ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ಬ್ರಹ್ಮಾವರದ ಪ್ರದರ್ಶನ ಸಂಘಟನಾ ಸಮಿತಿ ಇವರ ಸಹಕಾರದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಮಹಾಭಿಯಾನವು ದಿನಾಂಕ 23 ನವೆಂಬರ್ 2024ರಂದು ಬ್ರಹ್ಮಾವರದಲ್ಲಿ ಉದ್ಘಾಟನೆಗೊಂಡಿತು.
ಉಡುಪಿ ಶಾಸಕರು, ಯಕ್ಷಶಿಕ್ಷಣ ಟ್ರಸ್ಟಿನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ರಘುರಾಮ ಮಧ್ಯಸ್ಥ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿ. ಭುಜಂಗ ಶೆಟ್ಟಿ, ಧನಂಜಯ ಅಮೀನ್, ಬಿ.ಎನ್. ಶಂಕರ ಪೂಜಾರಿ, ಮಾರಾಳಿ ಪ್ರತಾಪ್ ಹೆಗ್ಡೆ, ರಾಜೀವ್ ಕುಲಾಲ್, ನಿತ್ಯಾನಂದ ಬಿ.ಆರ್. ಭಾಗವಹಿಸಿದ ಸಮಾರಂಭದ ಆರಂಭದಲ್ಲಿ ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬ್ರಹ್ಮಾವರ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು.
ಯಕ್ಷಗಾನ ಕಲಾರಂಗದ ಕಾರ್ಯಕರ್ತರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು. ಸಭೆಯ ಬಳಿಕ ನಿರ್ಮಲ ಇಂಗ್ಲೀಷ್ ಮೀಡಿಯಂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮಂಜುನಾಥ್ ಕುಲಾಲ್ ನಿರ್ದೇಶನದಲ್ಲಿ ‘ಚಕ್ರವ್ಯೂಹ’ ಯಕ್ಷಗಾನ ಪ್ರದರ್ಶನಗೊಂಡಿತು. ದಿನಾಂಕ 31 ಡಿಸೆಂಬರ್ 2024ರ ತನಕ ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ 91 ಪ್ರೌಢಶಾಲೆಗಳ ಪ್ರದರ್ಶನಗಳು 11 ಕಡೆಯಲ್ಲಿ ಜರುಗಲಿದೆ.