ಮುಳ್ಳೇರಿಯ : ಕನ್ನಡ ಭಾಷೆ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ ಇದರ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರ ಕಲಾವಿದ ಹಾಗೂ ಜಲವರ್ಣ ಮಾಂತ್ರಿಕ ಪುಂಡೂರು ಶಂಕರನಾರಾಯಣ ಪುಣ್ಚಿತ್ತಾಯ (ಪಿ. ಎಸ್. ಪುಣಿಂಚತ್ತಾಯ) ಅವರನ್ನು ಕಾರಡ್ಕ ಬಳಿಯಲ್ಲಿರುವ ಅವರ ನಿವಾಸ ಕಾಂಚನಗಂಗಾದಲ್ಲಿ ದಿನಾಂಕ 23 ನವೆಂಬರ್ 2024ರ ಶನಿವಾರದಂದು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಇದರ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಪಿ.ಎಸ್. ಪುಣಿಂಚತ್ತಾಯ ಮತ್ತು ಭಾರತಿ ಪುಣಿಂಚತ್ತಾಯ ದಂಪತಿಗೆ ಶಾಲು ಹೊದೆಸಿ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಎನ್. ಮುಡಿತ್ತಾಯ ಮಾತನಾಡಿ “ಜಲವರ್ಣ, ತೈಲವರ್ಣ ಎರಡರಲ್ಲೂ ಪಿ. ಎಸ್. ಪುಣ್ಚಿತ್ತಾಯರು ಅಪಾರ ಸಾಧನೆ ಮಾಡಿದ್ದಾರೆ. ಕಾಸರಗೋಡಿನ ಕೀರ್ತಿಯನ್ನು ದೇಶ ವಿದೇಶಗಳಿಗೆ ಪಸರಿಸಿದ್ದಾರೆ.” ಎಂದು ಹೇಳಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಪಿ. ಎಸ್. ಪುಣ್ಚಿತ್ತಾಯ ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡದ ಅವಗಣನೆಗೆ ಕಳವಳ ವ್ಯಕ್ತಪಡಿಸಿ, “ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕವು ಕಾಸರಗೋಡಿನ ಕನ್ನಡವನ್ನು ಇನ್ನಷ್ಟು ಎತ್ತರಕ್ಕೇರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು.” ಎಂದು ಕರೆ ನೀಡಿದರು.
ಕ. ಸಾ. ಪ. ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳೆ ವಂದಿಸಿದರು.