ಮಂಗಳೂರು : ಕುದುರೆಮುಖ ಕನ್ನಡ ಸಂಘ ಹಾಗೂ ಕುದುರೆಮುಖ ಕ್ರೀಡಾ ಮತ್ತು ಮನೋರಂಜನಾ ಸಮಿತಿ ಇವರ ಸಹಯೋಗದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭವು ದಿನಾಂಕ 30 ನವೆಂಬರ್ 2024ರಂದು ಕಾವೂರು ನೆಹರೂ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿದ ಸಾಹಿತಿ ಹಾಗೂ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಕನ್ನಡ ಮಾಧ್ಯಮದಲ್ಲಿ ಕಲಿತ ಅದೆಷ್ಟೋ ಮಂದಿ ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಎಲ್ಲಿಯೂ ಅವರನ್ನು ಭಾಷೆಯ ತೊಡಕು ಕಾಡಲಿಲ್ಲ. ಈಗಲೂ ನಮ್ಮ ಮಾತೃಭಾಷೆ ಉಳಿದಿದ್ದರೆ ಅದು ಕನ್ನಡ ಶಾಲೆಗಳಿಂದಲೇ. ಕರ್ನಾಟಕ ಮರು ನಾಮಕರಣಗೊಂಡ ಸುವರ್ಣ ಸಂಭ್ರಮದಲ್ಲಾದರೂ ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಕನ್ನಡ ಶಾಲೆ, ವಿ.ವಿ.ಗಳನ್ನು ಸದೃಢಗೊಳಿಸಬೇಕು. ಕನ್ನಡಕ್ಕೆ ಗಡಿ ರೇಖೆಗಳಿಲ್ಲ; ಪಂಚ ದ್ರಾವಿಡ ಭಾಷೆಗಳಲ್ಲಿ ಅದು ಅತ್ಯಂತ ಶ್ರೀಮಂತವಾದುದು. ಹುಲುಸಾದ ಸಾಹಿತ್ಯ ಕೃಷಿಯೊಂದಿಗೆ ವಿಸ್ತಾರವಾದ ಜಾನಪದ ಹಾಗೂ ಮೌಖಿಕ ಪರಂಪರೆ ಕನ್ನಡದಲ್ಲಿದೆ. ಎಳೆಯ ತಲೆಮಾರು ಅದರಲ್ಲಿ ಆಸಕ್ತಿ ವಹಿಸುವಂತೆ ಮಾಡಬೇಕಾಗಿದೆ” ಎಂದು ಹೇಳಿದರು.
ಕೆ.ಐ.ಓ.ಸಿ.ಎಲ್. ಮುಖ್ಯ ಮಹಾ ಪ್ರಬಂಧಕ ಪಿ. ಪಳನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ನಾಡು – ನುಡಿ, ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಯಲ್ಲಪ್ಪ ಎಸ್. ಕಟ್ಟೀಮನಿ ಮತ್ತು ಕಂಪೆನಿಯ ರಾಷ್ಟ್ರೀಯ ಕ್ರೀಡಾಪಟು ಸುರೇಶ್ ಇವರುಗಳಿಗೆ ಕುದುರೆಮುಖ ಕನ್ನಡ ಸಂಘದ ‘ರಾಜ್ಯೋತ್ಸವ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಕೆ.ಎಸ್.ಆರ್.ಸಿ. ಅಧ್ಯಕ್ಷ ಯು. ಮನೋಹರ್, ಕುದುರೆಮುಖ ಕನ್ನಡ ಸಂಘದ ಗೌರವಾಧ್ಯಕ್ಷ ದೀಪಕ್ ಪೂಜಾರಿ ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ಹಾಗೂ ಆಡಳಿತ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಪರಿಸರದ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ‘ನೃತ್ಯ ವೈಭವ’ ಸಾಂಸ್ಕೃತಿಕ ಸ್ಪರ್ಧೆ ಜರಗಿತು. ಸುಮಾರು ಏಳು ತಂಡಗಳು ಭಾಗವಹಿಸಿದ್ದು ವಿಜೇತರಿಗೆ ನಗದು ಸಹಿತ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಸದಸ್ಯ – ಸದಸ್ಯೆಯರಿಂದ ನಾಡಗೀತೆ ಮತ್ತು ಜಾನಪದ ಗೀತೆಗಳ ಗಾಯನ ನೆರವೇರಿತು. ಕುದುರೆಮುಖ ಕನ್ನಡ ಸಂಘದ ಅಧ್ಯಕ್ಷ ಅವಿನಾಶ್ ಎನ್.ಎ. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವೈ.ಎಸ್. ಕಟ್ಟೀಮನಿ ವಂದಿಸಿ, ಕಾರ್ಯದರ್ಶಿ ತಾರಾನಾಥ ರೈ ಸಹಕರಿಸಿದರು. ಕನ್ನಡ ಸಂಘದ ಉಪಾಧ್ಯಕ್ಷ ದೇಜಪ್ಪ ಬಂಗೇರ ಮತ್ತು ಜಂಟಿ ಕಾರ್ಯದರ್ಶಿ ಗೀತಾ ಸಿ.ವಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.