ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2024ರಂದು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ, ನಿರಂಜನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂತೋಷ್ ಕುತ್ತಮೊಟ್ಟೆ, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.
ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಬೆಳಿಗ್ಗೆ 9-00 ಗಂಟೆಗೆ ಅರಂತೋಡು ಪೇಟೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. ನಿವೃತ್ತ ಮುಖ್ಯ ಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆ ನೀಡುವರು. ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ರಾಷ್ಟ್ರಧ್ವಜಾರೋಹಣ ಹಾಗೂ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ಸಾಹಿತಿ ನರೇಂದ್ರ ರೈ ದೇರ್ಲ ಸಮ್ಮೇಳನ ಉದ್ಘಾಟಿಸಲಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೊಸ ಕೃತಿಗಳನ್ನು ಬಿಡುಗಡೆಗೊಳಿಸುವರು. ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಕೆ.ಆರ್. ಗಂಗಾಧರ್ ಉಪಸ್ಥಿತರಿರುವರು. ಸಮ್ಮೇಳನದಲ್ಲಿ ಡಾ. ಪ್ರಭಾಕರ್ ಶಿಶಿಲರ ‘ಕುಂತಿ’ ಕಾದಂಬರಿ, ‘ಕಲ್ಲುರ್ಟಿಯ ಕುಕ್ಕುಟ ಕಥನಗಳು’ ಎಂಬ ಕಥಾ ಸಂಕಲನ, ಲೀಲಾ ದಾಮೋದರ ಅವರ ‘ನದಿಯ ನಾದ’ ಕವನ ಸಂಕಲನ, ಸಂಗೀತಾ ರವಿರಾಜ್ ಅವರ ‘ಪಯಸ್ವಿನಿಯ ತೀರದಲ್ಲಿ’ ಲಲಿತ ಪ್ರಬಂಧ ಮತ್ತು ‘ಅಕ್ಕರೆಯ ಕಡೆಗೋಲು’ ಎಂಬ ವಿಮರ್ಶಾ ನಾಟಕ, ಪ್ರಕಾಶ್ ಮೂಡಿತ್ತಾಯರ ‘ಲಸಿಕೆಯ ಕಥೆ’ ಮತ್ತು ‘ಮೌಢ್ಯವೇಕೆ ಇನ್ನೂ’ ಎಂಬ ವಿಜ್ಞಾನ ನಾಟಕ, ನಿರೀಕ್ಷಾ ಸುಲಾಯ ಅವರ ‘ನನ್ನ ಮನಸ್ಸು ನನ್ನ ಕನಸು’ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ ಸಾಹಿತಿ ವಿಮಲಾರುಣ ಪಡ್ಡಂಬೈಲು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಲೀಲಾಕುಮಾರಿ ತೊಡಿಕಾನ, ಎಚ್. ಭೀಮರಾವ್ ವಾಷ್ಟರ್, ಹೇಮಲತಾ ಕಜೆಗದ್ದೆ, ಶಿವದೇವಿ ಅವನೀಶ್ಚಂದ್ರ, ತೀರ್ಥರಾಮ ಹೊದ್ದೆಟ್ಟಿ, ವಿಜಯ್ ಕುಮಾರ್ ಕಾಣಿಚ್ಚಾರ್, ಶಿವಾನಂದ ರಂಗತ್ತಮಲೆ, ಮಮತಾ ರವೀಶ್ ಪಡ್ಡಂಬೈಲು ಪಾಲ್ಗೊಳ್ಳುವರು. ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ 2-00 ಗಂಟೆಗೆ ಸಾಹಿತಿ ನಂದಾ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ‘ನಿರಂಜನ ಶತಮಾನೋತ್ಸವ ಸ್ಮರಣೆ’ ವಿಚಾರಗೋಷ್ಠಿ ನಡೆಯಲಿದೆ. ರಾಜಶೇಖರ ಹಳೆಮನೆ ಇವರು ‘ನಿರಂಜನ ಬದುಕು-ಬರಹ ಅವಲೋಕನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಮಧ್ಯಾಹ್ನ 3-00 ಗಂಟೆಗೆ ‘ಕನ್ನಡ ಭಾಷೆ ಅನ್ನದ ಭಾಷೆ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ಚರ್ಚಾಗೋಷ್ಠಿ ನಡೆಯಲಿದೆ. ದುರ್ಗಾಕುಮಾರ್ ನಾಯರ್ ಕೆರೆ ಪರಿಸಮಾಪ್ತಿ ಮಾಡುವರು. ಪ್ರಕಾಶ್ ಮೂಡಿತ್ತಾಯ ಸಮನ್ವಯಕಾರರಾಗಿರುವರು. ಗಾಯಕ ಕೆ.ಆರ್. ಗೋಪಾಲಕೃಷ್ಣ ಹಾಗೂ ಪೂರ್ಣಿಮಾ ಅವರಿಂದ ಗೀತ ಗಾಯನ ನಡೆಯಲಿದೆ. ಸಂಜೆ 4-00 ಗಂಟೆಗೆ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಧನಂಜಯ ಕುಂಬ್ಳೆ ಸಮಾರೋಪ ಭಾಷಣ ಮಾಡುವರು, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರು ಸಾಧಕನನ್ನು ಸನ್ಮಾನಿಸುವರು. ಸಜ್ಜನ ಪ್ರತಿಷ್ಠಾನದ ಡಾ. ಉಮ್ಮರ್ ಬೀಜದಕಟ್ಟೆ ಪಾಲ್ಗೊಳ್ಳುವರು. ಡಾ. ಹರಪ್ರಸಾದ್ ತುದಿಯಡ್ಕ ತಾ.ಪಂ. ಇಒ ರಾಜಣ್ಣ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಉಪಸ್ಥಿತರಿರುವರು. ಡಾ. ಶ್ವೇತಾ ಮಡಪ್ಪಾಡಿ – ಕಲೆ ಮತ್ತು ಸಂಸ್ಕೃತಿ, ಹುಕ್ರಪ್ಪ ಉಳುವಾರು – ರಕ್ಷಣಾ ಸೇವೆ, ಕುಮಾರಸ್ವಾಮಿ ತೆಕ್ಕುಂಜೆ – ಸಾಹಿತ್ಯ, ಸರಸ್ವತಿ ಚಿದಾನಂದ – ಶಿಕ್ಷಣ, ಗಣೇಶ್ ಭಟ್ – ಹಿರಿಯ ಲೆಕ್ಕ ಪರಿಶೋಧಕ, ಕೆ.ಆರ್. ಪದ್ಮನಾಭ – ಸಹಕಾರ, ಸಮಾಜ ಸೇವೆ, ಡಾ. ಲೀಲಾಧರ ಡಿ.ವಿ. – ಆಡಳಿತ/ ವೈದ್ಯಕೀಯ, ಆನಂದ ಕಲ್ಲಗದ್ದೆ – ಮಾಹಿತಿ ಮತ್ತು ತಂತ್ರಜ್ಞಾನ, ಸಲಿಂ ಸುಳ್ಯ – ಸಮಾಜ ಸೇವೆ, ಉದ್ಯಮ, ಕೇಶವ ಪರವ – ಭೂತಾರಾಧನೆ ಮತ್ತು ತೇಜೇಶ್ವರ ಕುಂದಲ್ಪಾಡಿ – ಪತ್ರಿಕೋದ್ಯಮ ಇವರುಗಳಿಗೆ ‘ಕನ್ನಡ ಕಸ್ತೂರಿ ಸನ್ಮಾನ ಪ್ರದಾನ ನಡೆಯಲಿದೆ. ಸಂಜೆ 5:30ರಿಂದ ಡಾ. ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವ ಗಾನ ಕನ್ನಡ ಗೀತೆಗಳ ಗಾಯನ ಹಾಗೂ ಅರೆಭಾಷೆ ಸಿರಿ ಸಂಸ್ಕೃತಿ -ನೃತ್ಯ ರೂಪಕ ನಡೆಯಲಿದೆ.