ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಅರ್ಪಿಸುವ ‘ಕಲಾ ಪರ್ಬ’ ಚಿತ್ರ ನೃತ್ಯ ಮೇಳವನ್ನು ದಿನಾಂಕ 11 ಜನವರಿ 2025 ಮತ್ತು 12 ಜನವರಿ 2025ರಂದು ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ, ನೃತ್ಯಕಲಾ ಪ್ರದರ್ಶನ, ಶಿಲ್ಪಕಲಾ ಪ್ರದರ್ಶನ, ವಿಚಾರ ಗೋಷ್ಠಿ, ಸಂವಾದ, ಕಲಾ ಕಮ್ಮಟ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ‘ಕಲಾ ಪರ್ಬ’ವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ – ಅಮೂರ್ತ, ಹಿರಿಯ – ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ ಅಭಿವ್ಯಕ್ತ ಹರಿವು, ಸೆಳವುಗಳ ಮೂಲಕ ಮೇಳದ ರೂಪದಲ್ಲಿ ಇಲ್ಲಿ ಆಗುತ್ತಿರುವುದು ಕಲಾ ಸಂಭ್ರಮ ಮತ್ತು ಕಲಾ ಜಂಗಮ. ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾಚಿತ್ರ 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರುವುದು. ಕಲಾಕೃತಿಗಳನ್ನು ಮಿತ ದರದಲ್ಲಿ ಖರೀದಿಸುವವರಿಗೆ ಉತ್ತಮ ಅವಕಾಶವಿದು.
ಲಾಂಛನದ ಅರ್ಥ : ಈ ಕಲಾ ಪರ್ಬದ ಲಾಂಛನವು ಒಂದು ಸಂದೇಶವನ್ನು ನೀಡುತ್ತಿದೆ. ಇಲ್ಲಿ ಒಂದು ಕ್ಯಾನ್ವಾಸ್ ನಲ್ಲಿ ಮೂರು ಬಣ್ಣಗಳ ಸಂಗಮ. ಇಲ್ಲಿ ಕ್ಯಾನ್ವಾಸ್ ಕಲಾಕೃತಿಯ ಪ್ರತೀಕವಾದರೂ ನಮ್ಮ ಸಮಾಜವೇ ಒಂದು ರೀತಿಯ ಕ್ಯಾನ್ವಾಸ್ ಎಂಬ ಚೌಕಟ್ಟು. ಈ ಬದುಕಿನ ಚೌಕಟ್ಟಿನ ಒಳಗೆ ಎಲ್ಲರದ್ದೂ ಒಂದು ರೀತಿಯ ಬಣ್ಣದ ಬದುಕು. ನಮ್ಮ ನಿತ್ಯ ದಿನಚರಿ, ಚಟುವಟಿಕೆಗಳಿಂದ ಸಮಾಜಕ್ಕೆ, ಪ್ರಕೃತಿಗೆ ಒಂದು ಕೊಡುಗೆಯನ್ನು ನೀಡಬೇಕಾದರೆ ನಮ್ಮ ಸೀಮಿತ ಚೌಕಟ್ಟಿನಿಂದ ವಾದ ಮತ್ತು ಪಾದಗಳನ್ನು ಹೊರಗಿಡಲೇಬೇಕು. ಇದರ ಪ್ರತಿ ರೂಪವಾಗಿ ಕ್ಯಾನ್ವಾಸ್ ನಿಂದ ಒಂದು ಕಡೆ ಕುಂಚ (ವಾದ…ತತ್ವ, ಸಿದ್ದಾಂತ) ಹೊರಗೆ ಬಂದಿರುತ್ತದೆ. ಇನ್ನೊಂದು ಕಡೆ ಹೆಜ್ಜೆ (ಪಾದ…ನಡೆ, ನಡತೆ) ಹೊರಗೆ ಬಂದಿರುತ್ತದೆ.
ಅಂದರೆ ಕಲಾಕ್ಷೇತ್ರದಲ್ಲಿ ಆಗಲಿ, ಸಮಾಜದಲ್ಲಾಗಲಿ ನಾವು ನಮ್ಮದೇ ಸೀಮಿತ ಬಣ್ಣ, ಬದುಕು ಎಂಬ ಚೌಕಟ್ಟಿನಲ್ಲಿ ಕಂಡು ಕೊಂಡದ್ದಕ್ಕಿಂತ, ನಾವು ಚೌಕಟ್ಟು ಮೀರಿ ಹೊರ ಆಯಾಮವನ್ನು ತಲುಪಲು ಪ್ರಯತ್ನಿಸಿದರೆ (ಖಾಸಗಿ ಬದುಕಿನಿಂದ ಸಾಮಾಜಿಕ ಬದುಕಿಗೆ) ಉತ್ತಮವಾದ ಕಲಾಕೃತಿಯನ್ನು ಮತ್ತು ಸಮಾಜವನ್ನು ರೂಪಿಸಬಹುದು ಎಂಬುದು ಈ ಲಾಂಛನದ ಒಳಾರ್ಥ.
ಅದೇ ರೀತಿ ಕರ ಪತ್ರದಲ್ಲಿ ಬಣ್ಣದ ಹುಡುಗಿಯೊಬ್ಬಳು ಸಂಭ್ರಮಿಸುತ್ತಿದ್ದಾಳೆ. ಆಕೆಯ ಮುಖ ಬಣ್ಣದ ಪಾಲೇಟ್ ಮತ್ತು ನೀರಿನ ಹೂಜಿ, ಕೈ, ಕಾಲುಗಳು ಕುಂಚ (ಚಿತ್ರ ಕಲಾ ಮೇಳ ಆಗಿರುವುದರಿಂದ) ಕೆಳಗಿನ ಪಾದದ ಕುಂಚಗಳಲ್ಲಿ ಹೆಜ್ಜೆ – ಗೆಜ್ಜೆ (ಈ ಪರ್ಬದಲ್ಲಿ ನೃತ್ಯವೂ ಇರುವುದರಿಂದ) ಉಟ್ಟ ಲಂಗವು ಶಿಲಾ ಹಾಸುಗಳ ಪ್ರತಿರೂಪ (ಈ ಪರ್ಬದಲ್ಲಿ ಶಿಲ್ಪ ಕಲೆಯೂ ಇರುವುದರಿಂದ) ಎದೆ ಭಾಗದಲ್ಲಿ ಕ್ಯಾಮೆರಾ ಲೆನ್ಸ್ (ಈ ಪರ್ಬದಲ್ಲಿ ಛಾಯಾ ಚಿತ್ರ ಪ್ರದರ್ಶನವೂ ಇರುವುದರಿಂದ) ಇದೆಲ್ಲರ ಪ್ರತೀಕವಾಗಿ ಈ ಚಿತ್ರವನ್ನು ರಚಿಸಲಾಗಿದೆ.
ಬನ್ನಿ ‘ಕಲಾ ಪರ್ಬ’ ನಿಮ್ಮದೇ…ಬಣ್ಣದ ಲೋಕದಲ್ಲಿ ಸಂಭ್ರಮಿಸೋಣ. ನಿಮ್ಮ ಬೆಂಬಲವೇ ಈ ಪರ್ಬದ ಯಶಸ್ಸು.