. ಭಾವಶುದ್ದಿಯ ಸಾಕಾರವಷ್ಟೇ. ಹೀಗಾಗಿಯೇ ಅವರು ಯಾರಿಗೂ ಬೇಡವಾಗದಂತಿದ್ದಾರೆ.
ಅವರದು ದೈವೀದತ್ತವಾದ ಜನ್ಮಜಾತಪ್ರತಿಭೆ. ಅದು ಮಾನಿತವಾಗಲು ಕೊಡಗಟ್ಟಲೆ ಬೆವರನ್ನು ಚೆಲ್ಲಿದವರು. ಎಂದೂ ನಿಷ್ಕ್ರಿಯವಾಗಿದ್ದವರಲ್ಲ. ನಿರಂತರವಾಗಿ ಅಧ್ಯಯನಮುಖಿಯಾಗಿದ್ದವರು. ಸೃಜನಶೀಲವಾದ ಬಹುಬಗೆಯ ನವ – ನವ್ಯ ಪ್ರಯೋಗಗಳಲ್ಲಿ ಪ್ರವರ್ತರಾದವರು. ಒಡನಾಟ, ಅನುಭವ ಹಾಗೂ ಅಭಿವ್ಯಕ್ತಿಯಿಂದ ಪಕ್ವವಾದವರು. ಪಟ್ಟ ಪಾಡುಗಳನ್ನೆಲ್ಲ ಹುಟ್ಟು ಹಾಡನ್ನಾಗಿಸಿದವರು. ಸೈದ್ಧಾಂತಿಕ ವ್ಯಕ್ತಿಯಾಗಿ ಆಕಾರಗೊಂಡವರು. ಶುದ್ಧತೆ ಬದ್ಧತೆ ಪ್ರಬುದ್ಧತೆಯ ರಾಜ ನಡೆಯಿಂದ ಬಹುಮಾನ್ಯರಾದವರು ! ಅವರು ಹಾಗೆ ಆಕಾರಗೊಳ್ಳಲು ಅವರಲ್ಲಿ ಅಂತರ್ಗತವಾಗಿ ಪ್ರವಹಿಸುತ್ತಿರುವ ಸಂಸ್ಕಾರದಾತಾರರಾದ ಗುರುಕಾರುಣ್ಯವನ್ನೆಂದೂ ಜತನದಿಂದ ಸ್ಮೃತಿಪಟಲದಲ್ಲಿ ಕಾಪಿಟ್ಟುಕೊಂಡವರು. ತಾನು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಶಿಷ್ಯನೆಂದು ಅಭಿಮಾನದಿಂದ ಆಡಿಕೊಳ್ಳುತ್ತಿದ್ದವರು. ತನ್ನ ಗುರು ಸಿದ್ದಲಿಂಗಯ್ಯನವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಿಗೊಂಡಾಗ ತಾನೇ ಸಮ್ಮೇಳನಾಧ್ಯಕ್ಷರಾದಂತೆ ಹಿರಿಹಿರಿ ಹಿಗ್ಗಿದವರು. ಮಾತಿನ ಲೋಕದ ಮಹಾಕವಿ ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರವರನ್ನು ತಮ್ಮ ಮಾನಸ ಗುರುವೆಂದು ಮನಸಾ ಒಪ್ಪಿದವರು. ಅವರಲ್ಲಿ ಶೇಣಿಯವರೇ ಆವಾಹನೆಯಾಗುವುದನ್ನು ಕಂಡು ಮರಿ ಶೇಣಿ, ಅಭಿನವ ಶೇಣಿ – ಎಂದು ಮನದುಂಬಿ ಉದ್ಘರಿಸಿದ್ದುಂಟು.
ಸರಸ್ವತಿಯ ನಿಜಕಂಠಾಭರಣವಾದ ಅವರ ನಾಲಿಗೆಯಲ್ಲಿನ ಶ್ರೀವಾಣಿವಿಲಾಸದ ವಿರಾಟ್ ದರ್ಶನದಲ್ಲಿ ಅಪ್ರತಿಮವಾದ ಪುರಾಣಪ್ರಜ್ಞೆ, ಅಸಮಾನ್ಯವಾದ ಪರಂಪರೆಯ ಅರಿವು, ವಿಶೇಷವಾದ ತಾತ್ವಿಕ ದೃಷ್ಟಿ, ರಾದ್ದಾಂತವನ್ನು ಸೃಷ್ಟಿಸದ ಸಿದ್ಧಾಂತಗಳ ಜ್ಞಾನ, ಅನುಪಮವಾದ ಚಿಂತನಶೀಲ ಸಾಮರ್ಥ್ಯ ಹಾಗೂ ಜೀವ ಮತ್ತು ಜೀವನ ಪ್ರೀತಿಯ ಮನುಷ್ಯತ್ವದ ಉದಾರವಾದವು ಹಾಸುಹೊಕ್ಕಾಗಿದ್ದು, ಹುಡುಕಾಟ – ತಡುಕಾಟವಿಲ್ಲದೆ, ಓತ:ಪ್ರೋತವಾಗಿ, ಲಾಲಿತ್ಯಮಯವಾಗಿ ಹೃದಯಕ್ಕೆ ಮುಟ್ಟಿಸುವಲ್ಲಿ ಸಶಕ್ತರಾಗಿದ್ದಾರೆ. ಅವರು ಮಾತಿಗೆ ನಿಂತರೆ ಗಂಟೆ ಮೀರಿ ಮಾತನಾಡಿದರೂ ಇಷ್ಟು ಬೇಗ ಮಾತು ಮುಗಿಸಬಾರದಿತ್ತು ಎಂದು ಎಲ್ಲರೂ ಅಂದುಕೊಳ್ಳುವ ಮಾಟದ ಮಾತು ಅವರದು. ಅವರ ತರಗತಿಗಾಗಿಯೇ ಕಾಯುವ, ಉಡಾಳ ವಿದ್ಯಾರ್ಥಿಗಳೂ ತುಟಿಯನ್ನು ಪಿಟುಕಿಸದೆ ಪಾಠವನ್ನು ಆಲಿಸುವ, ಜಟಿಲವಾದ ಪ್ರಶ್ನೆಗಳಿಗೂ ಪ್ರತ್ಯುತ್ಪನ್ನಮತಿತ್ವದಲ್ಲಿ ಕಲಾತ್ಮಕವಾಗಿ ಉತ್ತರಿಸಿ ಚಕಿತಗೊಳಿಸುತ್ತಾ, ಜಿ.ಎಲ್. ಹೆಗಡೆ ಸರ್ ಕ್ಲಾಸ್ ಎಂಬ ಛಾಪನ್ನು ಮೂಡಿಸಿದವರು. ರಂಗದಲ್ಲಿ ರಾಮನಾದರೆ ರಾಮನೇ ‘ಸೈ’ ಎನಿಸಿದರೂ, ರಾವಣನಾದರೆ ರಾವಣನೇ ‘ಸೈ’ ಎನಿಸುವವರು. ಸಂಧಾನದಲ್ಲಿ ಕೃಷ್ಣನಾದರೆ ಕೃಷ್ಣನನ್ನೇ ಹೌದೆನಿಸುವವರು. ಕೌರವನಾದರೆ ಕೌರವನನ್ನೇ ಸರಿ ಎನಿಸುವವರು. ಪಾತ್ರದಲ್ಲಿ ಪರಕಾಯ ಪ್ರವೇಶಗೈದು ಪಾತ್ರವೇ ಆಗಿ ಸಮರ್ಥಿಸಿಕೊಳ್ಳುವಲ್ಲಿ ಪ್ರತಿ ಇಲ್ಲದ ಪ್ರತಾಪಿಯಾಗಿದ್ದವರು. ಯಾರೂ ಕಾಲಾತೀತರಲ್ಲ ಎಂಬ ಭಾರತೀಯ ತತ್ವಶಾಸ್ತ್ರದ ಬಹುಮೂಲ್ಯವಾದ ಸಾರವನ್ನು ಮಾತಿನ ಮಂಟಪದಲ್ಲಿ ಸುವೇದ್ಯಗೊಳಿಸುವ ಆದ್ಯಂತಿಕವಾದ ನಿಲುವನ್ನು ತಳೆದವರು.
ಅವರು ಒಂದಿಷ್ಟೇ ಕೃತಿಗಳನ್ನು ರಚಿಸಿದರೂ, ರಚಿಸಿದ ಎಲ್ಲಾ ಕೃತಿಗಳು ಜೀವಂತವಾಗಿರುವ ಅತ್ಯುತ್ಕೃಷ್ಟವಾದ ಕೃತಿಗಳೇ ಆಗಿವೆ. ಅವರ ಶೇಣಿ ರಾಮಾಯಣ, ಶೇಣಿ ಭಾರತ ಹಾಗೂ ನಿಮ್ಮ ಚಿಟ್ಟಾಣಿ – ಹೊತ್ತಿಗೆಗಳಂತೂ ಅನನ್ಯವಾದ ದಾಟಿಯಲ್ಲಿನ ತನ್ನಿಂದ ತಾನಾಗಿಯೇ ಓದಿಸಿಕೊಂಡು ಹೋಗುವ ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನಗಳು. ಬರೆಯುವುದಷ್ಟೇ ಸಾಹಿತ್ಯವಲ್ಲ, ನಿಜವಾಗಿ ಬದುಕುವುದೇ ಸಾಹಿತ್ಯ – ಎಂಬುದನ್ನೇ ಬಲವಾಗಿ ಪ್ರತಿಪಾದಿಸುತ್ತ, ಬದುಕುವ ಸಾಹಿತ್ಯಕ್ಕೆ ಕರೆಕೊಟ್ಟವರು.
ಕವಿ ವೆಂಕಟೇಶ ಮೂರ್ತಿಯವರೆಂದಂತೆ – ‘ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಇದ್ದವರು ಅವರು. “ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮನೆ’ ಎಂಬುದವರಿಗೆ ಗೊತ್ತು. ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ, ಕುದುರೆ ನೀನ್, ಅವ ಪೇಳ್ದಂತೆ ಪಯಣಿಗನು, ಮದುವೆಗೂ – ಮಸಣಕೋ, ಹೋಗೆಂದ ಕಡೆಗೋಡು, ಪದ ಕುಸಿಯೆ ನೆಲವಿಹುದು ಮಂಕುತಿಮ್ಮ – ನೆಂಬ ಕಗ್ಗೋಕ್ತಿಯನ್ನು ಒಪ್ಪಿದವರು. ಯಾವ ಅಪೇಕ್ಷೆ – ನಿರೀಕ್ಷೆಯನ್ನು ಹೊಂದದೆಯೇ ಸಂಸಾರಿಯಾಗಿಯೂ ಸ್ವಂತಕ್ಕೆ ಒತ್ತು ಕಳೆದುಕೊಂಡ ಸಂತನಂತಿದ್ದವರು. ಯೋಗೀಶ್ವರನಾಗಿ ಅಕ್ಷರಶಃ ಗೋಪಾಲಕೃಷ್ಣ ನೆಂಬ ಅಭಿದಾನಕ್ಕೆ ಅನ್ವರ್ಥಕವಾಗಿದ್ದವರು. ಅವರ ಪಾದಸ್ಪರ್ಶದಲ್ಲಿ ಪಾವನ ಗಂಗೆಯ ಸಿಂಚನವಾಗುತ್ತದೆ.
ಬಾಳ ಪಯಣದಲ್ಲಿ ಸಂಗಾತಿಯಾದ ಅವರು ಮಾಯಕ್ಕನೊಂದಿಗಿನ ಬಾಳ ಸಂಜೆಯಲ್ಲಿ ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿ – ಎಂಬ ಅಂಬಿಕಾತನಯದತ್ತರ ಸಖೀಗೀತದ ಉಕ್ತಿಯನ್ನು ಪಠಿಸುತ್ತ ಮುಂದಡಿಯಿಟ್ಟವರು.
ಅವರದು ವೃತ್ತಿ ಬದುಕಿನಲ್ಲಿದ್ದಾಗಲೂ ಕಾರ್ಯಕ್ಷೇತ್ರವನ್ನು ಮೀರಿ ವಿಕಸಿಸಿದ ಅನುಪಮವಾದ ವ್ಯಕ್ತಿತ್ವ. ಅರವತ್ತರ ಹೊಸ್ತಿಲಲ್ಲಿ ಸರ್ಕಾರದ ಪ್ರಚಲಿತ ನಿಯಮಾವಳಿಯಂತೆ ಅವರು ನಿಯುಕ್ತಿಗೊಂಡಿದ್ದ ಉಜ್ಜುಗದಿಂದ ವಯೋಸಹಜವಾಗಿ ನಿರ್ಗಮಿಸಿದರೂ, ಪ್ರವೃತ್ತಿಯಿಂದ ಕಾಯಕಯೋಗಿಯಾಗಿಯೇ ಇದ್ದವರು. ಅವರ ವಿದ್ವತ್ ಪ್ರತಿಭೆಗೆ, ಜೀವನೋತ್ಸಾಹಕ್ಕೆ ಹಾಗೂ ಸಾರ್ವಜನಿಕ ಸಂಬಂಧಕ್ಕೆ ಅಭಿಪ್ರೇರಣೆಗೊಂಡು ನಾಡಿನ ಉದ್ದಗಲದಲ್ಲಿ ಅವರನ್ನು ಅನೌಪಚಾರಿಕವಾಗಿ ಗುರುವೆಂದು ಅಂಗೀಕರಿಸಿದವರ ಸಂಖ್ಯೆಯೇನೂ ಅಷ್ಟಿಷ್ಟಲ್ಲ. ಯಕ್ಷಗಾನ, ತಾಳಮದ್ದಲೆ, ಉಪನ್ಯಾಸ ಹಾಗೂ ಪ್ರವಚನಗಳಿಂದಲೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಅವರು ಕಣ್ಣೆದುರಿಗಿನ ಜಂಗಮ ವಿಶ್ವವಿದ್ಯಾಲಯ. ಮನೆಯಂಗಳದಲ್ಲಿ ಯಕ್ಷಭಾರತಿ – ಯಕ್ಷಗಾನ ಸಂಶೋಧನಾ ಕೇಂದ್ರವನ್ನು ಹುಟ್ಟುಹಾಕಿ, ಸರ್ಕಾರದ ಮಟ್ಟದಲ್ಲಿ ಮಾಡಲಾಗದ್ದನ್ನು ಒಂಟಿ ಸಲಗನಾಗಿ ವ್ಯಕ್ತಿಗತವಾಗಿ ಮಾಡಿತೋರಿಸಿದವರು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ, ಲಭ್ಯ ಅತ್ಯಲ್ಪಾವಧಿಯಲ್ಲಿ ಮುಂದಿನವರಿಗೆ ದಿಕ್ಸೂಚಿಯನ್ನು ತೋರಿರುವಲ್ಲಿ ಅವರಿಗಂತೂ ಸಾರ್ಥಕ್ಯವಿದೆ. ಒಟ್ಟಂದದಲ್ಲಿ ಸಮೃದ್ಧಿಯ ಅರವತ್ತೈದು ವಸಂತಗಳ ಪಯಣದ ಪರ್ವಕಾಲದ ಬಿಂದುವಿನಲ್ಲಿ ಅವರಿಗೊಂದು ಆಪ್ತ ಅಭಿನಂದನೆಯು ಸಕಾಲಿಕವೇ ಹೌದು. ಅದರಲ್ಲಿ ಗರ್ಭಿಕೃತಗೊಳ್ಳುವಲ್ಲಿ ನನ್ನೀ ಲೇಖನಕ್ಕೆ ಸೌಭಾಗ್ಯವಲ್ಲದೆ ಇನ್ನೇನು ? ಅವರ ಶಿಷ್ಯನಾಗಿರುವ ಸುಕೃತದಿಂದಷ್ಟೇ.
ಪ್ರಾಪ್ತವಾದ ಅವಕಾಶಕ್ಕೆ ಬ್ರಹ್ಮಾನಂದಕ್ಕೆ ತುಲ್ಯವಾದ ಆತ್ಮಾನಂದದಲ್ಲಿ ಪುಳುಕಗೊಳ್ಳುತ್ತಿದ್ದೇನೆ. ಅವರು ನೂರರ ಸಂಭ್ರಮದ ಸವಿಯನ್ನು ಉಣ್ಣುವಂತಾಗಲೆಂದು ಅಂತರಂಗದ ಆರಾಧ್ಯ ದೇವ ಪ್ರಭು ಶ್ರೀ ರಾಘವೇಂದ್ರ ಸಾರ್ವಭೌಮರನ್ನು ಶ್ರದ್ಧಾ – ಭಕ್ತಿ ಸಮಾನ್ವಿತನಾಗಿ ಮನಸಾ ಪ್ರಾರ್ಥಿಸುತ್ತೇನೆ.
– ಮಂಜುನಾಥ ಗಾಂವ್ಕರ್ ಬರ್ಗಿ
ಫೋರ್ ಎಂ.ಎ. (ಕನ್ನಡ, ಸಂಸ್ಕೃತ, ಇತಿಹಾಸ ಹಾಗೂ ಪತ್ರಿಕೋದ್ಯಮ), ಎಂ.ಇಡಿ.
ರಾಜ್ಯಾಧ್ಯಕ್ಷರು, ಕರ್ನಾಟಕ ಸಂಸ್ಕೃತ ಪರಿಷತ್ (ರಿ.) ಕುಮಟಾ
(ಕನ್ನಡ ಚಂದ್ರಮ – ಚಂಪಾನಿಲಯ, ಬರ್ಗಿ ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ – 581 440). ದೂ.ಸಂ. : 9901915672.