ಉಡುಪಿ : ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿ -2025ಕ್ಕೆ ಈ ಬಾರಿ ಕನ್ನಡ ರಂಗಭೂಮಿಯ ಪ್ರಸಿದ್ಧ ರಂಗನಿರ್ದೇಶಕ, ನಟ, ರಂಗ ಶಿಕ್ಷಕ, ಸಂಘಟಕ ಡಾ. ಜೀವನ್ ರಾಂ ಸುಳ್ಯ ಇವರು ಆಯ್ಕೆಯಾಗಿದ್ದಾರೆ. ಜನವರಿ ತಿಂಗಳಲ್ಲಿ ನಡೆಯುವ ‘ಸಂಸ್ಕೃತಿ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ ರೂಪಾಯಿ 25,000 ನಗದಿನೊಂದಿಗೆ ಗೌರವಿಸಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್.ಪಿ.ಯವರು ತಿಳಿಸಿರುತ್ತಾರೆ.
ಡಾ. ಜೀವನ್ ರಾಂ ಸುಳ್ಯ ಕಿರು ಪರಿಚಯ
ಕರ್ನಾಟಕದ ಸೃಜನಶೀಲ ರಂಗನಿರ್ದೇಶಕರ ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಡಾ. ಜೀವನ್ ರಾಂ ಸುಳ್ಯ. ನಟ, ನಿರ್ದೇಶಕ, ರಂಗಭೂಮಿ ತಜ್ಞ, ಜನಪದ ಕಲಾವಿದ, ಯಕ್ಷಗಾನ ಪರಿಣತ, ಗಾಯಕ, ಸಂಗೀತ ವಾದ್ಯ ಪ್ರವೀಣ, ಸಂಘಟಕ, ಚಿತ್ರನಟ, ಚಿತ್ರ ಕಲಾವಿದ, ಕಲಾ ನಿರ್ದೇಶಕ, ಜಾದೂಗಾರ, ಸಾಕ್ಷ್ಯಚಿತ್ರ ನಿರ್ದೇಶಕ, ವಸ್ತ್ರವಿನ್ಯಾಸಕ ಇತ್ಯಾದಿ ರಂಗಗಳಲ್ಲಿ ತಮ್ಮ ಛಾಪು ಮೆರೆದವರು. ನೀನಾಸಂ ಪದವೀಧರರಾದ ಇವರು ಮಕ್ಕಳ ಮತ್ತು ಕಾಲೇಜು ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಇದ್ದು, ನೀನಾಸಂ ತಿರುಗಾಟದಲ್ಲಿ ಐದು ವರ್ಷ ಮುಖ್ಯ ನಟನಾಗಿ, ತಂಡದ ಸಂಚಾಲಕನಾಗಿ ದುಡಿದ ಹೆಗ್ಗಳಿಕೆ ಇವರದು. ಯಕ್ಷಗಾನ ಮತ್ತು ಜಾನಪದವನ್ನು ತನ್ನ ರಂಗಪ್ರಯೋಗಗಳಲ್ಲಿ ಸಮರ್ಥವಾಗಿ ಬಳಸಿಕೊಂಡು ರಂಗವಿನ್ಯಾಸ, ಬೆಳಕು ಸಂಯೋಜನೆ, ವಸ್ತ್ರವಿನ್ಯಾಸ, ಅಭಿನಯ, ಮಾತುಗಾರಿಕೆ, ರಂಗ ಪರಿಕರ, ಮುಖವಾಡ, ಸಂಗೀತ ಸಂಯೋಜನೆ, ಪ್ರಸಾಧನ, ರಂಗ ಸಂಘಟನೆ – ಹೀಗೆ ರಂಗಭೂಮಿಯ ಸರ್ವ ಪ್ರಕಾರಗಳಲ್ಲೂ ಪರಿಣತಿ ಪಡೆದ ಇವರು ನಿರ್ದೇಶಿಸಿದ ನಾಟಕಗಳು ಒಂದಕ್ಕಿಂತ ಒಂದು ಭಿನ್ನ. ಮಹಾಮಾಯಿ, ಚಾರುವಸಂತ, ಮೃಚ್ಛಕಟಿಕ, ಸೂರ್ಯಶಿಕಾರಿ, ಪರಶುರಾಮ, ಬರ್ಬರೀಕ, ಭಾಸಭಾರತ ಇತ್ಯಾದಿ 40ಕ್ಕಿಂತಲೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ ನಿಗರ್ವಿ ಕಲಾವಿದರಾದ ಇವರು ಜನಜಾಗೃತಿಗಾಗಿ ತಾನೇ ರಚಿಸಿ, ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಬೀದಿನಾಟಕ ಪ್ರದರ್ಶನಗಳ ಸಂಖ್ಯೆ ಒಟ್ಟು 3000ಕ್ಕಿಂತಲೂ ಅಧಿಕ.
“ಬಾಲಕಾರ್ಮಿಕತೆ ಮತ್ತು ಬಾಲ್ಯ ವಿವಾಹ ವಿರುದ್ಧದ ನಾಟಕವು ಅದೆಷ್ಟು ಪರಿಣಾಮ ಬೀರಿತೆಂದರೆ ಶಾಲೆಯಿಂದ ಹೊರಗುಳಿದು ಹೊಟೇಲ್, ಗ್ಯಾರೇಜ್, ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ 3,446 ಬಾಲಕಾರ್ಮಿಕ ಮಕ್ಕಳು ಮರಳಿ ಶಾಲೆಗೆ ಸೇರುವಂತಾಗಲು ಮತ್ತು 217ಕ್ಕೂ ಬಾಲ್ಯ ವಿವಾಹವನ್ನು ತಡೆಯಲು ಪ್ರಮುಖ ಅಸ್ತ್ರವಾದುದು ಒಂದು ದಾಖಲೆಯಾಗಿದೆ” ಎಂದು ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಸಂಯೋಜನಾಧಿಕಾರಿ ಕೆ. ರಾಘವೇಂದ್ರ ಭಟ್ ಹೇಳಿದ್ದಾರೆ. ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಜೇನುಕುರುಬರು, ಕೊರಗರು ಮುಂತಾದ ಬುಡಕಟ್ಟು ಜನಾಂಗದ ಸುಮಾರು 700ಕ್ಕಿಂತಲೂ ಹೆಚ್ಚು ಮಕ್ಕಳಿಗೆ ರಂಗ ಶಿಬಿರವನ್ನು ನಿರ್ದೇಶಿಸಿದ ಖ್ಯಾತಿಯ ಇವರು ರಾಜ್ಯದ ಅನೇಕ ಕಡೆಗಳಲ್ಲಿ ಶಿಕ್ಷಕರಿಗೆ, ಉಪನ್ಯಾಸಕರಿಗೆ ರಂಗಕಲಿಕಾ ಕಾರ್ಯಾಗಾರದ ನಿರ್ದೇಶನ ಮಾಡಿದ್ದಾರೆ. ಸುಳ್ಯದಲ್ಲಿ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿದ ಹೆಮ್ಮೆ ಸಾರ್ಥಕತೆ ಈ ಕಲಾವಿದನಿಗಿದೆ. ಕರ್ನಾಟಕ ಸರಕಾರದ ಯಕ್ಷ ರಂಗಾಯಣ ಕಾರ್ಕಳ ಇದರ ಪ್ರಪ್ರಥಮ ನಿರ್ದೇಶಕರಾದ ಇವರು ‘ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ’ ಅಲ್ಲದೆ ಸುಳ್ಯದ ‘ರಂಗಮನೆ ನಾಟಕ ಶಾಲೆ’, ‘ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ’ದ ಸ್ಥಾಪಕ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಇವರಿಗೆ 2022ನೇ ಸಾಲಿನ ಗೌರವ ಡಾಕ್ಟರೇಟ್ ನೀಡಿರುತ್ತದೆ. ಅಲ್ಲದೆ ರಂಗದಶಾವತಾರಿ, ರಂಗಮಾಂತ್ರಿಕ, ರಂಗಮಾಣಿಕ್ಯ, ಕಲಾಶ್ರೀ, ಬಾಲ ಸೇವಾರತ್ನ ಪುರಸ್ಕಾರ, ಸರಸ್ವತಿ ಪುರಸ್ಕಾರ, ಸಿ.ಜಿ.ಕೆ. ಪುರಸ್ಕಾರ, ಸುವರ್ಣ ರಂಗ ಸಮ್ಮಾನ್, ಕಾರ್ಕಳ ಸಾಹಿತ್ಯ ಸಂಘ ಸಮ್ಮಾನ, ಸೌರಭ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್, ಕಲಾ ಸಿಂಧು ಪುರಸ್ಕಾರ, ಆಳ್ವಾಸ್ ಮಕ್ಕಳ ಸಿರಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾಶ್ರೀ ಪ್ರಶಸ್ತಿ, ಅರೆಹೊಳೆ ರಂಗಭೂಮಿ ಪ್ರಶಸ್ತಿ, ಜಂಗಮ ಶೆಟ್ಟಿ ರಂಗ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ತನ್ನ ಅತ್ತುತ್ತಮ ನಿರ್ದೇಶನದ ಏಕಾಂಕ ಹಾಗೂ ಕಿರು ನಾಟಕಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸತತ 12 ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿ ದೊರೆತಿದ್ದು, ಸಿಕ್ಕ ಸನ್ಮಾನಗಳು ನೂರಾರು. ಇವೆಲ್ಲಾ ಇವರ ಸೃಜನಶೀಲ ರಂಗ ಚಟುವಟಿಕೆಗೆ ದೊರೆತ ಗೌರವ. ಕನ್ನಡ ಭಾಷೆ ಬಾರದ ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡವನ್ನು ಹೇಳಿಕೊಟ್ಟು ಅವರನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿಯೊಂದಿಗೆ ಅಂಗ ನ್ಯೂನತೆಯ ಮಕ್ಕಳು, ಬುದ್ದಿಮಾಂದ್ಯ ವಿಶೇಷ ಮಕ್ಕಳಿಗೂ ನಾಟಕ ಶಿಬಿರ ನಡೆಸಿ ಆತ್ಮ ಸ್ಥೈರ್ಯ ತುಂಬಿದವರು.
ಮಂಗಳೂರು ವಿ.ವಿ. ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕೇಂದ್ರದಲ್ಲಿ ಎರಡು ಸುಸಜ್ಜಿತ ಯಕ್ಷಗಾನ ಮ್ಯೂಸಿಯಂಗಳ ನಿರ್ಮಾಣ ಮಾಡಿದ ಇವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿ, ಕರ್ನಾಟಕ ಜಾನಪದ ಜಾತ್ರೆಯ ಜಿಲ್ಲಾ ಸಂಚಾಲಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ನಡೆದ ಸುಮಾರು 9 ಗಂಟೆಯ, 315 ಕಲಾವಿದರು ಭಾಗವಹಿಸಿದ, ರಾಷ್ಟ್ರ ಮಟ್ಟದಲ್ಲಿ ಬಹಳಷ್ಟು ಸುದ್ದಿ ಮಾಡಿದ ‘ಬಾಹುಬಲಿ ಪಂಚ ಮಹಾ ವೈಭವ’ ದೃಶ್ಯರೂಪಕದ ನಿರ್ದೇಶಕರಾದ ಇವರು ವಿಶ್ವ ತುಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ ‘ತುಳು ಗ್ರಾಮ’ದ ರಂಗನಿರ್ದೇಶಕ. ಕರ್ನಾಟಕ ಮಾತ್ರವಲ್ಲದೆ ದೆಹಲಿ, ಮುಂಬಯಿ, ವಾರಣಾಸಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಚಂಡೀಗಡ, ರಾಜಸ್ಥಾನ, ಮಣಿಪುರ ಹಾಗೂ ದುಬೈ, ಬೆಹರೈನ್, ಅಬುದಾಬಿ, ಮಸ್ಕತ್ ಮುಂತಾದೆಡೆಯೂ ಕಾರ್ಯಕ್ರಮ ನೀಡಿದ್ದು, ದೂರದರ್ಶನ ಆಕಾಶವಾಣಿಗಳಲ್ಲೂ ಇವರ ಅನೇಕ ನಾಟಕಗಳು ಬಿತ್ತರಗೊಂಡಿವೆ. ಕಳೆದ 24 ವರ್ಷಗಳಿಂದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಕಲಾ ಸೇವೆ ಮಾಡುತ್ತಿರುವ ಇವರು ತನ್ನ ವಾಸದ ಮನೆಯನ್ನೇ ಕಲಾಕ್ಷೇತ್ರವನ್ನಾಗಿಸಿದ ಅಪರೂಪದ ರಂಗಕರ್ಮಿ. 23 ವರ್ಷಗಳು ತುಂಬಿದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಅಧ್ಯಕ್ಷರಾಗಿದ್ದಾರೆ.