ಹಾವಂಜೆ : ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾವನಾ ಪ್ರತಿಷ್ಠಾನ ಆಯೋಜಿಸುತ್ತಿರುವ ‘ಕನ್ನಡ ಶಾಲೆಯಲಿ ಕಾವಿಕಲೆಯ ಕಿಶೋರ ಕಾರ್ಯಾಗಾರ’ವು (ಕ.ಕಾ.ಕಿ. – 01) ಹಾವಂಜೆ ಕೀಳಂಜೆಯ ಬಿ.ವಿ. ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 10 ಡಿಸೆಂಬರ್ 2024ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಫೌಂಡೇಶನ್‌ನ ಅಧ್ಯಕ್ಷರಾದ ಹಾವಂಜೆ ಮಂಜುನಾಥ ರಾವ್ ಇವರು ಮಾತನಾಡಿ “ಕರಾವಳಿಯ ದೇಶೀಯ ಕಲೆಯಾದ ಅಳಿವಿನಂಚಿನಲ್ಲಿರುವ ಕಾವಿ ಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಶಾಲೆಗಳಲ್ಲಿ ಈ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮಲ್ಲಿನ ಪುರಾತನ ಜ್ಞಾನವನ್ನು ಮತ್ತೆ ಪುನರ್ ಮನನ ಮಾಡಿಕೊಳ್ಳುವ ಸಂದರ್ಭ ಇದು. ಸುಮಾರು ನೂರು ಶಾಲೆಗಳನ್ನಾದರೂ ಇದು ತಲಪುವಂತಾಗಲಿ” ಎಂಬುದಾಗಿ ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಜನಾರ್ದನ ಹಾವಂಜೆ “ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಮುಖವಾಗಿ ಹೈಸ್ಕೂಲು ಶಾಲಾ ಮಕ್ಕಳಿಗೆ ಕೇಂದ್ರೀಕರಿಸಿ ನಮ್ಮ ಸಾಂಪ್ರದಾಯಿಕ ಕಲೆಯ ತಿಳಿವಳಿಕೆ ನೀಡುವುದರ ಜೊತೆಗೆ ಇದನ್ನು ಚಿತ್ರ ಪದ್ಧತಿಯಾಗಿ ಬೆಳೆಸುವ ಪ್ರಯತ್ನ ಇದಾಗಿದ್ದು, ಆಯಾ ಶಾಲೆಯ ಭಾಗಗಳಲ್ಲಿನ ಸಹೃದಯರ ಸಹಕಾರದಿಂದ ಈ ಕಾರ್ಯಾಗಾರಗಳನ್ನು ನಡೆಸಲು ಯೋಜಿಸುತ್ತಿದ್ದೇವೆ. ಅಂತೆಯೇ ಕರ್ನಾಟಕಕ್ಕೆ ಜಿ.ಐ. ಟ್ಯಾಗ್ ಹೊಂದುವ ಯೋಜನೆಯೂ ಕೂಡ ಇದರ ಮೂಲಕ ಸಾಕಾರಗೊಳ್ಳಲಿದೆ” ಎಂಬುದಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಆನಂದ ಕಾರ್ನಾಡ್, ಹಾವಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯ ಕೋಟ್ಯಾನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸಖಾರಾಮ್ ಹೆಚ್. ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಜನಾರ್ದನ ಹಾವಂಜೆ, ವಿಕ್ರಮ್ ಸುವರ್ಣ ಹಾಗೂ ಆಶ್ಲೇಷ ಆರ್. ಭಟ್ ಕಾವಿ ಕಲೆಯ ವಿನ್ಯಾಸಗಳನ್ನು ಮಕ್ಕಳಿಗೆ ಕಲಿಸಿದರು. ಸಭಾ ಕಾರ್ಯಕ್ರಮವನ್ನು ಅಧ್ಯಾಪಕರಾದ ಸುಕೇಶ್ ಇವರು ನಿರ್ವಹಿಸಿದರಲ್ಲದೇ ಶಾಲಾ ಅಧ್ಯಾಪಕಿಯರು ಸಹಕರಿಸಿದರು.