ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕಾಪು ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ದಿನಾಂಕ 16 ನವೆಂಬರ್ 2024ರಂದು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ನೆಲದುಲಿಯ ಪರಿಕಲ್ಪನೆಯೇ ಅದ್ಭುತ. ಸಾಹಿತ್ಯದ ಮೂಲಕ ಪ್ರತಿಸ್ಪಂದಿಸುವ ಗುಣ ಹಿಂದಿನಿಂದಲೂ ನಡೆದು ಬಂದಿದೆ. ತಲ್ಲಣಗಳಿಗೆ ಸಮ್ಮೇಳನಗಳು ಪ್ರತಿಸ್ಪಂದಿಸುತ್ತಿತ್ತು. ಇದು ಸೃಜನಶೀಲ ಸಾಹಿತ್ಯಗಳ ಪರಂಪರೆಯಾಗಿ ಬಂದಿದೆ. ಈ ಸಮ್ಮೇಳನವೂ ಅದನ್ನೇ ಮಾಡಿದೆ ಎಂದು ಮೂಲ್ಕಿ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಹಿರಿಯ ಸಾಹಿತಿ ಡಾ. ವಾಸುದೇವ ಬೆಳ್ಳೆ ಹೇಳಿದರು.
ಕಾಪು ತಾಲೂಕು ಕ.ಸಾ.ಪ. ಅಧ್ಯಕ್ಷ ಬಂಟಕಲ್ಲು ಪುಂಡಲೀಕ ಮರಾಠೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಂಗಾಳ ಬಾಬು ಕೊರಗ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾಪು ತಹಶೀಲ್ದಾರ್ ಪ್ರತಿಭಾ ಆರ್., ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅದಾನಿ ಅಧ್ಯಕ್ಷ ಕಿಶೋರ್ ಆಳ್ವ ವೈ. ಸುಧೀರ್ ಕುಮಾರ್ ಪಡುಬಿದ್ರಿ. ಗಾಯತ್ರಿ ಪ್ರಭು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುಜಾತಾ, ಗಿರೀಶ್ ಪಲಿಮಾರ್, ಗ್ರೆಟ್ಟಾ ಮೊರಾಸ್, ಪಿಲಾರು ಸುಧಾಕರ ಶೆಣೈ, ಸೌಮ್ಯಲತಾ ಶೆಟ್ಟಿ, ರಾಯೇಶ್ವರ ಪೈ, ಹರೀಶ್ ಕುಮಾರ್ ಹೆಜಮಾಡಿ, ಪೂರ್ಣಿಮಾ, ಡಾ. ಎಲ್ಲಮ್ಮ ಮತ್ತಿತರರಿದ್ದರು. ದೇವದಾಸ್ ಪಾಟ್ಕರ್ ನಿರೂಪಿಸಿ, ಅನಂತ ಇಂತ ಮೂಡಿತ್ತಾಯ ವಂದಿಸಿದರು. ವಿದ್ಯಾಧರ್ ಪುರಾಣಿಕ್ ಸಹಕರಿಸಿದರು.
ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಪಾಂಗಾಳ ಬಾಬು ಕೊರಗ ಸಹಿತ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಸಮಾಜ ಸೇವೆ ವಿನ್ಸೆಂಟ್ ಪಳ್ಕೆ, ಮಾಧ್ಯಮ ಹಮೀದ್ ಪಡಿಬಿದ್ರಿ, ಸಂಘಟನೆ ವೇದಮೂರ್ತಿ ಶ್ರೀನಿವಾಸ ಉಡುಪ ಹಾಗೂ ಹೊಯ್ಗೆ ಫ್ರೆಂಡ್ ಪಲಿಮಾರು ಸಂಸ್ಥೆಯನ್ನು ಸಮ್ಮಾನಿಸಲಾಯಿತು. ಬಂಟಕಲ್ಲು ರಾಮಕೃಷ್ಣ ಶರ್ಮಾ, ಕೃಷ್ಣಕುಮಾರ್ ರಾವ್ ಮಟ್ಟು ನಿರ್ಣಯ ಮಂಡಿಸಿದರು. ಸಮ್ಮೇಳನದಲ್ಲಿ ಸಾಹಿತ್ಯಕ ಪ್ರಕಟನೆಗಳು, ಕಲಾಕೃತಿಗಳು ಪ್ರೇಕ್ಷಕರ ಗಮನ ಸೆಳೆದಿದ್ದವು.