ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 18-11-2024ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾ ಆಡುಕಳ ಇವರು ರಚಿಸಿರುವ ಡಾ. ಶ್ರೀಪಾದ ಭಟ್ ನಿರ್ದೇಶನ ಹಾಗೂ ವಿದುಷಿ ಮಾನಸಿ ಸುಧೀರ್ ನೃತ್ಯಸಾಂಗತ್ಯದಲ್ಲಿ ವಿದುಷಿ ಅನಘಶ್ರೀ ಇವರು ‘ನೃತ್ಯಗಾಥ’ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಡಾ. ವೀರಕುಮಾರ್ ಹಾಗೂ ಡಾ. ಉಷಾ ಪಾರ್ವತಿ ದಂಪತಿಗಳ ಪುತ್ರಿಯಾದ ವಿದುಷಿ ಅನಘಶ್ರೀ ನೃತ್ಯನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿ ಕಳೆದ 18 ವರುಷಗಳಿಂದ ಭರತನಾಟ್ಯ ಅಭ್ಯಾಸಿಸುತ್ತಿದ್ದಾಳೆ. ಕರ್ನಾಟಕ ಫ್ರೌಢ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ. ಉಡುಪಿಯ ಮಾರ್ಪಳ್ಳಿಯ ಯಕ್ಷಗಾನ ಮಂಡಳಿಯಲ್ಲಿ ಯಕ್ಷಗಾನವನ್ನು ಅಭ್ಯಸಿಸುತ್ತಾ ಒಳ್ಳೆಯ ಯಕ್ಷಗಾನ ವೇಷಧಾರಿಯೂ ಆಗಿದ್ದಾಳೆ. ದೂರದರ್ಶನದ ಬಿ ಗ್ರೇಡ್ ಕಲಾವಿದೆಯಾಗಿರುವ ಈಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಶಿಷ್ಯವೇತನವನ್ನೂ ಪಡೆದಿದ್ದಾಳೆ. ನೃತ್ಯನಿಕೇತನ ಕೊಡವೂರು ಸಂಸ್ಥೆಯ ನೃತ್ಯಗಾಥಾ, ಚಿತ್ರಾ, ನಾರಸಿಂಹ, ನಂದಗೋಕುಲ, ಶಬರಿ, ಶ್ರೀನಿವಾಸಕಲ್ಯಾಣ ಮುಂತಾದ ನೃತ್ಯರೂಪಕ ಮತ್ತು ನೃತ್ಯ ನಾಟಕಗಳಲ್ಲಿ ಭಾಗವಹಿಸಿದ್ದು, ಪುಷ್ಪರಾಣಿ, ಮಹಿಳಾಭಾರತ, ಚೋಮನದುಡಿ, ಗಂಗಿಪರಸಂಗ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾಳೆ. ಬೇರೆಬೇರೆ ಸಂಸ್ಥೆಗಳು ನೀಡಿದ ನೃತ್ಯಕಲಾ ಶಿರೋಮಣಿ, ಅಭಿನಯ ಶಾರದೆ ಮುಂತಾದ ಬಿರುದುಗಳಿಂದ ಪುರಸ್ಕೃತಳಾಗಿದ್ದಾಳೆ.