ಕಾರ್ಕಳ : ಡಾ. ಸುಧಾಕರ ಶೆಟ್ಟಿ ಅಧ್ಯಕ್ಷರು ಅಜೆಕಾರು ಪದ್ಮಗೋಪಾಲ ಎಜ್ಯಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರು ಪ್ರಾಯೋಜಿಸಿದ ಪ್ರೊ. ಎಂ. ರಾಮಚಂದ್ರ ಸಂಸ್ಮರಣೆಯ ಉಡುಪಿ ಜಿಲ್ಲಾ ಉತ್ತಮ ‘ಯುವ ಸಾಹಿತಿ ಪ್ರಶಸ್ತಿ’ಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರದ ಎಚ್. ವಿಧಾತ್ರೀ ರವಿಶಂಕರ್ ಆಯ್ಕೆಯಾಗಿದ್ದಾರೆ. ಇವರ ಮೂರು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿದ್ದು, ನಾಲ್ಕನೆ ಪುಸ್ತಕ ‘ನಕ್ಷತ್ರ ಪಟಲ’ ಇದು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ. ಪ್ರಶಸ್ತಿ ಪ್ರದಾನವು ದಿನಾಂಕ 6 ಡಿಸೆಂಬರ್ 2024ರಂದು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ.
ಶ್ರೀಯುತ ರವಿಶಂಕರ್ ಎಚ್. ಆರ್.ಹಾಗೂ ವಸಂತಿ ರವಿಶಂಕರ್ ಇವರ ಪುತ್ರಿಯಾಗಿರುವ ವಿಧಾತ್ರೀ ರವಿಶಂಕರ್, ಸರಸ್ವತಿ ವಿದ್ಯಾಲಯ ಸಿದ್ದಾಪುರದ ಆರನೇ ತರಗತಿಯ ವಿದ್ಯಾರ್ಥಿನಿ. ಎರಡು ವರ್ಷದವಳಿದ್ದಾಗಲೇ ನೂರಾ ಒಂದು ಕೌರವರ ಹೆಸರು, ಅರವತ್ತು ಸಂವತ್ಸರಗಳು, ಮಳೆ ನಕ್ಷತ್ರಗಳು, ಸಂಸ್ಕೃತದ ಸುಭಾಷಿತಗಳು, 118 ಮೂಲವಸ್ತುಗಳು, 224 ವಿಧಾನಸಭಾ ಕ್ಷೇತ್ರಗಳು, ಶ್ರೀರಾಮನ ವಂಶವೃಕ್ಷ, ಹಿಂದೂಸ್ಥಾನದ ಪ್ರಾಚೀನ 56 ದೇಶಗಳು ಮತ್ತು ಭಗವದ್ಗೀತೆ ಶ್ಲೋಕಗಳನ್ನು ನಿರರ್ಗಳವಾಗಿ ಹೇಳಿ ಹಲವಾರು ಸಭೆ ಸಮಾರಂಭಗಳಲ್ಲಿ ಭೇಷ್ ಎನಿಸಿಕೊಂಡಿದ್ದಾಳೆ. ಏಕಪಾತ್ರಾಭಿನಯ , ಭಾಷಣ ಸ್ಪರ್ಧೆಗಳಲ್ಲಿ ತಾಲೂಕು , ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಈ ಪುಟ್ಟ ಚಿನಕುರಳಿ , ಕೊರೋನ ಲಾಕ್ಡೌನ್ ಸಮಯದಲ್ಲಿ ಕವನಗಳನ್ನು ಬರೆಯುವ ಹವ್ಯಾಸ ಪ್ರಾರಂಭಿಸಿದಳು. ಎಂಟನೇ ವಯಸ್ಸಿಗೆ ಮೂರನೇ ತರಗತಿಯಲ್ಲಿದ್ದಾಗ ಕನ್ನಡದಲ್ಲಿ “ಗುಬ್ಬಚ್ಚಿ” , ನಾಲ್ಕನೇ ತರಗತಿಯಲ್ಲಿದ್ದಾಗ ಇಂಗ್ಲೀಷ್ ನಲ್ಲಿ ‘ದ ಸಾಂಗ್ಸ್ ಆಫ್ ಸಿಂಡ್ರೆಲಾ’, ಐದನೇ ತರಗತಿಯಲ್ಲಿರುವಾಗ ‘ಮೈ ಫೇರಿ ವರ್ಲ್ಡ್’ ಎಂಬ ಸಣ್ಣ ಕತೆಗಳ ಮೂರು ಪುಸ್ತಕಗಳು ಇಂಗ್ಲೀಷ್ ನಲ್ಲಿ ಪ್ರಕಟಗೊಂಡಿದ್ದು, ಮತ್ತೆ ನಾಲ್ಕನೆಯ ಪುಸ್ತಕ ” ‘ನಕ್ಷತ್ರ ಪಟಲ’ ಕನ್ನಡದಲ್ಲಿ ಶಿಶು ಗೀತೆಗಳ ರೂಪದಲ್ಲಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ.
ಇವರ ಸಾಧನೆಗೆ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯ ಪ್ರಶಸ್ತಿ, ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳ ಬಾಲ ಪುರಸ್ಕಾರ ಪ್ರಶಸ್ತಿ, ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ, ‘ಕಿಡ್ಸ್ ಕಾರ್ನಿವಲ್’ ನಡೆಸುವ ರಾಷ್ಟ್ರ ಮಟ್ಟದ ‘ದ ಟ್ರೂ ಸ್ಟೋರಿ ಟೆಲ್ಲರ್’ ಪ್ರಶಸ್ತಿಗಳು ದೊರೆತಿವೆ. ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡಾ ವಿಭಾಗದಲ್ಲೂ ಆಸಕ್ತಿ ಹೊಂದಿರುವ ಈಕೆ ಉದ್ದ ಜಿಗಿತದಲ್ಲಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದ್ದಾಳೆ. ಭರತನಾಟ್ಯ ಸೀನಿಯರ್ ಪರೀಕ್ಷೆಗೆ ಅಭ್ಯಾಸ ಮಾಡುತ್ತಿರುವ ವಿಧಾಶ್ರೀ ಈಗ ಯಕ್ಷಗಾನ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ನಡೆಸುತ್ತಿದ್ದಾಳೆ. ಪತ್ರಿಕೆಗಳಲ್ಲಿರುವ ಪದಬಂಧ ಬಿಡಿಸುವುದು ಹಾಗೂ ತಾನೇ ಪದಬಂಧ ರಚಿಸುವುದು ಮೆಚ್ಚಿನ ಹವ್ಯಾಸ.