ವಾಮಂಜೂರು : ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ.) ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2024ರಂದು ಪೂರ್ವಾಹ್ನ 10-00 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ‘ಕಲೋತ್ಸವ’ವನ್ನು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ) ಉಜಿರೆ ಇದರ ಆಡಳಿತಕ್ಕೆ ಒಳಪಟ್ಟ ರಜತ ಮಹೋತ್ಸವದ ಸಂದರ್ಭದಲ್ಲಿ ದಿವಂಗತ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಸ್ಮರಣಾರ್ಥ ಈ ಸ್ಪರ್ಧೆಯನ್ನು ನಡೆಸಲಾಗುವುದು.
ಇದರ ಉದ್ಘಾಟನೆಯನ್ನು ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ (ರಿ) ಇದರ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಇವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಂಗಳೂರಿನ ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ) ಇದರ ಕಾರ್ಯದರ್ಶಿಗಳಾದ ಪ್ರೊಫೆಸರ್ ಎ. ರಾಜೇಂದ್ರ ಶೆಟ್ಟಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮಂಗಳೂರು ಪದವು ವಾರ್ಡ್ ಕಾರ್ಪೊರೇಟರ್ ಶ್ರೀ ಭಾಸ್ಕರ್ ಕೆ., ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸುಚರಿತ ಶೆಟ್ಟಿ, ಅಂಗವಿಕಲರ ಕಲ್ಯಾಣ ಸಂಸ್ಥೆ ರಿಜಿಸ್ಟರ್ ಇದರ ಖಜಾಂಚಿಯಾದ ಡಾ. ಕೆ. ದೇವರಾಜ್, ಸೆಂಟ್ರಲ್ ಆಫೀಸ್ ಯೂನಿಯನ್ ಬ್ಯಾಂಕ್ ಹಿರಿಯ ಪ್ರಬಂಧಕರಾದ ಶ್ರೀ ಸುಧೀಂದ್ರ ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀ ಉದಯಕುಮಾರ್ ಕುಡುಪು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಸುಮಾರು 19 ಶಾಲೆಗಳಿಂದ 240 ಭಿನ್ನ ಸಾಮರ್ಥ್ಯವುಳ್ಳ ಮಕ್ಕಳು ತಮ್ಮ ಕಲಾ ಪ್ರತಿಭೆಯನ್ನು ಈ ಕಲೋತ್ಸವದಲ್ಲಿ ಪ್ರಸ್ತುತಪಡಿಸಲಿದ್ದಾರೆ.