ಚನ್ನರಾಯಪಟ್ಟಣ : ಪ್ರತಿಮಾ ಟ್ರಸ್ಟ್ ಇವರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಇದರ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ ತೊಗಲುಗೊಂಬೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 14 ನವೆಂಬರ್ 2024ರ ಗುರುವಾರದಂದು ಚನ್ನರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ ನಾಡಿನ ಕಲೆ, ಸಂಸ್ಕೃತಿ ಹಾಗೂ ಪುರಾತನ ಕಾಲದ ತೊಗಲುಗೊಂಬೆ ನಾಟಕದ ಪ್ರದರ್ಶನದಿಂದ ದೇಸಿ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಉಂಟು ಮಾಡಬಹುದು. ಗ್ರಾಮೀಣ ಭಾಗದಲ್ಲಿ ಕಲೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಅಂದಿನ ಕಾಲದಲ್ಲಿ ಜನರಿಗೆ ಮನರಂಜನೆ ನೀಡುವ ಕಾರ್ಯಕ್ರಮ ಇದಾಗಿತ್ತು. ಕಲಾವಿದರ ಕೈಚಳಕದಿಂದ ತೊಗಲು ಗೊಂಬೆ ನಾಟಕ ಉತ್ತಮವಾಗಿ ಮೂಡಿಬರುತ್ತಿತ್ತು. ಇದೊಂದು 3500 ವರ್ಷಗಳ ಇತಿಹಾಸ ಹೊಂದಿದ ಪ್ರಾಚೀನ ಕಲೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಮಾ ಟ್ರಸ್ಟ್ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ನಮ್ಮ ದೇಸೀಕಲೆಗಳಿಗೆ ವಿಶೇಷ ಸ್ಥಾನವಿದ್ದು, ಎಲ್ಲಾ ಕಲೆಗಳ ತಪೋಭೂಮಿ ನಮ್ಮದಾಗಿದೆ. ಸದ್ಭಾವನೆಗಳನ್ನು ರೂಪಿಸಿ ಸಾಕಾರಗೊಳಿಸಲು ಇದು ಸಹಕಾರಿಯಾಗಲಿದೆ. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಣ ನೀಡುವುದು ಮತ್ತು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅನಾವರಣಗೊಳಿಸಿದರೆ ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಕಟ್ಟಡ ನಿರ್ಮಾಣ ಹಾಗೂ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಜೀವನದಲ್ಲಿ ಸೇವೆ ಮಾಡುವ ಧ್ಯೇಯ ನಮ್ಮದಾಗಬೇಕು.” ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ದೀಪಾ ಮಾತನಾಡಿ “ತೊಗಲು ಗೊಂಬೆ ನಾಟಕ ಭಾರತದ ಸಂಸ್ಕೃತಿ ಬಿಂಬಿಸುವ ಕಲೆ ಎನಿಸಿದೆ. ಇದರಲ್ಲಿ ರಾಮಾಯಣ, ಮಹಾಭಾರತದ ಪಾತ್ರವನ್ನು ಮನಮುಟ್ಟುವಂತೆ ತಿಳಿಸಿಕೊಡಲಾಗುತ್ತದೆ. ಮಕ್ಕಳಲ್ಲಿ ಸೃಜನಾತ್ಮಕ ಭಾವನೆಗಳನ್ನು ಮೂಡಿಸಲು ಇದು ಪ್ರೇರಣೆಯಾಗಲಿದ್ದು, ತಾಲೂಕಿನ ಶಾಲೆಗಳಲ್ಲಿ ಈ ಕಲೆಯ ಪ್ರದರ್ಶನಕ್ಕೆ ಅವಕಾಶ ಮಾಡಲಾಗುವುದು. ಈಗಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಾವಿದ ಉಮೇಶ್ ತೆಂಕನಹಳ್ಳಿ ತರಬೇತಿ ನೀಡಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳು ಅನೇಕ ಕಡೆ ಉತ್ತಮ ಪ್ರದರ್ಶನ ನೀಡಿದ್ದಾರೆ.” ಎಂದರು.
ಪತ್ನಿ ಪುತ್ರ ಸೇರಿದಂತೆ ತಮ್ಮ ಇಡೀ ಕುಟುಂಬದೊಂದಿಗೆ ಆಗಮಿಸಿದ್ದ ಗುಂಡುರಾಜ್ ಮಹಾಭಾರತದ ಅರ್ಜುನ ಮತ್ತು ಸುಪ್ರಭಾ ವಿವಾಹ ಪ್ರಸಂಗವೊಂದನ್ನುಆಯ್ದುಕೊಂಡು ಮಕ್ಕಳಿಗೆ ತೊಗಲುಗೊಂಬೆಗಳ ಮೂಲಕ ಪ್ರದರ್ಶನ ನೀಡಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿ ಮಹೇಶ್ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ. ಎನ್. ಲಿಂಗರಾಜು, ಲೋಕೇಶ್, ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಲೋಕೇಶ್ ಮುಖ್ಯ ಶಿಕ್ಷಕ ಡಿ. ಜಿ. ಪ್ರಕಾಶ್, ಪೇಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ ಉಪಸ್ಥಿತರಿದ್ದರು.