ಮಡಿಕೇರಿ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿತ ‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ’ಯು ದಿನಾಂಕ 30 ನವೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ ಇವರು ಮಾತನಾಡಿ “ಇಂಗ್ಲೀಷ್’ನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕಲಿಸುವುದರ ಜೊತೆ ಜೊತೆಯಲ್ಲಿ, ಅತ್ಯಂತ ಸಂಪದ್ಭರಿತವಾದ ಕನ್ನಡ ಭಾಷೆಯತ್ತ ಅವರಲ್ಲಿ ಆಸಕ್ತಿಯನ್ನು ಮೂಡಿಸುವ ಮೂಲಕ ಕನ್ನಡ ಭಾಷಾ ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯ ನಡೆಯಬೇಕಾಗಿದೆ. ಮಕ್ಕಳಲ್ಲಿ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸುವ ಹಂತದಲ್ಲೆ, ಕನ್ನಡ ಭಾಷೆಯ ಆಳವಾದ ಜ್ಞಾನವನ್ನು ಹೊಂದಿರುವ ಶಿಕ್ಷಕ ವರ್ಗದ ಮೂಲಕ, ಮಕ್ಕಳಲ್ಲಿ ಕನ್ನಡ ಭಾಷಾ ಸಂಸ್ಕೃತಿಯತ್ತ ಒಲವು ಮೂಡಿಸುವ ಪ್ರಯತ್ನ ಅತ್ಯವಶ್ಯವಾಗಿ ನಡೆಯಬೇಕು. ಕನ್ನಡದ ಮೌಲ್ಯ ಮತ್ತು ಬದುಕು ಅತ್ಯಂತ ದೊಡ್ಡದಾಗಿದ್ದು, ಇದನ್ನರಿತು ಕನ್ನಡಿಗರಾದ ನಾವೆಲ್ಲ ಒಂದೆನ್ನುವ ಭಾವವನ್ನು ಮನದಲ್ಲಿ ತುಂಬಿಕೊಂಡು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಬೇಕಾಗಿದೆ. ಎರಡು ಸಾವಿರ ವರ್ಷಗಳ ಶ್ರೀಮಂತ ಪರಂಪರೆಯ ಕನ್ನಡಕ್ಕೆ ಶಾಸ್ತ್ರೀಯವಾದ ಸ್ಥಾನ ಮಾನಗಳು ದೊರಕಿದೆಯಾದರೂ, ‘ಕನ್ನಡ’ವನ್ನು ತಮ್ಮದೆಂದು ಅಪ್ಯಾಯಮಾನವಾಗಿ ಅಪ್ಪಿಕೊಳ್ಳುವ ಮನಸ್ಥಿತಿಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಪರಂಪರೆಯನ್ನು ಮುಂದುವರೆಸುವ ಮಹತ್ವದ ಜವಾಬ್ದಾರಿ ಹೊಂದಿರುವ ಮಕ್ಕಳಲ್ಲಿ ಕನ್ನಡ ಭಾಷಾ ಸಂಸ್ಕೃತಿಯ ಒಲವನ್ನು ಮೂಡಿಸುವ, ಕನ್ನಡದ ಓದನ್ನು ಪ್ರೋತ್ಸಾಹಿಸುವ ಪ್ರಯತ್ನ ಅವಶ್ಯವಾಗಿ ನಡೆಯಬೇಕು. ಇಂತಹ ಮಹತ್ವದ ಚಿಂತನೆಗಳಡಿ ಜಿಲ್ಲಾ ಕ.ಸಾ.ಪ. ಶಾಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಮೆಚ್ಚುಗೆಯ ವಿಚಾರ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾತನಾಡಿ, “ಕನ್ನಡಿಗರಾದ ನಾವೆಲ್ಲ ನಮ್ಮ ಬದುಕಿನಲ್ಲಿ ನಾಲ್ಕು ಮಂದಿಗೆ ಕನ್ನಡವನ್ನು ಕಲಿಸಿದಲ್ಲಿ ಕನ್ನಡದ ಉದ್ಧಾರ ಸಾಧ್ಯವಾಗುತ್ತದೆ. ಪ್ರಸ್ತುತ ಬದುಕಿಗಾಗಿ ಕನ್ನಡ ನೆಲದಲ್ಲಿ ನೆಲೆ ನಿಂತ ಮಂದಿಯೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕಾದ ನಾವು, ಅವರ ಭಾಷೆಯಲ್ಲೇ ಮಾತನಾಡುವ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಇದನ್ನು ಮೀರಿ ನಮ್ಮೆಲ್ಲ ವ್ಯವಹಾರಗಳಲ್ಲಿ ಕನ್ನಡದ ಬಳಕೆಗೆ ಒತ್ತು ನೀಡುವಂತಾಗಬೇಕು” ಎನ್ನುವ ಆಶಯ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಮಾತನಾಡಿ, “ಕನ್ನಡ ಭಾಷಾ ಸಂಸ್ಕೃತಿ ಅತ್ಯಂತ ಶಕ್ತಿಯುತವಾದದ್ದು. ಇದರ ಬೆನ್ನೆಲುಬೆ ‘ಸಾಹಿತ್ಯ’ವೆಂದು ವ್ಯಾಖ್ಯಾನಿಸಿ, ಇಂದು ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಅಗತ್ಯ ಸ್ಪಂದನ ದೊರಕುತ್ತಿಲ್ಲವೆನ್ನುವ ಭಾವನೆ ಮೂಡುತ್ತಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಕನ್ನಡ ಭಾಷಾ ಸಂಸ್ಕೃತಿಯತ್ತ ಪ್ರತಿಯೊಬ್ಬರು ಹೃದಯವಂತಿಕೆಯನ್ನು ಮೆರೆದು, ಈ ನೆಲದ ಸಂಸ್ಕೃತಿಯ ಬೆಳವಣಿಗೆಗೆ ಮುಂದಾಗಬೇಕು” ಎಂದು ಕರೆ ನೀಡಿ “ಸ್ಪರ್ಧಾತ್ಮವಾದ ಈ ಯುಗದಲ್ಲಿ ಎಲ್ಲವೂ ತನ್ನದೆನ್ನುವ ಭಾವನೆ ಜಾಸ್ತಿಯಾಗಿದೆ. ಗಳಿಸಿದ್ದರಲ್ಲಿ ಒಂದಷ್ಟನ್ನು ಹಂಚುವ ಮನಸ್ಥಿತಿ ಇಲ್ಲವಾಗಿದೆ. ಎಲ್ಲರೂ ನಮ್ಮವರು ಎಂಬ ಭಾವನಾತ್ಮಕ ಸಂಬಂಧಗಳಿಂದ ದೂರ ಸರಿಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿ, ಇವುಗಳನ್ನು ಮೀರಿ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಡೆಯಲಿ” ಎಂದು ಶುಭ ಹಾರೈಸಿದರು.
ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರು ಹಾಗೂ ದತ್ತಿ ದಾನಿಗಳಾದ ಟಿ.ಪಿ. ರಮೇಶ್ ಮಾತನಾಡಿ, “ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲೇ ಕನ್ನಡೇತರರು ಅವರ ಭಾಷೆಗಳಲ್ಲೆ ವ್ಯವಹರಿಸುವುದನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಗಳಿಗೆ ಯಾರನ್ನೂ ನಾವು ದೂಷಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯ ಎಲ್ಲಾ ಭಾಷಿಗರಿಗೆ ನೆಲೆಯನ್ನು ನೀಡಿ, ಸಹೋದರತ್ವದಿಂದ ನೋಡುತ್ತಿರುವ ನೆಲವಾಗಿದೆ. ಇಲ್ಲಿನ ನೆಲ ಜಲವನ್ನು ಬಳಸುವ ಮಂದಿ ಇಲ್ಲಿನ ಭಾಷೆಯನ್ನು ಕಲಿಯುವ ಮತ್ತು ಗೌರವಿಸುವ ಮನಸ್ಥಿತಿಯನ್ನು ಹೊಂದಬೇಕು. ಪರಸ್ಪರ ಅನ್ಯೋನ್ಯತೆಯ ಮೂಲಕ ಕನ್ನಡವನ್ನು ನಾವಿಂದು ಬೆಳೆಸಬೇಕಾಗಿದೆ” ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ಮಾತನಾಡಿ, “ಬಳಗ ಮತ್ತು ಕ.ಸಾ.ಪ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡು ಸಂಘಟನೆಗಳು ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿದೆ” ಎಂದು ನುಡಿದರು.
ಸಮಾರಂಭದಲ್ಲಿ ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕ.ಸಾ.ಪ. ಪದಾಧಿಕಾರಿಗಳು ಕನ್ನಡ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ವೇದಿಕೆ ಕಾರ್ಯಕ್ರಮಗಳ ಬಳಿಕ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ‘ಜನಪದ ನೃತ್ಯ ಸ್ಪರ್ಧೆ’ ಅತ್ಯಾಕರ್ಷಕವಾಗಿ ಮೂಡಿ ಬಂದಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಮೈಕಲರ ಪ್ರೌಢಶಾಲೆ – ಪ್ರಥಮ, ಕೊಡಗು ವಿದ್ಯಾಲಯ – ದ್ವಿತೀಯ, ಜನರಲ್ ತಿಮ್ಮಯ್ ಪ್ರೌಢಶಾಲೆಯ ವಿದ್ಯಾರ್ಥಿಗಳು – ತೃತೀಯ ಸ್ಥಾನ ಪಡೆದರು. ಬ್ಲಾಸಂ ಪ್ರೌಢಶಾಲೆ, ಸಂತ ಜೋಸೇಫರ ಪ್ರೌಢಶಾಲೆ ಮತ್ತು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದರು. ಸಾಹಿತ್ಯ ಪರಿಷತ್ ಸದಸ್ಯರು ಕನ್ನಡ ಅಭಿಮಾನಿಗಳು ಸಾರ್ವಜನಿಕರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
2023-24ನೇ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಕೊಡಗು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪ. ಪೂರ್ವ ಕಾಲೇಜಿನ ಅದವಿಯ ಯು. ಎಂಬ ವಿದ್ಯಾರ್ಥಿನಿಗೆ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ದತ್ತಿ ನಿಧಿ ಪ್ರಶಸ್ತಿಯನ್ನು ಟಿ.ಪಿ. ರಮೇಶ್ ಪ್ರದಾನ ಮಾಡಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರ್, ನವೀನ್ ಅಂಬೇಕಲ್, ರೇವತಿ ರಮೇಶ್, ಭಾರತಿ ರಮೇಶ್, ಕಡ್ಲೇರ ತುಳಸಿ, ಜಲಜಾ ಶೇಖರ್, ಟಿ.ಜಿ. ಪ್ರೇಮಕುಮಾರ್, ಜೆ.ಸಿ.ಶೇಖರ್, ನಾಗರಾಜ್, ಕೆ.ವಿ.ಉಮೇಶ್, ವಿ.ಎ. ಮಂಜುನಾಥ್ ಸೇರಿದಂತೆ ವಿದ್ಯಾರ್ಥಿನಿಯ ಪೋಷಕರಾದ ಅಮೀನ ಕೆ.ಎ. ಮತ್ತು ಉಮ್ಮರ್ ಸಿ.ಎಂ. ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾ ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್ ಸ್ವಾಗತಿಸಿ, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮ ನಿರೂಪಿಸಿ, ವಿ.ಎ. ಮಂಜುನಾಥ್ ವಂದಿಸಿದರು.