ಬೆಂಗಳೂರು : ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ ಟ್ರಸ್ಟ್ (ರಿ.) ಸಾಧನಕೇರಿ ರಸ್ತೆ, ಧಾರವಾಡ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ‘ಆಧುನಿಕ ಕನ್ನಡ ರಂಗಭೂಮಿ ದಿನೋತ್ಸವ’ದ ಪ್ರಯುಕ್ತ ಸಂವಾದ ಕಾರ್ಯಕ್ರಮವನ್ನು ದಿನಾಂಕ 23 ನವೆಂಬರ್ 2024ರಂದು ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ, ಕರ್ನಾಟಕ ನಾಟಕ ಅಕಾಡೆಮಿಯ ಚಾವಡಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ರಂಗಭೂಮಿ – ಸಾಧ್ಯತೆ, ಸವಾಲು ಮತ್ತು ಬಿಕ್ಕಟ್ಟುಗಳು (ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಹಲವು ಸಮಸ್ಯೆಗಳು) ಎಂಬ ವಿಷಯದ ಬಗ್ಗೆ ರಂಗ ನಿರ್ದೇಶಕರು ಮತ್ತು ಚಿಂತಕರು ಡಾ. ಪ್ರಕಾಶ್ ಗರುಡ ಹಾಗೂ ದಾವಣಗೆರೆ ರಂಗಾಯಣದ ನಿರ್ದೇಶಕರು ಮತ್ತು ಅಂಕಣಕಾರರಾದ ಮಲ್ಲಿಕಾರ್ಜುನ ಕಡಕೋಳ ಇವರುಗಳು ವಿಷಯ ಮಂಡನೆ ಮಾಡಲಿರುವರು. ಬೆಂಗಳೂರಿನ ಶ್ರೀ ಗುಂಡಣ್ಣ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.