ಉಡುಪಿ : ನಾಟಕಸ್ಪರ್ಧಾ ಸಮಿತಿ, ರಂಗಭೂಮಿ ಉಡುಪಿ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ. ಎಂ. ಎ. ಪೈ, ದಿ. ಎಸ್. ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ 45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ -2024 ಇದರ ಉದ್ಘಾಟನಾ ಸಮಾರಂಭವು ದಿನಾಂಕ 04 ಡಿಸೆಂಬರ್ 2024ರಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್ ಮಾತನಾಡಿ ನಾಟಕ, ಯಕ್ಷಗಾನದಲ್ಲಿ ನಟಿಸುವುದು ಅಷ್ಟು ಸುಲಭವಲ್ಲ. ಸಿನೆಮಾದಂತೆ ಇಲ್ಲಿ ರೀ ಟೇಕ್ ಸಾಧ್ಯವಿಲ್ಲ. ನಾಟಕ ವೀಕ್ಷಣೆಗೆ ಪ್ರೇಕ್ಷಕರ ಕೊರತೆಯಿರುವುದು ಬೇಸರ ತರಿಸುತ್ತಿದೆ. ಜನರು ನಾಟಕ ವೀಕ್ಷಿಸಲು ಬಂದು ಪ್ರೇರೇಪಿಸಬೇಕು. ನಾಟಕ ಕಲೆ ಉಳಿಸಿ, ಬೆಳೆಸುವಲ್ಲಿ ನಾಟಕ ಕಲೆಗಾರರು ಮಾತ್ರ ಮುಖ್ಯವಾಗುವುದಿಲ್ಲ. ಪ್ರೇಕ್ಷಕ ವರ್ಗ ತುಂಬಾ ಪ್ರಾಮುಖ್ಯ ಪಡೆಯುತ್ತದೆ. ನಾವೆಲ್ಲರೂ ನಾಟಕ ಕಲೆ ಉಳಿಸುವಲ್ಲಿ ಕೈ ಜೋಡಿಸಬೇಕು.” ಎಂದರು.
ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಮಾತನಾಡಿ “ರಂಗಭೂಮಿ ಜತೆಗೆ ಅವಿನಾಭವ ಸಂಬಂಧವಿರುವುದು ಖುಷಿ ನೀಡಿದೆ.” ಎಂದರು.ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂ. ಜಿ. ಎಂ. ಕಾಲೇಜು ಇದರ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ‘ರಂಗಭೂಮಿ ಉಡುಪಿ’ ಇದರ ಉಪಾಧ್ಯಕ್ಷರಾದ ರಾಜ್ ಗೋಪಾಲ್, ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಉಪಸ್ಥಿತರಿದ್ದರು. ಕುತ್ಪಾಡಿ ಶ್ರೀಪಾದ ಹೆಗ್ಡೆ ಸ್ವಾಗತಿಸಿ, ರವಿರಾಜ್ ನಾಯಕ್ ನಿರೂಪಿಸಿ, ವಿವೇಕಾನಂದ ಎನ್. ವಂದಿಸಿದರು.