ಉಡುಪಿ : ಮಾಹೆ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗೋವಿಂದ ಪೈ ಸಂಶೋಧನಾ ಸಂಪುಟ-1 ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 16 ನವೆಂಬರ್ 2024ರ ಶನಿವಾರ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ರಾಂತ ಕುಲಪತಿ ಹಾಗೂ ಗೋವಿಂದ ಪೈ ಸಂಶೋಧನಾ ಸಂಪುಟದ ಪ್ರಧಾನ ಸಂಪಾದಕರಾದ ಡಾ. ಬಿ. ಎ. ವಿವೇಕ್ ರೈ ಮಾತನಾಡಿ “ಸಂಶೋಧನೆಯೆಂದರೆ ಕೇವಲ ವಿಷಯಾಧಾರಿತ ಸಾಮಗ್ರಿ ಸಂಗ್ರಹವಲ್ಲ. ಒಳಗೊಳ್ಳುವಿಕೆ, ತಾತ್ವಿಕತೆ, ಸಿದ್ದಾಂತ, ವೈಜ್ಞಾನಿಕತೆ ಎಲ್ಲವನ್ನೂ ಹೊಂದಿರಬೇಕು. ಈ ರೀತಿಯ ಸಂಶೋಧನೆಯನ್ನು ರಾಷ್ಟ್ರಕವಿ ಗೋವಿಂದ ಪೈ ಅವರ ಬರಹಗಳಲ್ಲಿ ಕಾಣಲು ಸಾಧ್ಯ. ಅದು ಎಲ್ಲವನ್ನೂ ಒಳಗೊಂಡಿರುವ ಸಮಗ್ರತೆಯ ಹೂರಣ. ಕಾಲ ಯಾರಿಗೂ ಕಾಯುವುದಿಲ್ಲ. ನಾವು ಕಾಲದ ಜತೆಗೆ ಸೆಣಸಾಡಬೇಕು. ಗೋವಿಂದ ಪೈ ಅವರ ಆದರ್ಶ ಸಂಶೋಧನಾ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಪುಸ್ತಕವನ್ನು ಓದಿದರೆ ಸಾಲದು. ಓದಿ ಅರಿಯಬೇಕು. ಅರಿತಾಗ ನಾವು ಸ್ನಾತರಾಗುತ್ತೇವೆ. ಆಗ ಗ್ರಂಥದ ಶುದ್ಧತ್ವ ತಿಳಿಯುತ್ತದೆ. ಪುಸ್ತಕ ಮನೆಯಲ್ಲಿಡುವುದು ಶೋಭೆಗಲ್ಲ, ಜ್ಞಾನಾರ್ಜನೆಗೆ ಎಂಬುದು ಅಷ್ಟೇ ಮುಖ್ಯ.” ಎಂದರು.
ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ “ಎರಡನೇ ಸಂಪುಟವೂ ಶೀಘ್ರ ಬರುವಂತಾಗಲಿ.” ಎಂದು ಹಾರೈಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಸಂಪುಟದ ಬಗ್ಗೆ ಮಾತನಾಡಿದರು. ಕೃತಿಯ ಸಂಪಾದಕರಾದ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡಕ, ಡಾ. ಪಾದೇಕಲ್ಲು ವಿಷ್ಣು ಭಟ್ಟ ಸಂಪುಟ ರಚನೆಯಾದ ಬಗೆಯನ್ನು ವಿವರಿಸಿದರು. ಇವರಿಬ್ಬರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಸಹಸಂಶೋಧಕ ಡಾ. ಅರುಣ ಕುಮಾರ್ ಎಸ್. ಆರ್. ನಿರೂಪಿಸಿ, ವಂದಿಸಿದರು. ಗೋವಿಂದ ಪೈ ಸಂಶೋಧನ ಸಂಪುಟ ಗ್ರಂಥವನ್ನು ಕಾಲೇಜು ಆವರಣದಲ್ಲಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ತರಲಾಯಿತು.