ಕುಂಬಳೆ : ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನಾಂಕ 20 ನವೆಂಬರ್ 2024ರಂದು ಸಂಜೆ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ಶಾಲಾ ‘ಕಲೋತ್ಸವಂ’ನ ಸಮಾರೋಪ ಸಮಾರಂಭವು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಇವರು ಮಾತನಾಡಿ “ತುಳುನಾಡು ಸಾಂಸ್ಕೃತಿಕ ಪರಂಪರೆಯ ನೆಲೆಬೀಡು. ಕಾಸರಗೋಡು ಅನೇಕ ಕವಿಗಳು, ಕಲಾವಿದರನ್ನು ನಾಡಿಗೆ ನೀಡಿದೆ. ಕಲೋತ್ಸವವು ಅನೇಕ ಕಲಾವಿದರನ್ನು ನಾಡಿಗೆ ಸಮರ್ಪಿಸುವ ಉತ್ತಮ ವೇದಿಕೆಯಾಗಿದೆ. ಕಲೋತ್ಸವವು ಬದುಕಿನಲ್ಲಿ ಆದರ್ಶ, ಸಂಸ್ಕಾರ, ಗುಣ ನಡತೆ, ಸೇವಾತತ್ಪರ ತಲೆಮಾರನ್ನು ರೂಪಿಸಲು ಸಹಾಯ ಮಾಡುತ್ತದೆ. ಕಲೋತ್ಸವದ ಸ್ಪರ್ಧೆಗಳಲ್ಲಿ ಯಾರೂ ಸೋಲುವುದಿಲ್ಲ. ಗೆಲ್ಲುವುದೂ ಇಲ್ಲ. ಕಲೋತ್ಸವವು ಮಕ್ಕಳ ನಡುವಿನ ಸ್ಪರ್ಧೆಯಾಗಬೇಕೇ ಹೊರತು ಪೋಷಕರ ನಡುವಿನ ಸ್ಪರ್ಧೆಯಾಗಬಾರದು” ಎಂದು ಹೇಳಿದರು.
ಕಾಸರಗೋಡಿನ ಶಾಸಕರಾದ ಎನ್.ಎ. ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂಬ್ದಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸಳಿಗೆ, ಎಣ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ., ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲ ಆರ್. ಭಟ್, ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕಿ ಶಾರದಾ ವೈ, ಕುಂಬಳೆ ಬಿ.ಆರ್.ಸಿ.ಯ ಬಿ.ಪಿ.ಸಿ. ಜಯರಾಮ ಮಾತನಾಡಿದರು.
ಕೇರಳ ರಾಜ್ಯ ಶಾಲಾ ಒಲಿಂಪಿಕ್ಸ್ ಸ್ಪರ್ಧೆಯ 100 ಮೀಟರ್ ವಿಭಾಗದ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ನಿಯಾಸ್ ಅಹಮ್ಮದ್, ರಾಜ್ಯ ಸಬ್ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದ ಶೇಣಿಯ ಶ್ರೀ ಶಾರದಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿ ಅಭಿನವ್ ಎಸ್. ಇವರುಗಳನ್ನು ಸನ್ಮಾನಿಸಲಾಯಿತು. ಪ್ರಿನ್ಸಿಪಾಲ್ ಶಾಸ್ತ್ರ ಕುಮಾರ್ ಎ., ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ, ರಾಧಾಕೃಷ್ಣ ನಾಯಕ್ ಜೆ.ಎಸ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಉಮ್ಮರ್ ಕಂಗಿನಮೂಲೆ, ಪ್ರೈಮರಿ ಎಚ್.ಎಂ. ಫಾರಂ ಸಂಚಾಲಕ ವಿಷ್ಣುಪಾಲ್, ಕಾರ್ಯಕ್ರಮ ಆಯೋಜಕ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಊರಿನ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು. ಕುಂಬಳೆ ಉಪ ವಿದ್ಯಾಧಿಕಾರಿ ಶಶಿಧರ ಸ್ವಾಗತಿಸಿ, ಶೇಣಿ ಪ್ರೌಢ ಶಾಖೆಯ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಯಂ.ಪಿ. ವಂದಿಸಿದರು.