ಶಿರ್ವ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ನವೆಂಬರ್ ಕನ್ನಡ ಮಾಸಾಚರಣೆಯ ಅಂಗವಾಗಿ ‘ತಿಂಗಳ ಸಡಗರ -2024’ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ದಿನಾಂಕ 19 ನವೆಂಬರ್ 2024ರಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಕೋಡು ಪಾಲಮೆ ತೋಟದ ಮನೆಯಲ್ಲಿ ಖ್ಯಾತ ಶನಿಕಥಾ ಭಾಗವತರಾದ ಶ್ಯಾಮರಾಯ ರಾವ್ ಇವರನ್ನು ಸನ್ಮಾನಿಸಲಾಯಿತು. ಅಭ್ಯಾಗತರನ್ನು ಸನ್ಮಾನಿಸಿ ಮಾತನಾಡಿದ ಶ್ರೀಕ್ಷೇತ್ರ ಬಂಟಕಲ್ಲು ದೇವಳದ ನಿಕಟಪೂರ್ವ ಆಡಳಿತ ಮೊಕ್ತೇಸರ ಹಾಗೂ ಬೆಳ್ಳೆ ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ “ಯಕ್ಷಗಾನ ಕಲೆಯನ್ನು ಸಂಪ್ರದಾಯ ಬದ್ಧವಾಗಿ ಅರಗಿಸಿ ಕೊಂಡವರು ಕೋಡು ಪಾಲಮೆ ತೋಟದ ಮನೆ ಶ್ಯಾಮರಾಯ ರಾವ್. ಶನಿಕಥೆ ಎನ್ನುವುದು ಕಥೆಯೂ ಹೌದು, ಪೂಜಾ ಭಾಗವೂ ಹೌದು. ಭಾಗವತಿಕೆಯನ್ನು ವೃತ್ತಿಯಾಗಿ ತೆಗೆದುಕೊಳ್ಳದೆ ಭಾವನಾತ್ಮಕವಾಗಿ ಭಕ್ತಿಪ್ರಧಾನವಾಗಿ ಕಳೆದ 40 ವರ್ಷಗಳಿಂದ ಸೇವಾ ರೂಪದಲ್ಲಿ ಸಮರ್ಪಿಸಿ ಸಂತೃಪ್ತಿ ಕಂಡಿದ್ದಾರೆ. ಶುದ್ಧ ಕನ್ನಡ ಭಾಷೆ ಬಳಸುವ ಏಕೈಕ ಕಲೆಯೇ ಯಕ್ಷಗಾನ” ಎಂದರು.
ಜಿಲ್ಲಾ ಕ. ಸಾ. ಪ. ಗೌರವ ಕೋಶಾಧ್ಯಕ್ಷ ಮನೋಹರ್ ಪಿ. ಮತ್ತು ಕ. ಸಾ. ಪ. ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಇವರು ಶ್ಯಾಮರಾಯ ರಾವ್ ಹಾಗೂ ದೇವಕಿ ರಾವ್ ದಂಪತಿ ಸಮೇತರಾಗಿ ಸನ್ಮಾನಿಸಿ ಅಭಿನಂದಿಸಿದರು. ಭಾಗವತರು ತಮ್ಮ 40 ವರ್ಷಗಳ ಅನುಭವವನ್ನು ವಿವರಿಸಿ ಶನಿಕಥಾ ಪ್ರಸಂಗದಲ್ಲಿ ಬರುವ ಕೆಲವು ಹಾಡುಗಳನ್ನು ಸಾಂಧರ್ಭಿಕವಾಗಿ ಹಾಡಿದರು. ಕಾರ್ಯಕ್ರಮದಲ್ಲಿ ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಪಾಣಾರ ಸಂಘದ ಅಧ್ಯಕ್ಷರಾದ ಸುಧಾಕರ ಪಾಣಾರ ಬೆಳ್ಳೆ, ಕ. ಸಾ. ಪ ಜಿಲ್ಲಾ ಸಮಿತಿಯ ಸದಸ್ಯ ಸರಸಿಂಹಮೂರ್ತಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಪು ತಾಲೂಕು ಕ. ಸಾ. ಪ. ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕ. ಸಾ. ಪ. ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿ, ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಪಾದೂರು ವೆಲ್ಫೇರ್ ಎಸೋಸಿಯೇಶನ್ ಕಾರ್ಯದರ್ಶಿ ಸುಕೇಶ್ ಪೂಜಾರಿ, ಮದ್ದಲೆವಾದಕ ಚಂದ್ರಶೇಖರ ಆಚಾರ್ ಮರ್ಣೆ, ಪ್ರಗತಿಪರ ಕೃಷಿಕ ನಿತ್ಯಾನಂದ ನಾಯಕ್ ಪಾಲಮೆ, ಗಣಪತಿ ಪ್ರಭು, ವಿಶ್ವನಾಥ ಪ್ರಭು ಮುರತಂಗಡಿ, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.