13-03-2023, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 2021 ನೇ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. 49 ವಿಭಾಗಗಳಿಗೆ ಆಯ್ಕೆಯಾದ 53 ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯದ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ದಾಮ್ಲೆ, ಸಾಹಿತಿ ಡಾ. ದೀಪಾ ಫಡ್ಕೆ, ಲೇಖಕಿ ಸ್ಮಿತಾ ಅಮೃತರಾಜ್, ಡಾ. ಮುರಳಿಮೋಹನ್ ಚೂಂತಾರು, ಬಿ. ಸತ್ಯವತಿ ಎಸ್.ಭಟ್ ಕೊಳಚಪ್ಪು, ರಾಜಶ್ರೀ ರೈ ಪೆರ್ಲ, ಡಾ. ಎಚ್. ಜೆ. ಶ್ರೀಧರ್ ಆ.ಬ್ರ.ಸಂತೋಷ ಕುಮಾರ್, ಶಾಂತಿನಾಥ ಕೆ.ಹೋತಪೇತಿ ಇವರ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಮಾರ್ಚ್ 12 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಸಮಾರಂಭವು ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸಿದರು.ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಇವರು ” ಕನ್ನಡ ಸಾಹಿತ್ಯ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು ಅದಕ್ಕೆ ತನ್ನದೇ ಆದ ಸ್ಥಾನವಿದೆ. ಸಾಹಿತ್ಯ ಕೃಷಿಯಲ್ಲಿ ತೊಡಗಿದವರಿಗೆ ವಿಶ್ವಮಾನವ ಸಂದೇಶದ ಕಲ್ಪನೆಗಳಿರಬೇಕು.” ಎಂದರು.
ಡಾ. ಚಂದ್ರಶೇಖರ ದಾಮ್ಲೆ ಅವರ “ನನ್ನ ಮಗಳು ತುಂಟಿ ಅಲ್ಲಾ” ಕೃತಿಗೆ ಡಾ. ಎ. ಎಸ್. ಧರಣೇಂದ್ರಯ್ಯ- ಮನೋವಿಜ್ಞಾನ ದತ್ತಿ ಪ್ರಶಸ್ತಿ, ದೀಪಾ ಫಡ್ಕೆಅವರ “ಮುಂದಣ ಹೆಜ್ಜೆ” ಕೃತಿಗೆ ಡಾ. ವೀಣಾ ಶಾಂತೇಶ್ವರ ದತ್ತಿ ಪ್ರಶಸ್ತಿ,ಸ್ಮಿತಾ ಅಮೃತ್ ರಾಜ್ ಸಂಪಾಜೆ ಅವರ “ನೆಲದಾಯ ಪರಿಮಳ” ಕೃತಿಗೆ ಗೌರಮ್ಮ ಹರ್ನಳ್ಳಿ ಕೆ. ಮಂಜಪ್ಪ ದತ್ತಿ ಪ್ರಶಸ್ತಿ, ಡಾ. ಮುರಲೀ ಮೋಹನ್ ಚೂಂತಾರು ಇವರ “ಸಂಗಾತಿ” ಕೃತಿಗೆ ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ದೊರೆತಿದೆ.