ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಇವರ ಸಹಯೋಗದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 16 ನವೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಡಿಕೇರಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಪ್ರಸನ್ನ ಇವರು ಮಾತನಾಡಿ “ಅನ್ನದ ವ್ಯಾಮೋಹದ ಬಲೆಯಲ್ಲಿ ನಮ್ಮನ್ನು ನಾವು ಸಿಕ್ಕಿಸಿ ಹಾಕಿಕೊಂಡಿದ್ದೇನೆ. ಕನ್ನಡ ನೆಲದ ನೀರನ್ನು ಕುಡಿಯುತ್ತೇವೆ. ಕನ್ನಡ ಅನ್ನದ ಭಾಷೆಯಾಗಬೇಕು. ಉದ್ಯೋಗದ ಭಾಷೆಯಾಗಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಉದ್ಯೋಗಕ್ಕಾಗಿ ಆಂಗ್ಲ ಭಾಷೆಯನ್ನು ಮೆಚ್ಚಿಕೊಳ್ಳುವುದು ಅವಶ್ಯವಾಗಿದೆ. ನಮ್ಮ ಮನೆಯಲ್ಲಿ ನಾವು ನಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ವ್ಯವಹಾರಕ್ಕೆ ಮಾತ್ರ ಆಂಗ್ಲ ಭಾಷೆಯನ್ನು ಉಪಯೋಗಿಸಿದರೆ ನಮ್ಮ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ” ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರ್ತಿಯಾಗಿ ಆಗಮಿಸಿದ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶ್ರೀಶ ಮಾತನಾಡುತ್ತಾ ನಾಲ್ಕಾರು ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಟ್ಟುಗೂಡಿಸಿ ನಾಡನ್ನು ಕಟ್ಟಿದ ಬಗ್ಗೆ, ಕನ್ನಡ ನಾಡಿನ ಏಕೀಕರಣ, ಭಾಷಾವಾರು ರಾಜ್ಯಗಳ ವಿಂಗಡಣೆಯಾದ ನಂತರ ಮೈಸೂರು ರಾಜ್ಯದ ಉದಯ, ನಂತರ ಕರ್ನಾಟಕ ರಾಜ್ಯವಾದದ್ದು ಇವೆಲ್ಲದರ ಕುರಿತು ನಿರ್ಗರಳವಾಗಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾತನಾಡುತ್ತಾ ಕನ್ನಡ ಅನ್ನದ ಭಾಷೆಯಾಗಬೇಕಾದರೆ ವೈದ್ಯಕೀಯ ಮತ್ತು ತಂತ್ರಜ್ಞಾನ ವಿಷಯಗಳು ಕನ್ನಡದಲ್ಲಿ ಪಾಠ ನಡೆಯುವಂತಾಗಬೇಕು. ಇಂದು ಅಂತರ್ಜಾಲದಲ್ಲಿ ಕನ್ನಡ ಬಹುಮುಂದಿದೆ. ಅದೇ ರೀತಿಯಲ್ಲಿ ವೈದ್ಯಕೀಯ ಮತ್ತು ತಂತ್ರಜ್ಞಾನ ಕನ್ನಡದಲ್ಲಿ ಪಾಠ ಬಂದಲ್ಲಿ ಕನ್ನಡ ಅನ್ನದ ಭಾಷೆಯಾಗುತ್ತದೆ. ಆಗ ಅದು ಉಳಿಯಲು ಸಾಧ್ಯ” ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡುತ್ತಾ ಈ ಕಾಲೇಜು ನಡೆಯುತ್ತಿರುವ ಸ್ಥಳ ನೂರು ವರ್ಷಗಳ ಹಿಂದೆ ಸೆಂಟ್ರಲ್ ಹೈಸ್ಕೂಲ್ ಎಂದು ಹೆಸರಾಗಿತ್ತು. ಆಗ ಇಲ್ಲಿ ಶಿಕ್ಷಕರಾಗಿದ್ದ ಪಂಜೆ ಮಂಗೇಶರಾಯರು ಖ್ಯಾತ ಸಾಹಿತಿಗಳು. ಅವರ 150ನೇ ವರ್ಷಾಚರಣೆ ಈ ವರ್ಷ ನಡೆಯುತ್ತಿದೆ. ಇನ್ನೋರ್ವ ಖ್ಯಾತ ಸಾಹಿತಿಗಳಾದ ಭಾರತೀಸುತರು ಕೂಡ ಇಲ್ಲಿ ಶಿಕ್ಷಕರಾಗಿ ದುಡಿದಿದ್ದಾರೆ. ಕೊಡಗಿನ ಹುತ್ತರಿ ಹಾಡು ‘ಎಲ್ಲಿ ಭೂರಮೆ ದೇವಸನ್ನಿದಿ ಬಯಸಿ ನಿಮ್ಮನೆ ಬಂದಳೋ’ ಹಾಡನ್ನು ರಚಿಸಿದ ಪಂಜೆ ಮಂಗೇಶರಾಯರು ಈ ಶಾಲೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ನೆನಪಿಗಾಗಿ 150ನೇ ವರ್ಷಾಚರಣೆಯನ್ನು ಮುಂದಿನ ದಿನಗಳಲ್ಲಿ ಇದೇ ಕಾಲೇಜಿನ ಅವರಣದಲ್ಲಿ ನಡೆಸಲಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕಾವೇರಿ ಪ್ರಕಾಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಅಂಬೇಕಲ್ ನವೀನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡಿನ ಕುರಿತು ರಚಿಸಿದ ನೃತ್ಯಗಳನ್ನು ಪ್ರದರ್ಶನ ಮಾಡಿದರು. ಕೊನೆಯಲ್ಲಿ ಮಾತನಾಡಿದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, “ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ, ಪರಂಪರೆ, ಇತಿಹಾಸ ಇವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿಕೊಂಡು ಬರುತ್ತಿದೆ. ಅವೆಲ್ಲದರ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ನಾಪೋಕ್ಲು ಹೋಬಳಿ ಕ.ಸಾ.ಪ. ಅಧ್ಯಕ್ಷರಾದ ನೆರವಂಡ ಉಮೇಶ್, ಸಾಹಿತಿಗಳಾದ ಬಿ.ಆರ್. ಜೋಯಪ್ಪ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚುರು, ತಾಲೂಕು ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಚೊಕ್ಕಾಡಿ ಪ್ರೇಮ ರಾಘವಯ್ಯ, ಮಡಿಕೇರಿ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಪುದಿಯನೆರವನ ರಕ್ಷಿತ್ ಮಾದಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಕನ್ನಡ ದ್ವಜಾರೋಹಣ ಮತ್ತು ತಾಯಿ ಭುವನೇಶ್ವರಿ ಪಟಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾವೇರಿ ಪ್ರಕಾಶ್ ಸ್ವಾಗತಿಸಿ, ಉಪನ್ಯಾಸಕಿ ಸುಪ್ರಿಯ ನಿರೂಪಿಸಿದರು.