ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಕೊಮೆ ಇವರ ವತಿಯಿಂದ ಶ್ರೀ ಶನೇಶ್ವರ ದೇವಸ್ಥಾನದ ದೀಪೋತ್ಸವದ ಸಂದರ್ಭದಲ್ಲಿ ದಿನಾಂಕ 23 ನವೆಂಬರ್ 2024ರಂದು “ಸಿನ್ಸ್ 1999 ಶ್ವೇತಯಾನ -79” ಕಾರ್ಯಕ್ರಮದಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ‘ಭಕ್ತ ಸುಧನ್ವ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಂಡಿತು.
ಈ ಸಂದರ್ಭ ದೇಗುಲದ ಮೂಲ ಮನೆತನದವರಾದ ಕೃಷ್ಣ ಕಾಂಚನ್ ಕೊಮೆ ಇವರು ಅಭಿನಂದನೆ ಸಲ್ಲಿಸಿಕೊಂಡು ಮಾತನಾಡಿ “ಸಾಂಸ್ಕೃತಿಕ ಲೋಕಕ್ಕೆ ನಮ್ಮೂರ ಸಂಸ್ಥೆ ಅನರ್ಘ್ಯ ಕೊಡುಗೆ ಕೊಟ್ಟಿದೆ. ಮಕ್ಕಳ ಮೂಲಕ ಸಾಂಸ್ಕೃತಿಕವಾಗಿ ದೇಶಕ್ಕೇ ಹೊಸ ಭಾಷ್ಯ ಬರೆದ ಸಂಸ್ಥೆ ಯಶಸ್ವೀ ಕಲಾವೃಂದ. ಮಕ್ಕಳಿಗೆ ಅವಕಾಶವನ್ನು ನೀಡುತ್ತಾ ಬೆಳೆಸುವ ಸಂಸ್ಥೆಯನ್ನು ಸಮಾಜ ಪರಿಗಣಿಸಬೇಕು. ಸಾಧ್ಯವಾದಷ್ಟು ಅವಕಾಶವನ್ನು ಇಂತಹ ಸಂಸ್ಥೆಗೆ ನೀಡಬೇಕು. ಚಿಕ್ಕ ಚಿಕ್ಕ ಮಕ್ಕಳು ಪರಿಶುದ್ಧ ಯಕ್ಷ ಹೆಜ್ಜೆಯನ್ನು ರಂಗದಲ್ಲಿಡುತ್ತಾ ಕಲಾ ಪ್ರಪಂಚಕ್ಕೆ ದೊಡ್ಡ ಆಸ್ತಿಯಾಗಿ ದೊರೆಯುವಲ್ಲಿ ಸಂಶಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಆಡಳಿತ ಮಂಡಳಿಯ ಉಮೇಶ್ ಮತ್ತು ಮಂಜುನಾಥ ಕೊಮೆ, ದೇಗುಲದ ಅಧ್ಯಕ್ಷ ಗಣೇಶ್ ಅಮೀನ್, ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಗುರುಗಳಾದ ಲಂಬೋದರ ಹೆಗಡೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಕಲಾವೃಂದದ ಕಲಾವಿದರಿಂದ ‘ಭಕ್ತ ಸುಧನ್ವ’ ಯಕ್ಷಗಾನ ಪ್ರಸ್ತುತಗೊಂಡಿತು.