ಬಾರ್ಕೂರು : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಬಾರಕೂರು ಇದರ ಜಂಟಿ ಆಶ್ರಯದಲ್ಲಿ ‘ಕನಕ ಜಯಂತಿ’ ಕಾರ್ಯಕ್ರಮವು ದಿನಾಂಕ 18 ನವೆಂಬರ್ 2024ರ ಸೋಮವಾರದಂದು ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರು ಬಿ. ಬಿ. ಎಂ. ಪಿ. ಇದರ ಹೆಚ್ಚುವರಿ ಆಯುಕ್ತರಾದ ಶ್ರೀ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಮಾತನಾಡಿ “500 ವರ್ಷಗಳಿಗೂ ಹಿಂದೆ ಜೀವಿಸಿದ್ದ ಕನಕದಾಸರು ಇಂದೂ ನಮಗೆ ಪ್ರಸ್ತುತ. ಎಲ್ಲಾ ದಾಸರು ಕೀರ್ತನೆಗಳನ್ನು ಬರೆದಿದ್ದರೂ ಕನಕದಾಸರು ಅವರಲ್ಲಿ ಶ್ರೇಷ್ಠರಾಗಿ ಕಂಡುಬರುತ್ತಾರೆ. ಅದಕ್ಕೆ ಕಾರಣ ಕನಕದಾಸರು ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ಮಾಡಿದ ಪ್ರಯತ್ನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ರತ್ನಗಳಾದ ನಳಚರಿತ್ರೆ, ರಾಮಧಾನ್ಯಚರಿತ್ರೆ, ಮೋಹನ ತರಂಗಿಣಿ ಹಾಗೂ ಹರಿಭಕ್ತಿಸಾರ. ಅವರ ಹರಿಭಕ್ತಿ ಸಾರದ 108 ಭಾಮಿನಿ ಷಟ್ಪದಿ ಪದ್ಯಗಳಿಗೆ ಇತ್ತೀಚೆಗೆ ವಿದ್ವಾಂಸರೊಬ್ಬರು 2000 ಪುಟಗಳ ವಿವರಣೆ ನೀಡಿರುವುದು ಅದರ ಶ್ರೇಷ್ಟತೆಗೆ ಸಾಕ್ಷಿ.” ಎಂಬುದಾಗಿ ಅಭಿಪ್ರಾಯ ಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಭಾಸ್ಕರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಪ್ರೊ. ರಾಧಾಕೃಷ್ಣ ವಂದಿಸಿದರು. ಕಾರ್ಯಕ್ರಮಕ್ಕೆ ಮೊದಲು ಶ್ರೀ ರಾಜೇಶ್ ಶ್ಯಾನುಭೋಗ್ ಹಾಗೂ ಬಳಗದವರಿಂದ ‘ಕನಕ ಕೀರ್ತನೆ’ ಪ್ರಸ್ತುತಗೊಂಡಿತು.