ಬೆಂಗಳೂರು : ಡಾ. ಶಿವರಾಮ ಕಾರಂತರು ಯಕ್ಷಗಾನವನ್ನು ಪ್ರವೇಶಿಸಿದಾಗ ಅವರೊಂದಿಗೆ ದೊಡ್ಡಮಟ್ಟದಲ್ಲಿ ವಿದ್ಯಾವಂತರು, ನೌಕರರು, ಯಕ್ಷಗಾನ ಆಸಕ್ತರು, ಕೃಷಿಕರು ಯಕ್ಷಗಾನದತ್ತ ಹೊರಳಿದ್ದು ಯಕ್ಷಗಾನದ ಮಟ್ಟಿಗೆ ದೊಡ್ಡ ಬೆಳವಣಿಗೆ. ಇದು ಯಕ್ಷಗಾನವನ್ನು ವೃತ್ತಿರಂಗದ ಜೊತೆ ಜೊತೆಯಲ್ಲಿ ಹವ್ಯಾಸಿ ರಂಗಭೂಮಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟುವುದಕ್ಕೆ ನಾಂದಿಯಾಯಿತು. ಈ ಕಾರಣಕ್ಕೆ ನಮ್ಮ ಬಹುತೇಕ ಊರಿಗಳಲ್ಲಿ ಯಕ್ಷಗಾನಕ್ಕಾಗಿಯೇ ಸಂಘ ಸಂಸ್ಥೆಗಳು ಹುಟ್ಟಿಕೊಂಡು ಅದರಲ್ಲಿ ಕಲಾವಿದರಾಗಿ ಕಾಣಿಸಿಕೊಂಡು ವರ್ಷದಲ್ಲಿ ಅನೇಕ ಪ್ರಯೋಗಗಳನ್ನು ಪ್ರದರ್ಶನಗಳನ್ನು ಮಾಡುತ್ತಾ ತಮ್ಮ ಕಲಾರಾಧನೆಯನ್ನು ಮಾಡುತ್ತಾ ಬರುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. 80-90ರ ದಶಕದಲ್ಲಿ ಔದ್ಯೋಗಿಕ ವಲಯದಲ್ಲಿ ಉಂಟಾದಂತಹ ಕ್ರಾಂತಿಯ ಕಾರಣಕ್ಕೆ ಹಲವಾರು ಮಂದಿಗಳು ನಮ್ಮ ಊರುಗಳಿಂದ ಪಟ್ಟಣಗಳನ್ನು, ಬೇರೆ ಬೇರೆ ನಗರಗಳನ್ನು ಆಶ್ರಯಿಸಿ ಉದ್ಯೋಗ ವ್ಯವಹಾರಗಳನ್ನು ಮಾಡುತ್ತಾ ತಮ್ಮ ಜೀವನವನ್ನು ರೂಪಿಸಿಕೊಂಡರು. ಆದರೆ ಅವರೊಳಗಿದ್ದ ಕಲಾಪ್ರೇಮ, ಯಕ್ಷಗಾನದ ಬಗೆಗಿನ ಪ್ರೀತಿ ಒಂದಿನಿತು ಕಡಿಮೆಯಾಗಲಿಲ್ಲ. ತಾವು ಹೋದ ಸ್ಥಳದಲ್ಲಿಯೇ ಯಕ್ಷಗಾನ ಸಂಸ್ಥೆಗಳನ್ನು, ಸಂಘಗಳನ್ನು ಕಟ್ಟಿದರು, ಯಕ್ಷಗಾನವನ್ನು ಕಲಿತರು, ಬಣ್ಣ ಹಚ್ಚಿ ಕುಣಿದು ಸಂತೋಷವನ್ನು ಅನುಭವಿಸಿದರು. ಇದೆಲ್ಲ ಯಕ್ಷಗಾನದ ವಲಯವನ್ನು ವಿಸ್ತರಿಸುವ ಹೆಜ್ಜೆಗಳಾದವು. ಇಂತಹ ಬೆಳವಣಿಗೆಯಲ್ಲಿ ಎರಡು ಮುಖ್ಯವಾದ ಹೆಸರಿಸಬಹುದಾದ ನಗರಗಳೆಂದರೆ ಒಂದು ಮುಂಬೈ ಮತ್ತೊಂದು ಬೆಂಗಳೂರು ಎನ್ನಬಹುದು.
ಬೆಂಗಳೂರಿನಂತ ನಾಗಲೋಟದಲ್ಲಿ ಸಾಗುತ್ತಿರುವ ನಗರದಲ್ಲಿ, ಆಧುನಿಕತೆಯ ಜೊತೆಗೆ, ತನ್ನದೇ ಆದ ಸಾಂಸ್ಕೃತಿಕ, ವೈವಿದ್ಯವಾದ ಕಲಾ ಪಂರಂಪರೆ ಸಹಾ ಬೆಳೆಯುತ್ತಿದೆ. ಕಲೆ, ಕಲಾವಿದರ ಪ್ರೋತ್ಸಹದ ಜೊತೆಯಲ್ಲಿ, ಕಲೆಯನ್ನು ಕಲಿಯುವ ಮನಸ್ಸುಗಳು ಸೇರುತ್ತಿವೆ. ಕೆಲವರು ಹವ್ಯಾಸಿಕ್ಕಾಗಿ ಕಲಿತರೆ, ಕೆಲವರು ಉದ್ಯೋಗಕ್ಕಾಗಿ ಸ್ವೀಕರಿಸಿದವರು ಇದ್ದಾರೆ. ಬೆಂಗಳೂರಿನ ಯಕ್ಷಗಾನದ ಇತಿಹಾಸವನ್ನು ಗಮನಿಸುವಾಗ ಇಲ್ಲಿ ಆರಂಭವಾಗಿದ್ದು 1940ರಲ್ಲಿ. 1950ರ ಹಾಗೆ ಗಜಾನನ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದ ಹವ್ಯಾಸಿ ಯಕ್ಷಗಾನವನ್ನು ಕಟ್ಟಿಕೊಂಡು ಯಕ್ಷಗಾನವನ್ನು ಮಾಡುತ್ತಿದ್ದರು (ಯಕ್ಷಪಥ – ಡಾ. ಆನಂದರಾಮ ಉಪಾಧ್ಯ). ಅಲ್ಲಿಂದ ಇಲ್ಲಿಯವರೆಗೆ ಸುಮಾರು ಎಪ್ಪತ್ತು ಎಂಬತ್ತು ವರುಷಗಳಿಂದ ನಿತ್ಯ ನಿರಂತರವಾಗಿ ಯಕ್ಷಗಾನ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಯಕ್ಷ ಕಲರವ ಕೇಳಿಬರುತ್ತಿದೆ. ಚಂಡೆ ಮದ್ದಲೆ ಗಾನ ನಿನಾದಕ್ಕೆ, ಬಣ್ಣದ ಆಕರ್ಷಣೆಗೆ ಸೋತ ಮನಸ್ಸುಗಳು ಕಲೆಯನ್ನು ಕಲಾವಿದರನ್ನು ಬೆಳೆಸುತ್ತಿವೆ. ಬೆಂಗಳೂರಿನಲ್ಲಿ ಯಕ್ಷಗಾನವನ್ನು ಕಲಿತು ವೃತ್ತಿ ಮೇಳದಲ್ಲಿ ಕಲಾವಿದರಾಗಿ ಕಾಣಿಸಿಕೊಂಡ ಅನೇಕ ಮಂದಿಗಳನ್ನು ಕಾಣಬಹುದು. ಜೊತೆಗೆ ಯಕ್ಷಗಾನದ ಸಿದ್ದ ವಲಯವನ್ನು ಬಿಟ್ಟು ಮತ್ತೊಂದು ವಲಯದಿಂದ ಬಂದು ಯಕ್ಷಗಾನವನ್ನು ಕಲಿತು ಕಲಾವಿದರಾಗಿರುವುದು ಸಹ ಗಮನಾರ್ಹ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ರಾಜಗೋಪಾಲ ಕನ್ಯಾನ ಅವರು ಬೆಂಗಳೂರಿನಲ್ಲಿರುವ ಯಕ್ಷಗಾನ ಸಂಸ್ಥೆಯ ಬಗ್ಗೆ ಮಾಡಿರುವ ಅಧ್ಯಯನದಲ್ಲಿ 50ಕ್ಕೂ ಅಧಿಕ ಸಂಘ ಸಂಸ್ಥೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇಂದು ಇಡೀ ಯಕ್ಷಗಾನ ವಲಯದಲ್ಲಿ ಒಂದು ವರುಷಕ್ಕೆ ಹತ್ತು ಸಾವಿರ ಪ್ರದರ್ಶನಗಳು ನಡೆದರೆ, ಅದರಲ್ಲಿ ಬೆಂಗಳೂರಿನಲ್ಲಿ ಒಂದು ಸಾವಿರ ಪ್ರದರ್ಶನಗಳು ನಡೆಯುತ್ತಿವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಇದೆಲ್ಲ ಬೆಂಗಳೂರಿನಲ್ಲಿ ಯಕ್ಷಗಾನವು ಗಟ್ಟಿಯಾಗಿ ಬೆಳೆದಿರುವುದಕ್ಕೆ ಸಾಕ್ಷಿಗಳಾಗಿವೆ.
ಬೆಂಗಳೂರಿನ ಯಕ್ಷಪ್ರಿಯರಿಗೆ ಸಿಹಿ ಸುದ್ಧಿ ಒಂದಿದೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ವೃತ್ತಿರಂಗಭೂಮಿಯ ಯಕ್ಷಗಾನ ಕಲಾವಿದರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಹಸಗಳು ನಡೆದಿತ್ತು. ಆದರೆ ಇಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುವ ಹವ್ಯಾಸಿ ರಂಗಭೂಮಿಯ ಕಲಾವಿದರುಗಳನ್ನು ಅವರ ತಂಡಗಳನ್ನು ಒಂದೇ ವೇದಿಕೆಯಲ್ಲಿ ಕಾಣಿಸುವ ಪ್ರಯತ್ನಗಳು ಅಷ್ಟಾಗಿ ನಡೆಯಲಿಲ್ಲ ಎನ್ನಬಹುದು. ಈ ನಿಟ್ಟಿನಲ್ಲಿ ಟೀಮ್ ತಿತೈತೈ ತಂಡವು ನೂತನ ಪ್ರಯತ್ನವೆಂಬಂತೆ 80ಕ್ಕೂ ಹೆಚ್ಚು ಬೆಂಗಳೂರಿನ ಹವ್ಯಾಸಿ ಕಲಾವಿದರುಗಳನ್ನು, 20ಕ್ಕೂ ಹೆಚ್ಚು ತಂಡಗಳನ್ನು, 25ಕ್ಕೂ ಅಧಿಕ ಯಕ್ಷಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಬೆಂಗಳೂರಿನ ಯಕ್ಷ ತಂಡಗಳ ಸ್ನೇಹ ಕೂಡಾಟ ಮತ್ತು ಸ್ನೇಹ ಕೂಟ ಇದರ ವತಿಯಿಂದ ‘ಯಕ್ಷಗುರುಗಳ ಸಮ್ಮಿಲನ’ ಎಂಬ ಹೆಸರಿನಲ್ಲಿ ದಿನಾಂಕ 07 ಡಿಸೆಂಬರ್ 2024ರ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ರಾತ್ರಿಯ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದು ಬೆಂಗಳೂರಿನ ಮಟ್ಟಿಗೆ ಹೊಸ ಹೆಜ್ಜೆ. ಇಲ್ಲಿ ಪೂರ್ವರಂಗ(ತೆಂಕು) ಧರ್ಮಾಂಗಧ ದಿಗ್ವಿಜಯ, ಸೇತು ಬಂಧನ, ಕರ್ಣಾರ್ಜುನ ಕಾಳಗ, ದಕ್ಷ ಯಜ್ಞ, ಭಕ್ತ ಸುಧನ್ವ ಮತ್ತು ಮೀನಾಕ್ಷಿ ಕಲ್ಯಾಣ ಎಂಬ ಒಟ್ಟು ಆರು ಪೌರಾಣಿಕ ಆಖ್ಯಾನಗಳನ್ನು ಕಲಾವಿದರುಗಳು ಪ್ರಸ್ತುತಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಲಾವಿದರಾಗಿ ಪ್ರಿಯಾಂಕ ಮೋಹನ್, ನಿಹಾರಿಕ ಭಟ್, ರವೀಶ್ ಹೆಗಡೆ, ಎ.ಪಿ ಫಾಟಕ್, ಶಂಕರ್ ಬಾಳ್ಕುದ್ರು, ಸುಬ್ರಾಯ ಹೆಬ್ಬಾರ್, ಶಶಿರಾಜ ಸೋಮಯಾಜಿ, ಅಂಬರೀಷ್ ಭಟ್, ರವಿ ಮಡೋಡಿ, ನವೀನ್ ಶೆಟ್ಟಿ, ಪ್ರಶಾಂತ್ ವರ್ಧನ, ನಾಗಶ್ರೀ ಗೀಜಗಾರ್ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷ ಗುರುಗಳಾದ ಶಿವಕುಮಾರ್ ಬೇಗಾರ್, ಕೃಷ್ಣಮೂರ್ತಿ ತುಂಗ, ರಾಧಾಕೃಷ್ಣ ಉರಾಳ, ಶಂಕರ್ ಬಾಳ್ಕುದ್ರು, ಸುಬ್ರಾಯ ಹೆಬ್ಬಾರ್, ಪ್ರಸನ್ನ ಮಾಗೋಡು, ಪ್ರಸಾದ್ ಚೇರ್ಕಾಡಿ, ಮನೋಜ್ ಭಟ್, ಅರ್ಪಿತಾ ಹೆಗಡೆ, ಅಶ್ವಿನಿ ಕೊಂಡದಕುಳಿ, ಶ್ರೀನಿಧಿ ಹೊಳ್ಳ ಸೇರಿದಂತೆ ಮುಂತಾದವರನ್ನು ಗೌರವಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಟೀಮ್ ತಿತ್ತಿತೈ 6362673283 ಸಂಪರ್ಕಿಸಬಹುದು.
ರವಿ ಮಡೋಡಿ