ಮಂಗಳೂರು : ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಆಶ್ರಯದಲ್ಲಿ ಹಿರಿಯ ಲೇಖಕಿ ಅವರ ಲೇಖನಗಳ ಸಂಗ್ರಹ ‘ಸಾಹಿತ್ಯ ಕವಳ’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 24 ನವೆಂಬರ್ 2024ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ನಡೆಯಿತು.
ಕೃತಿ ಲೋಕರ್ಪಣೆಗೊಳಿಸಿದ ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಿಕೆ ಡಾ. ಶೈಲಾ ಯು. ಮಾತನಾಡಿ “ಸಾಹಿತ್ಯ ಕವಳವು ವಿಷಯ ವೈವಿಧ್ಯಗಳನ್ನು ಒಳಗೊಂಡ ಕೃತಿ. ಉತ್ತಮ ಸಂಘಟಕಿ, ಬರಹಗಾರ್ತಿ ಮತ್ತು ಉತ್ತಮ ಮನುಷ್ಯ ಜೀವಿಯೂ ಆಗಿರುವ ಚಂದ್ರಕಲಾ ಅವರು ಇಲ್ಲಿ ಹಿಂಜರಿಕೆಯಿಲ್ಲದೆ, ಯಾವುದೇ ಇಸಂ ಹಾಗೂ ಅಹಂ ಇಲ್ಲದೆ ಸ್ಥಿತಪ್ರಜ್ಞತೆಯಿಂದ ಸತ್ಯವನ್ನು ತಮ್ಮ ಬರವಣಿಗೆಯಲ್ಲಿ ಹೇಳಿದ್ದಾರೆ. ಅವರ ಬರವಣಿಗೆಯಲ್ಲಿ ಹೆಣ್ಣು – ಗಂಡಿನ ಸಮಾನತೆಯ ಅಪೇಕ್ಷೆಯಿದೆ. ಜೀವನವನ್ನು ವಾಸ್ತವವಾಗಿ ನೋಡುವ ಕ್ರಮವಿದೆ.” ಎಂದರು.
ಇದೇ ಸಂದರ್ಭದಲ್ಲಿ ಹೇಮಾಂಶು ಪ್ರಕಾಶನದ ವತಿಯಿಂದ ನೀಡಿಲಾದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರಕಾಶಕರಾದ ಕಲ್ಲೂರು ನಾಗೇಶ್ “ಬರಹಗಾರರು ತಮ್ಮ ಬರಹಗಳಿಗೆ ತಾವೇ ಓದುಗರ ಬಳಗವನ್ನು ಸೃಷ್ಟಿಸಬೇಕು.” ಎಂದರು. ಸಂಘದ ಅಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿ ಉಪಸ್ಥಿತರಿದ್ದರು.
ಜಾನಪದ ವಿದ್ವಾಂಸ ಹಾಗೂ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ. ವಾಮನ ನಂದಾವರ ಉಪಸ್ಥಿತರಿದ್ದರು. ಅರುಣಾ ನಾಗರಾಜ್ ಪ್ರಸ್ತಾವಿಸಿ, ಗುಣವತಿ ರಮೇಶ್ ನಿರೂಪಿಸಿ, ಆಕೃತಿ ಭಟ್ ಆಶಯಗೀತೆ ಹಾಡಿ, ಲೇಖಕಿ ಚಂದ್ರಕಲಾ ನಂದಾವರ ವಂದಿಸಿದರು.