ಚಿಕ್ಕಮಗಳೂರು : ರಂಗಮಂಡಲ ಬೆಂಗಳೂರು ಮತ್ತು ಅವನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಜನರೆಡೆಗೆ ಕಾವ್ಯ ಕಾರ್ಯಕ್ರಮದ ಐದನೇ ಕವಿಗೋಷ್ಠಿಯನ್ನು ದಿನಾಂಕ 18 ನವೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಕಾಫಿನಾಡು ಚಿಕ್ಕಮಗಳೂರಿನ ಕ.ಸಾ.ಪ. ಆವರಣ, ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಕವಿಯತ್ರಿ ಮತ್ತು ಕಥೆಗಾರ್ತಿ ಸವಿತಾ ನಾಗಭೂಷಣ ಇವರು ಚಿಕ್ಕಮಗಳೂರು ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ಕವಿಗೋಷ್ಠಿ 1 ಕೊಪ್ಪದ ಸಾಹಿತಿ ಎಸ್.ಎನ್. ಚಂದ್ರಕಲಾ ಹಾಗೂ ಮಧ್ಯಾಹ್ನ 1-30 ಗಂಟೆಗೆ ಕವಿಗೋಷ್ಠಿ 2 ಅಂಕಣಕಾರರು ಮತ್ತು ವಿದ್ವಾಂಸರಾದ ಡಾ. ಎಚ್.ಎಸ್. ಸತ್ಯನಾರಾಯಣ ಇವರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ 4-00 ಗಂಟೆಗೆ ಸರ್ವಾಧ್ಯಕ್ಷರೊಂದಿಗೆ ಸಂವಾದ, ಭಕ್ತನಕಟ್ಟೆ ಲೋಕೇಶ್, ರಮೇಶ್ ಕರಡೀಪುರ, ರಂಗಪಯಣ ಕಲಾತಂಡ (ರಿ.) ಹಿರೇನಲ್ಲೂರು ಶ್ರೀನಿವಾಸ್ ಮತ್ತು ತಂಡದ ಹಾಡುಗಾರರಿಂದ ‘ಪದ-ಪಾದ’ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.