ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಸೋಂದಾ ಸ್ವರ್ಣವಲ್ಲಿ ಮಠ ಶಿರಸಿ ಹಾಗೂ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧಾ ಕಾರ್ಯಕ್ರಮ ದಿನಾಂಕ 23 ನವೆಂಬರ್ 2024 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕರು ಮಾತನಾಡಿ “ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಶ್ರೀಕೃಷ್ಣ ಸಂದೇಶ ಸಾರ್ವಕಾಲಿಕವಾದುದು. ಜೀವನವನ್ನು ಸಂತೋಷವಾಗಿ ನೋಡಬಲ್ಲ ಅಂತರಂಗ ದೃಷ್ಟಿಯನ್ನು ಜಗತ್ತಿಗೆ ತೋರಿಸಿದ ಭಗವದ್ಗೀತಾ ಸಂದೇಶ ವಿಶ್ವಮಾನ್ಯವಾದುದು. ಹಾಗಾಗಿ ನಾವು ನಮ್ಮ ಸನಾತನ ಧರ್ಮದ ರಕ್ಷಣೆಯ ಕರ್ತವ್ಯವನ್ನು ಅರಿತು ಗೀತೆಯ ಸಾರವನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡುವ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಕಾರ್ಯ ಸ್ತುತ್ಯರ್ಹವಾದುದು.” ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ “ಆಧುನಿಕ ಜಗತ್ತಿಗೆ ಭಗವದ್ಗೀತಾ ಸಂದೇಶದ ಮಹತ್ವವನ್ನು ತಿಳಿಯಪಡಿಸುತ್ತಿರುವ ಮಂಗಳೂರು ಸಂಸ್ಕೃತ ಸಂಘದ ಕಾರ್ಯ ಅಭಿನಂದನೀಯವಾದು.” ಎಂದು ತಿಳಿಸಿದರು.
ಶಾರದಾ ಪ. ಪೂ. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಕಾಶ ನಾಯಕ್ ಹಾಗೂ ಮಂಗಳೂರು ಸಂಸ್ಕೃತ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ. ಪಿ. ವಾಸುದೇವ ರಾವ್ ಹಾಗೂ ಶ್ರೀ ಭಗವದ್ಗೀತಾ ಅಭಿಯಾನದ ದ. ಕ. ಜಿಲ್ಲೆ ಇದರ ಸಂಚಾಲಕರಾದ ಡಾ. ಮಧುಕೇಶ್ವರ ಶಾಸ್ತ್ರಿ ಉಪಸ್ಥಿತರಿದ್ದರು. ಶ್ರೀಭಗವದ್ಗೀತಾ ಅಭಿಯಾನದ ಬಗ್ಗೆ ಶಾರದಾ ಪ. ಪೂ. ಕಾಲೇಜಿನ ಉಪನ್ಯಾಸಕ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿ ದ. ಕ. ಇದರ ತಾಲೂಕು ಸಂಚಾಲಕರಾದ ಶ್ರೀ ರಮೇಶ ಆಚಾರ್ಯ ನಾರಳ ಪ್ರಾಸ್ತವಿಕವಾಗಿ ಮಾತನಾಡಿದರು. ಮಂಗಳೂರು ಸಂಸ್ಕೃತ ಸಂಘದ ಅಧ್ಯಕ್ಷರಾದ ವಿದ್ವಾನ್ ಪೈಕ ವೆಂಕಟ್ರಮಣ ಭಟ್ ಸ್ವಾಗತಿಸಿ, ಶ್ರೀಮತಿ ದೀಕ್ಷಾ ಪ್ರಭು ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಶ್ರೀ ಶ್ರೀನಿವಾಸ ಮಧ್ಯಸ್ಥ ವಂದಿಸಿದರು.