ಕೊಪ್ಪಳ : ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ, ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ.) ಕೊಪ್ಪಳ ಇವುಗಳ ಆಶ್ರಯದಲ್ಲಿ ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ -2024’ನ್ನು ದಿನಾಂಕ 24 ನವೆಂಬರ್ 2024ರಂದು ಮುಂಜಾನೆ 10 ಗಂಟೆ 15 ನಿಮಿಷಕ್ಕೆ ಕೊಪ್ಪಳದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೃತಿಗಳ ಲೋಕಾರ್ಪಣೆ, ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪ್ರದಾನ, ಸಾಹಿತ್ಯಿಕ ಚರ್ಚೆ, ಸಾಧಕರಿಗೆ ಸಮಾಜಮುಖಿ ಗೌರವ ಪ್ರದಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಅಭಿನಂದನಾ ಗೌರವ ನಡೆಯಲಿದೆ. ಮೊದಲಿಗೆ ಮಹೆಬೂಬ ಕಿಲ್ಲೇದಾರ ಮತ್ತು ಮರಿಯಪ್ಪ ಚಾಮಲಾಪುರ ಇವರಿಂದ ಗೀತ ಗಾಯನ ಪ್ರಸ್ತುತಗೊಳ್ಳಲಿದೆ. ಕೊಪ್ಪಳ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ.ಕೆ. ರವಿ ಇವರು ಉದ್ಘಾಟನೆ ಮಾಡಲಿದ್ದು, ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ಇವರು ಕವಿ ಗವಿಸಿದ್ಧ ಎನ್. ಬಳ್ಳಾರಿಯವರ ಬದುಕು ಮತ್ತು ಕಾವ್ಯದ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಚನ್ನಪ್ಪ ಅಂಗಡಿಯವರ ‘ಇನ್ನು ಕೊಟ್ಟೆನಾದೊಡೆ’, ಅರಳಿ ನಾಗಭೂಷಣ ಇವರ ‘ನೂರೆಂಟು ಹೆಜ್ಜೆಗಳು’ ಹಾಗೂ ನಾಗೇಶ್ ಜೆ. ನಾಯಕ್ ಇವರ ‘ಮನುಷ್ಯರಿಲ್ಲದ ನೆಲ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.