ಮಂಗಳೂರು : ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ದಿನಾಂಕ 20 ನವೆಂಬರ್ 2024ರಂದು ಇಂಟಾಕ್ ಮಂಗಳೂರು ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮೌಖಿಕ ಮಹಾಕಾವ್ಯಗಳ ರಚನೆಯಲ್ಲಿ ಸ್ಥಳೀಯ ಜ್ಞಾನದ ಪಾತ್ರ” ಕುರಿತು ಸಂವಾದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ “ಜಾನಪದವು ಸಂಸ್ಕೃತಿಯ ಅಮೂರ್ತವಾದ ಆದರೆ ಪ್ರಮುಖ ಭಾಗವಾಗಿದೆ. ಅದು ಸಾಮಾನ್ಯ ಜನರ ಅನುಭವಗಳು ಮತ್ತು ಬುದ್ಧಿವಂತಿಕೆಯನ್ನು ವ್ಯಕ್ತಪಡಿಸುತ್ತದೆ. ಅದನ್ನು ವಿಶೇಷ ಗಮನದಿಂದ ನೋಡಬೇಕಾಗಿದೆ. ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಜಾನಪದದ ಮಹತ್ವವನ್ನು ಹಾಗೂ ಜನಪದ ಸಾಹಿತ್ಯವು ಇತಿಹಾಸದಿಂದ ಹೇಗೆ ವಿಭಿನ್ನವಾಗಿದೆ ಎಂಬುದನ್ನು ವಿವರಿಸಿದರು. ಇತಿಹಾಸವು ಸಾಮಾನ್ಯವಾಗಿ ರಾಜರು ಮತ್ತು ಪ್ರಮುಖ ವ್ಯಕ್ತಿಗಳ ಸಾಧನೆಗಳನ್ನು ದಾಖಲಿಸಿದರೆ, ಜನಪದ ಸಾಹಿತ್ಯವು ಸಾಮಾನ್ಯ ಜನರ ಜೀವನವನ್ನು ಆವರಿಸುತ್ತದೆ ಮತ್ತು ಮೌಖಿಕ ಪರಂಪರೆಯ ಮೂಲಕ ಶ್ರಾವಣೀಯವಾಗಿ ಮುಂದುವರೆಯುತ್ತದೆ. ಜನಪದ ಸಾಹಿತ್ಯದಲ್ಲಿ ಗಾದೆಗಳು, ಹಾಡುಗಳು, ವಸ್ತು ಸಂಸ್ಕೃತಿ, ಆಚರಣೆಗಳು ಮತ್ತು ಪ್ರದರ್ಶನ ಕಲೆಯನ್ನು ಒಳಗೊಂಡಿದೆ. ತುಳು ಸಿರಿ ಕಾವ್ಯದಂತೆ ಅನೇಕ ಜನಪದ ಮಹಾಕಾವ್ಯಗಳು ನ್ಯಾಯ ಮತ್ತು ಬಂಡಾಯದ ತತ್ವಗಳ ಸುತ್ತ ಇರುತ್ತವೆ” ಎಂದು ವಿವರಿಸಿದರು.
ತುಳು ಸಿರಿ ಕಾವ್ಯದ ಪ್ರಖ್ಯಾತ ಕಲಾವಿದ ಮಾಚಾರು ಗೋಪಾಲ ನಾಯ್ಕ ಅವರ ಹಾಡುಗಳನ್ನು ದಾಖಲಿಸಿದ ತಮ್ಮ ಅನುಭವವನ್ನು ಡಾ. ಚಿನ್ನಪ್ಪ ಗೌಡ ಹಂಚಿಕೊಂಡರು. ಫಿನ್‌ಲ್ಯಾಂಡ್‌ನ ಜನಪದ ತಜ್ಞ ಲ್ಯೂರಿ ಹೋಂಕೋ ನೇತೃತ್ವದ ಈ ಯೋಜನೆಯಲ್ಲಿ ರೆಕಾರ್ಡಿಂಗ್‌ಗಳು ಒಂಬತ್ತು ದಿನಗಳಲ್ಲಿ 25 ಗಂಟೆಗಳ ಕಾಲ 15,683 ಸಾಲುಗಳಷ್ಟಿದ್ದವು. “ಗೋಪಾಲ ನಾಯ್ಕ ಅವರ ಪ್ರದರ್ಶನವು ಪ್ರೇಕ್ಷಕರನ್ನು ಅವಲಂಬಿತವಾಗಿದ್ದು, ಸಾಂದರ್ಭಿಕ ನಾವೀನ್ಯತೆ ಮತ್ತು ಸುಧಾರಣೆಗಳನ್ನು ಒಳಗೊಂಡಿತ್ತು. ಈ ರೀತಿಯ ಕಲಾವಿದರು ವಿಶಿಷ್ಟ ಸ್ಥಳೀಯ ಜ್ಞಾನ ಮತ್ತು ಪ್ರತಿಭೆಯನ್ನು ಹೊಂದಿದ್ದಾರೆ,” ಎಂದು ಅವರು ಹೇಳಿದರು.
ನೇಮಿರಾಜ್ ಶೆಟ್ಟಿ ಸ್ವಾಗತಿಸಿ, ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ವಂದಿಸಿದರು. ‘ವಿಶ್ವ ಪರಂಪರೆಯ ಸಪ್ತಾಹ’ದ ಕಾರ್ಯಕ್ರಮಗಳು 25 ನವೆಂಬರ್ 2024ರವರೆಗೆ ಮುಂದುವರಿಯಲಿವೆ. ವಿಶೇಷ ಆಕರ್ಷಣೆಯಾಗಿ ಉಳ್ಳಾಲ ಶ್ರೀನಿವಾಸ್ ಮಲ್ಯ ಅವರ ಪೂರ್ವಜರ ಪಾರಂಪರಿಕ ನಿವಾಸದ ಛಾಯಾಚಿತ್ರ ಪ್ರದರ್ಶನ ಮತ್ತು ಮಂಗಳೂರಿನ ಕಟ್ಟೆಗಳ ಕುರಿತ ಛಾಯಾಚಿತ್ರ ಪ್ರದರ್ಶನ ಕೊಡಿಯಾಲ್‌ಗುತ್ತು ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 11-00ರಿಂದ ಸಂಜೆ 7-00ರವರೆಗೆ ತೆರೆದಿರುತ್ತದೆ.